ಸಿಎಂ ಒಂದು ಲಕ್ಷ ಮನೆ ಈಗ 1 ಲಕ್ಷ ರು. ಅಗ್ಗ: ಸರ್ಕಾರದಿಂದಲೇ ಪಾವತಿ

KannadaprabhaNewsNetwork | Published : Jul 26, 2024 1:39 AM

ಸಾರಾಂಶ

ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸಲು ಪ್ರತಿ ಮನೆಗೆ ಒಂದು ಲಕ್ಷ ರು.ನಂತೆ 121.53 ಕೋಟಿ ರು.ಗಳನ್ನು ಸರ್ಕಾರದಿಂದಲೇ ಭರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸಲು ಪ್ರತಿ ಮನೆಗೆ ಒಂದು ಲಕ್ಷ ರು.ನಂತೆ 121.53 ಕೋಟಿ ರು.ಗಳನ್ನು ಸರ್ಕಾರದಿಂದಲೇ ಭರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೂನಿಟ್ ವೆಚ್ಚ ಹೆಚ್ಚಳ ನಿರ್ಧಾರದಿಂದ ಆತಂಕಗೊಂಡಿದ್ದ 12,153 ಕುಟುಂಬಗಳ ಫಲಾನುಭವಿಗಳು ಮುಖ್ಯಮಂತ್ರಿಯವರ ಈ ನಿರ್ಧಾರದಿಂದ ನಿಟ್ಟುಸಿರು ಬಿಡುವಂತಾಗಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಯವರ ಕಚೇರಿಯಲ್ಲಿ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರದ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಮುಖ್ಯಮಂತ್ರಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.

ಸರ್ಕಾರದ ಈ ತೀರ್ಮಾನದಿಂದ ಸಬ್ಸಿಡಿ ಹೊರತುಪಡಿಸಿ ಸಾಮಾನ್ಯ ವರ್ಗ 7.50 ಲಕ್ಷ, ಎಸ್ಸಿ, ಎಸ್ಟಿ ಫಲಾನುಭವಿಗಳು 6.70 ಲಕ್ಷ ರು. ಕಟ್ಟಬೇಕಾಗುತ್ತದೆ. ಇದರಿಂದ 12,153 ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. ಈ ಹಿಂದೆ ಕ್ರಮವಾಗಿ 8.50 ಲಕ್ಷ ಹಾಗೂ 7.70 ಲಕ್ಷ ರು. ಕಟ್ಟಬೇಕಿತ್ತು ಎಂದು ವಸತಿ ಸಚಿವ ಜಮೀರ್‌ ಅಹಮದ್‌ಖಾನ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿ ಅವರ ಒಂದು ಲಕ್ಷ ಮನೆ ಯೋಜನೆಗೆ 2017ರ ಸೆಪ್ಟೆಂಬರ್ 23 ರಂದು ಅಧಿಸೂಚನೆ ಹೊರಡಿಸಿ ಘಟಕ ವೆಚ್ಚ 6 ಲಕ್ಷ ರು.ನಿಗದಿ ಮಾಡಲಾಗಿತ್ತು. ಕೇಂದ್ರ ಸರ್ಕಾರ 1.50 ಲಕ್ಷ, ರಾಜ್ಯ ಸರ್ಕಾರ ಸಾಮಾನ್ಯ ವರ್ಗಕ್ಕೆ 1.20 ಲಕ್ಷ, ಎಸ್ಸಿ, ಎಸ್ಟಿ ವರ್ಗಕ್ಕೆ 2 ಲಕ್ಷ ರು. ಕೊಡುವುದೆಂದು ನಿಗದಿಯಾಗಿತ್ತು. ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಸರ್ಕಾರದಲ್ಲಿ ಘಟಕ ವೆಚ್ಚ 10.60 ಲಕ್ಷ ರು. ನಿಗದಿ ಮಾಡಲಾಗಿತ್ತು. ಇದಕ್ಕೆ 60 ಸಾವಿರ ರು. ಜಿಎಸ್ಟಿ ಸೇರಿ 11.20 ಲಕ್ಷ ರು. ಕೊಡಬೇಕಿತ್ತು.

Share this article