ಬೆಂಗಳೂರು : ಕಾಂಗ್ರೆಸ್ ಶಾಸಕರಿಗೆ ನೀಡಿದಂತೆ ಪಕ್ಷದ ಪರಿಷತ್ ಸದಸ್ಯರಿಂದಲೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಬೇಡಿಕೆ ಬಂದಿದೆ. ಹೀಗಾಗಿ ಬಜೆಟ್‌ನಲ್ಲಿರುವ ಮೀಸಲಿಟ್ಟಿರುವ ₹8,000 ಕೋಟಿಗಳಲ್ಲಿ ಪರಿಷತ್ ಸದಸ್ಯರಿಗೂ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶಾಸಕ ಬೆನ್ನಲ್ಲೇ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯರ ಅಹವಾಲು ಆಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿಧಾನಸೌಧದಲ್ಲಿ ಪರಿಷತ್ ಸದಸ್ಯರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಜೆಟ್‌ನಲ್ಲಿ ಶಾಸಕರ ಕ್ಷೇತ್ರಗಳ ಅಭಿವೃದ್ದಿಗೆ ನೀಡಲು 8,000 ಕೋಟಿ ರು. ಹಣ ಮೀಸಲಿಟ್ಟಿದ್ದೇವೆ. ಅದರಲ್ಲಿ ಶಾಸಕರಿಗೆ ನೀಡುವಂತೆ ಪರಿಷತ್ ಸದಸ್ಯರಿಗೂ ಅನುದಾನ ನೀಡುತ್ತೇವೆ. ಆದರೆ ಇಷ್ಟೇ ಅನುದಾನ ನೀಡುತ್ತೇವೆ ಎಂದು ಹೇಳಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಜಿಲ್ಲಾ ಶಾಸಕರೊಂದಿಗೆ ಸಭೆ ನಡೆಸಿದ್ದೇವೆ. ಅದೇ ರೀತಿ ಬುಧವಾರ ಬೆಂಗಳೂರು ನಗರದ ಶಾಸಕರೊಂದಿಗೆ ಸಭೆ ನಡೆಸಲಾಗುವುದು ಎಂದೂ ಇದೇ ವೇಳೆ ಹೇಳಿದರು.
ಸಭೆಯಲ್ಲಿ ಅನುದಾನದ ಕೂಗು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ಮಂಗಳವಾರ ವಿಧಾನ ಪರಿಷತ್ತಿನ ಎಲ್ಲ ಕಾಂಗ್ರೆಸ್ ಸದಸ್ಯರೊಂದಿಗೆ ಸಿಎಂ ಸಭೆ ನಡೆಸಿದರು. ಈ ವೇಳೆ 27-28 ಮಂದಿ ಸದಸ್ಯರು ಹಾಜರಿದ್ದರು. ಈ ವೇಳೆ ನಿರೀಕ್ಷೆಯಂತೆ ಅನುದಾನದ ಕೂಗು ಕೇಳಿ ಬಂದಿದೆ.
ಶಾಸಕರಿಗೆ ಈಗಾಗಲೇ ತಲಾ ₹50 ಕೋಟಿ ನೀಡುವ ಭರವಸೆ ಕೊಟ್ಟಿದ್ದೀರಿ. ನಮ್ಮಲ್ಲೂ ಹಲವರು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿದ್ದರೆ, ಕೆಲವರು ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳಿಂದ ಬಂದಿದ್ದಾರೆ. ಒಬ್ಬ ಮೇಲ್ಮನೆ ಸದಸ್ಯರ ಕ್ಷೇತ್ರ ವ್ಯಾಪ್ತಿಯಲ್ಲಿ 300-400 ಗ್ರಾಪಂಗಳು ಬರುತ್ತವೆ. ಹಾಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಬೇಕು. ಇಂತಿಷ್ಟೇ ಕೊಡಿ ಅಂತ ನಾವು ಹೇಳುವುದಿಲ್ಲ. ಅದು ತಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಬೇಡಿಕೆ ಇಟ್ಟರು ಎಂದು ತಿಳಿದುಬಂದಿದೆ.
