ಚಿತ್ರದುರ್ಗ: ಚುನಾವಣೆ ಬಂದಾಗ ಸಮುದಾಯದ ಜನ ಯಾವ ಪಕ್ಷದಲ್ಲಾದರೂ ಇರಿ, ಯಾವುದೇ ಪಕ್ಷದ ಪರವಾಗಿ ಕಾರ್ಯನಿರ್ವಹಿಸಿ. ನಮಗದು ಸಂಬಂಧವಿಲ್ಲ . ಆದರೆ ಸಮುದಾಯದ ಸಂಘಟನೆ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಇರಬೇಕೆಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಡಾ.ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಹೇಳಿದರು.ಚಿತ್ರದುರ್ಗ ತಾಲೂಕಿನ ಮಾಡನಾಯಕನಹಳ್ಳಿಯಲ್ಲಿ ಶನಿವಾರ ವಾಲ್ಮೀಕಿ ಯುವಕರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಸರ್ಕಾರಗಳು ವಾಲ್ಮೀಕಿ ಜನಾಂಗಕ್ಕೆ ಅನ್ಯಾಯ ಮಾಡುತ್ತಿವೆ. ಸಮುದಾಯದ ಹಿತಾಸಕ್ತಿಗೆ ಧಕ್ಕೆ ಬಂದರೆ ಸುಮ್ಮನಿರಲ್ಲ. ಹಾಗೆಯೇ ಎಲ್ಲರೂ ದನಿಗೂಡಿಸಬೇಕೆಂದರು. ಜಾತಿ ಜನಸಂಖ್ಯೆಗನುಗುಣವಾಗಿ ಎಲ್ಲರಿಗೂ ಮೀಸಲಾತಿ ಕೊಡಬೇಕೆಂದು ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರಮೋದಿ ಮುಂದುವರೆದ ಜನಾಂಗ ಕೇಳದಿದ್ದರೂ ಶೇ.10 ರಷ್ಟು ಮೀಸಲಾತಿ ಕೊಟ್ಟರು. ಅದೇ ನಾವುಗಳು ಹೋರಾಟ, ಪಾದಯಾತ್ರೆ ನಡೆಸಿದ ಫಲವಾಗಿ ರಾಜ್ಯ ಸರ್ಕಾರ ಶೇ.ಮೂರಷ್ಟಿದ್ದ ಮೀಸಲಾತಿಯನ್ನು ನಾಲ್ಕಕ್ಕೆ ಹೆಚ್ಚಿಸಿತು. ಇದರಿಂದ ಮಕ್ಕಳ ಶಿಕ್ಷಣ ಉದ್ಯೋಗಕ್ಕೆ ಅನುಕೂಲವಾಗಲಿದೆ ಎಂದರು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕವಾಗಿ ಮುಂದೆ ಬರಲು ಎಲ್ಲಾ ಸಮುದಾಯಗಳು ಸಂಘಟನೆಯಾಗುತ್ತಿವೆ. ಲಿಂಗಾಯಿತ ಸಮಾಜ ಬಸವಣ್ಣನವರ ಹೆಸರಲ್ಲಿ, ಹಾಲುಮತ ಸಮಾಜ ಕನಕದಾಸರ ಹೆಸರಿನಲ್ಲಿ, ದಲಿತರು ಅಂಬೇಡ್ಕರ್ ಹೆಸರಿನಲ್ಲಿ ಸಂಘಟನೆಯಾಗುತ್ತಿರುವಂತೆ ನಾಯಕ ಸಮಾಜ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಸಂಘಟನೆಯಾಗುತ್ತಿದೆ. ರಾಜ್ಯದಲ್ಲಿ ಐವತ್ತರಿಂದ ಅರವತ್ತು ಲಕ್ಷದಷ್ಟು ನಾಯಕ ಜನಾಂಗದವರಿದ್ದು, ಮೀಸಲಾತಿ ಹೆಚ್ಚಿಸಿಕೊಳ್ಳಲು 31 ವರ್ಷಗಳ ಕಾಲ ಹೋರಾಟ ಮಾಡಬೇಕಾಯಿತು ಎಂದು ನೋವು ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷ್ ಸರ್ಕಾರ ವಾಲ್ಮೀಕಿ ಜನಾಂಗಕ್ಕೆ ಕ್ರಿಮಿನಲ್ ಟ್ರೈಬ್ಸ್ ಎಂಬ ಹಣೆಪಟ್ಟಿ ಕಟ್ಟಿತು. ನಂತರ ಬೇಡರು ಕ್ರಿಮಿನಲ್ ಟ್ರೈಬ್ಸ್‌ಗಳಲ್ಲ ಎಂದು ಹಿಂದುಳಿದ ವರ್ಗಕ್ಕೆ ಸೇರಿಸಲಾಯಿತು. ಅನೇಕ ಹಿರಿಯರ ಹೋರಾಟದ ಪರಿಣಾಮವಾಗಿ ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಯಾಯಿತು. 2006ರಲ್ಲಿ ಕುಲದೀಪ್ ಸಿಂಗ್ ಆಯೋಗದಂತೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿತು. ಸಮಾಜದ ಬಗ್ಗೆ ಯಾರಲ್ಲಿ ಕಳಕಳಿಯಿರುತ್ತದೋ ಅವರುಗಳು ನಿಜವಾದ ಯುವಕರು. ನಾಯಕ ಸಮಾಜಕ್ಕೆ ಎಲ್ಲಿಯೇ ಅನ್ಯಾಯವಾಗಲಿ ಅಲ್ಲಿಗೆ ಹೋಗಿ ನ್ಯಾಯ ದೊರಕಿಸಬೇಕು. ಎಲ್ಲಾ ಜಾತಿಯಲ್ಲಿನ ಬಡವರು, ಶೈಕ್ಷಣಿಕವಾಗಿ ಹಿಂದುಳಿದವರ ಪರವಾಗಿ ನಿಲ್ಲಬೇಕೆಂದು ವಾಲ್ಮೀಕಿ ಯುವಕರ ಸಂಘಕ್ಕೆ ಸ್ವಾಮೀಜಿ ಮನವಿ ಮಾಡಿದರು. ಯುವಕರು ಕುಡಿತದ ಚಟಕ್ಕೆ ಬಲಿಯಾಗಬಾರದು. ವಾಲ್ಮೀಕಿ ಜಯಂತಿಯಂದು ಮಾಂಸಾಹಾರ ಸೇವಿಸಿದರೆ ಮಹರ್ಷಿ ವಾಲ್ಮೀಕಿಗೆ ಅವಮಾನ ಮಾಡಿದಂತಾಗುತ್ತದೆ. ಪ್ರತಿ ತಿಂಗಳ ಹುಣ್ಣಿಮೆಯಂದು ವಾಲ್ಮೀಕಿ ಭವನದಲ್ಲಿ ಮಹರ್ಷಿ ವಾಲ್ಮೀಕಿಯವರ ಫೋಟೋ ಇಟ್ಟು ಪೂಜೆ ಮಾಡುವಂತೆ ಸೂಚಿಸಿದರು. ಶಾಸಕ ಟಿ.ರಘುಮೂರ್ತಿ ಮಾತನಾಡಿ, ಸಂಘದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಿ. ಹಳ್ಳಿಗಳಲ್ಲಿ ಸಾಮರಸ್ಯ ಮೂಡಿಸುವ ಕೆಲಸವಾಗಬೇಕು. ಸಂಘ ಎಂದರೆ ಪಕ್ಷಾತೀತವಾಗಿರಬೇಕು. ರಾಜಕೀಯ ದ್ವೇಷ ನುಸುಳಿದರೆ ಸಂಘಟನೆಯಲ್ಲಿ ಒಡಕು ಮೂಡುತ್ತದೆ. ವೈಯಕ್ತಿಕ ಪ್ರತಿಷ್ಠೆ, ಅಹಂ ಬಿಟ್ಟು ಸಂಘವನ್ನು ಕಟ್ಟಿದರೆ ಏನಾದರೂ ಸಾಧಿಸಬಹುದು ಎಂದು ವಾಲ್ಮೀಕಿ ಯುವಕರ ಸಂಘಕ್ಕೆ ಕಿವಿಮಾತು ಹೇಳಿದರು.