ಅಹಂ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಿ : ಸಿಎಂ ತಾಕೀತು

KannadaprabhaNewsNetwork |  
Published : Jun 01, 2025, 01:46 AM ISTUpdated : Jun 01, 2025, 06:26 AM IST
ಸಿಎಂ ಡಿಸಿಎಂ | Kannada Prabha

ಸಾರಾಂಶ

ಅಧಿಕಾರಿಗಳು ಯಾವುದೇ ಅಹಂ ಬಿಟ್ಟು, ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಕಾರ್ಯದರ್ಶಿಗಳ ಜತೆಗೆ ಸಮನ್ವಯದೊಂದಿಗೆ ಕೆಲಸ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

 ಬೆಂಗಳೂರು : ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ, ಜಿಲ್ಲೆಯ ಅಭಿವೃದ್ಧಿ ಕಾರ್ಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜವಾಬ್ದಾರಿ. ಈ ಮೂವರೂ ಅಧಿಕಾರಿಗಳು ಯಾವುದೇ ಅಹಂ ಬಿಟ್ಟು, ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಕಾರ್ಯದರ್ಶಿಗಳ ಜತೆಗೆ ಸಮನ್ವಯದೊಂದಿಗೆ ಕೆಲಸ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಡಿಸಿ, ಎಸ್‌ಪಿ ಮತ್ತು ಸಿಇಒಗಳೊಂದಿಗೆ ಶುಕ್ರವಾರ ಮತ್ತು ಶನಿವಾರ 18 ಗಂಟೆಗಳ ಕಾಲ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಶನಿವಾರ ಸಭೆಯ ಕೊನೆಯಲ್ಲಿ ಇಗೋ ಇಲ್ಲದೆ ರಾಜ್ಯದ ಅಭಿವೃದ್ಧಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲೂ ಈ ಬಗ್ಗೆ ಮಾಹಿತಿ ನೀಡಿದರು.

‘ನಾವು ಅಧಿಕಾರಕ್ಕೆ ಬರುವ ಮುನ್ನ ಏನು ಬದಲಾವಣೆ ತರುತ್ತೇವೆ ಎಂದು ಹೇಳಿದ್ದೆವೋ ಅದನ್ನು ಜಾರಿಗೊಳಿಸುವುದು ನಮ್ಮ ಹೊಣೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ನಿಮ್ಮ ಹೊಣೆ. ಪ್ರಣಾಳಿಕೆಯಲ್ಲಿ ನಾವು ನೀಡಿದ್ದ 533 ಭರವಸೆಗಳ ಪೈಕಿ 242 ಅನ್ನು ಈಗಾಗಲೇ ಈಡೇರಿಸಿದ್ದೇವೆ. ಅವುಗಳ ಸಮರ್ಪಕ ಜಾರಿಗೆ ಕ್ರಮ ವಹಿಸಿ. ಜನರ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಮೂಲ ಸೌಲಭ್ಯಗಳು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಿ. ನಿಮ್ಮ ಹೆಜ್ಜೆ ಗುರುತು ಜಿಲ್ಲೆಯಲ್ಲಿ ಮೂಡುವಂಥ ಕಾರ್ಯ ನೀವು ಮಾಡಿ’ ಎಂದು ತಿಳಿಸಿದ್ದಾರೆ.

‘ಜಿಲ್ಲಾಧಿಕಾರಿಗಳು ಜನಸಾಮಾನ್ಯರ ಬಗ್ಗೆ ಕೇವಲ ಅನುಕಂಪವಲ್ಲ (ಸಿಂಪಥಿ) ಸಹಾನುಭೂತಿ (ಎಂಪಥಿ)ಯನ್ನೂ ಬೆಳೆಸಿಕೊಳ್ಳಬೇಕು. ಪತ್ರಿಕೆಗಳಲ್ಲಿ ಬರುವ ಟೀಕೆಗಳು, ವರದಿಗಳಿಗೆ ತಕ್ಷಣ ಸ್ಪಂದಿಸಬೇಕು. ಇದರಿಂದ ಜನಸಾಮಾನ್ಯರ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ತಂತ್ರಜ್ಞಾನವು ಜನಸಾಮಾನ್ಯರ ಗರಿಷ್ಠ ಹಿತಕ್ಕೆ ಬಳಕೆಯಾಗುವಂತೆ ನೋಡಿಕೊಳ್ಳಿ. ಎಲ್ಲಾ ಜಿಲ್ಲೆಗಳಲ್ಲೂ ಕಾನೂನು, ವ್ಯವಸ್ಥೆ ಸರಿಯಾಗಬೇಕು. ಸಂವಿಧಾನದ ಆಶಯ ಮತ್ತು ಧ್ಯೇಯೋದ್ದೇಶಗಳಿಗೆ ಭಂಗ ತರುವ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಿ. ಬಾಲ್ಯವಿವಾಹದಂಥ ಪಿಡುಗುಗಳು ಇನ್ನೂ ಜೀವಂತವಾಗಿವೆ. ಅವುಗಳನ್ನು ಸಂಪೂರ್ಣ ನಿಯಂತ್ರಿಸಲು ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದ್ದಾರೆ. ===ಎಸ್ಸೆಸ್ಸೆಲ್ಸಿ ಕಡಿಮೆ ಫಲಿತಾಂಶ:

ಅಧಿಕಾರಿಳಿಗೆ ಸಿಎಂ ‘ಕ್ಲಾಸ್‌‘!

 ಕಮ್ಮಿ ಫಲಿತಾಂಶ ಬಂದ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್‌

ಬೆಂಗಳೂರು: ಕಳೆದ 2 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನೋಟಿಸ್‌ ನೀಡಬೇಕು. ಅವರ ಉತ್ತರ ಸಮರ್ಪಕ ಅನ್ನಿಸದಿದ್ದರೆ ಕ್ರಮ ಕೈಗೊಳ್ಳಬೇಕು, ಬರುವ ಸಾಲಿನಲ್ಲಿ ಗ್ರೇಸ್‌ ಅಂಕ ನೀಡದೆ ಶೇ.75ರಷ್ಟು ಫಲಿತಾಂಶ ಬರುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಈ ವರ್ಷವೂ ಎರಡು ಲಕ್ಷದಟ್ಟು ಮಕ್ಕಳ ದಾಖಲಾತಿ ಕಡಿಮೆಯಾಗಿದೆ. ಇದನ್ನು ತಡೆಯಲು ಪೋಷಕರೊಂದಿಗೆ ನಿಯಮಿತ ಸಭೆ ನಡೆಸಬೇಕು. ಬಿಇಒಗಳು ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡಬೇಕು. ಡಿಡಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ದಾಖಲಾತಿ ಹೆಚ್ಚಳಕ್ಕೆ ಕ್ರಮ ವಹಿಸಬೇಕು.

PREV
Read more Articles on

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