ಗ್ರಾಪಂ ಚುನಾವಣೆ ನಡೆಸಿ-ಎಂಎಲ್‌ಸಿ:
ಇದೇ ವೇಳೆ ಗ್ರಾಪಂಗಳ ಅವಧಿ ನಾಲ್ಕು ತಿಂಗಳಲ್ಲಿ ಮುಗಿಯಲಿದೆ. ಹೀಗಾಗಿ ಸರ್ಕಾರ ಸಕಾಲದಲ್ಲಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು. ಜತೆಗೆ ಗ್ರಾಮಠಾಣ ವ್ಯಾಪ್ತಿ ವಿಸ್ತರಣೆ ಮಾಡಬೇಕು. ಬಿಎಂಪಿಯಲ್ಲಿ ‘ಬಿ-ಖಾತಾ’ಗಳಿಗೆ ‘ಎ-ಖಾತಾ’ ಮಾನ್ಯತೆ ನೀಡಿರುವುದನ್ನು ಗ್ರಾಪಂ ಮಟ್ಟಕ್ಕೂ ವಿಸ್ತರಿಸಬೇಕು. ಇದರಿಂದ ಒಸಿ ಮತ್ತು ಸಿಸಿ ಸಮಸ್ಯೆ ಬಗೆಹರಿಯಲಿದೆ ಎಂದು ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಭೆಯಲ್ಲಿ ಮೇಲ್ಮನೆ ಸದಸ್ಯರು ಹಲವು ಸಮಸ್ಯೆಗಳು ಹೇಳಿಕೊಂಡಿದ್ದಾರೆ. ಕೆಲವರು ಅನುದಾನಕ್ಕೆ ಮನವಿ ಮಾಡಿದರು. ಅದಕ್ಕೆ ಸಿಎಂ ಅವರಿಂದ ಸ್ಪಂದನೆಯೂ ಸಿಕ್ಕಿದೆ.
- ಸಲೀಂ ಅಹಮದ್, ವಿಧಾನಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ.
ನೇಪಾಳದಲ್ಲಿರುವ 39 ಕನ್ನಡಿಗರ ಕರೆತನ್ನಿ: ಸಿದ್ದರಾಮಯ್ಯ ಸೂಚನೆನೇಪಾಳದಲ್ಲಿ ಭಾರೀ ಪ್ರತಿಭಟನೆ ಹಾಗೂ ಪ್ರಕ್ಷುಬ್ದ ವಾತಾವರಣ ನಡುವೆ ಕಾಠ್ಮಂಡುವಿನಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದ್ದಾರೆ.
ನೇಪಾಳ ಸರ್ಕಾರದ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿರುವ ಕ್ರಮ ವಿರೋಧಿಸಿ ರಾಜಧಾನಿ ಕಾಠ್ಮಂಡುವಿನಲ್ಲಿ ಭಾರೀ ಪ್ರತಿಭಟನೆ ಭುಗಿಲೆದ್ದಿದೆ. ವಿದ್ಯಾರ್ಥಿಗಳು-ಯುವಜನರು ಭಾರೀ ಪ್ರತಿಭಟನೆ ನಡೆಸುತ್ತಿರುವುದರಿಂದ ದೇಶಾದ್ಯಂತ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಪರಿಣಾಮ ಕಾಠ್ಮಂಡು ವಿಮಾನ ನಿಲ್ದಾಣದಲ್ಲಿ 39 ಮಂದಿ ಕನ್ನಡಿಗರು ರಾಜ್ಯಕ್ಕೆ ಹಿಂತಿರುಗಲಾಗದೆ ಸಿಲುಕಿಕೊಂಡಿದ್ದಾರೆ. ಅವರೆಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸಂಬಂಧಪಟ್ಟವರ ಜತೆ ಚರ್ಚಿಸಿ ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಅವರು ಮುಖ್ಯಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಸೂಚನೆ ಬೆನ್ನಲ್ಲೇ ಮುಖ್ಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜತಾಂತ್ರಿಕ ಪ್ರತಿನಿಧಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ನೇಪಾಳ ಸರ್ಕಾರ 26 ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ ನಂತರ ಬೀದಿಗಿಳಿದ ‘ಜೆನ್-ಝೆಡ್’ ಯುವಕರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿದೆ. ಹಿಂಸಾ ಪ್ರತಿಭಟನೆಯಲ್ಲಿ ಕನಿಷ್ಠ 14 ಸಾವು, ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ಪರಿಸ್ಥಿತಿ ನಿಯಂತ್ರಿಸಲು ರಾಜಧಾನಿಯಲ್ಲಿ ಸೇನೆ ನಿಯೋಜಿಸಲಾಗಿದ್ದು, ಪ್ರಮುಖ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಶಾಂತಿ ಕದಡುವುದೇ ಬಿಜೆಪಿ ಕೆಲಸ: ಸಿಎಂ
‘ಬಿಜೆಪಿಯವರು ಮದ್ದೂರು ಚಲೋ ಆದರೂ ಮಾಡಲಿ, ಏನು ಬೇಕಿದ್ದರೂ ಮಾಡಲಿ. ಸಮಾಜದಲ್ಲಿ ಶಾಂತಿ ಕದಡುವುದೇ ಬಿಜೆಪಿಯ ಉದ್ದೇಶ. ಗಲಭೆಯಲ್ಲಿ ಯಾವುದೇ ಪಕ್ಷ, ಸಮುದಾಯವರು ಇದ್ದರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಶಾಂತಿ ಕದಡುವುದೇ ಅವರ ಉದ್ದೇಶ. ಹಿಂದೆ ಮೈಸೂರಿನಲ್ಲಿ ಚಾಮುಂಡಿ ಬೆಟ್ಟ ಚಲೋ ಮಾಡಿದ್ದರು. ಆದರೆ ಪೊಲೀಸರು ಅವಕಾಶ ನೀಡಿರಲಿಲ್ಲ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ ಎಲ್ಲಾ ಕಡೆಯಿಂದಲೂ ಬಂದು ನೆಮ್ಮದಿ ಹಾಳು ಮಾಡುವುದು ಹಾಗೂ ಶಾಂತಿ ಕದಡುವುದು ಅವರ ಮುಖ್ಯ ಉದ್ದೇಶ ಎಂದು ಕಿಡಿಕಾರಿದರು.
ಮದ್ದೂರಿನ ಘಟನೆ ಬೆನ್ನಲ್ಲೇ 21 ಮಂದಿಯನ್ನು ಬಂಧಿಸಿದ್ದೇವೆ. ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಹೀಗಿದ್ದರೂ ಮದ್ದೂರು ಬಂದ್‌ಗೆ ಕರೆ ನೀಡಿದ್ದರು. ಯಾರು ಏನೇ ಮಾಡಲಿ ಜಾತಿ, ಧರ್ಮ ಪರಿಗಣಿಸದೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಶಾ ಎಲ್ಲಿ ಹೋಗಿದ್ದರು? - ಸಿಎಂ:
ಕಾನೂನು ಸುವ್ಯವಸ್ಥೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯದ ಕೆಲಸ. ದೆಹಲಿಯಲ್ಲಿ ನಡೆದ ರೈತರ ಚಳವಳಿಯಲ್ಲಿ ಎಷ್ಟು ಜನ ಸತ್ತರು? ಮಣಿಪುರದಲ್ಲಿ ಹಿಂಸಾಚಾರ ನಡೆದಾಗ ಅಮಿತ್ ಶಾ ಎಲ್ಲಿ ಹೋಗಿದ್ದರು? ಮಣಿಪುರಕ್ಕೆ ಯಾಕೆ ಪ್ರಧಾನಿಗಳು ಹೋಗಲಿಲ್ಲ? ಇದನ್ನು ಯಾಕೆ ಮಾಧ್ಯಮಗಳು ಪ್ರಶ್ನಿಸುವುದಿಲ್ಲ? ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.