ಸಿಎಂ ಸ್ಥಾನ ಖಾಲಿ ಇಲ್ಲ: ಸಚಿವ ವೆಂಕಟೇಶ್

KannadaprabhaNewsNetwork | Published : Sep 11, 2024 1:01 AM

ಸಾರಾಂಶ

ರಾಮನಗರ: ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಆ ಕುರಿತು ಮಾತನಾಡುವವರ ಬಾಯಿ ಮುಚ್ಚಿಸಲು ಆಗಲ್ಲ. ಸಿಎಂ ಸೀಟ್ ಖಾಲಿ ಆದ ಮೇಲೆ ನಮ್ಮ ಹೈಕಮಾಂಡ್ ಹಾಗೂ ಶಾಸಕರು ಅದರ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ರಾಮನಗರ: ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಆ ಕುರಿತು ಮಾತನಾಡುವವರ ಬಾಯಿ ಮುಚ್ಚಿಸಲು ಆಗಲ್ಲ. ಸಿಎಂ ಸೀಟ್ ಖಾಲಿ ಆದ ಮೇಲೆ ನಮ್ಮ ಹೈಕಮಾಂಡ್ ಹಾಗೂ ಶಾಸಕರು ಅದರ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ರಾಮನಗರದ ರೇಷ್ಮೆ ಮಾರುಕಟ್ಟೆ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಲ್ಲಿ ಸೀನಿಯಾರಿಟಿ ಗುದ್ದಾಟ ವಿಚಾರಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು.

ದೀಪಾವಳಿ ಬಳಿಕ ಸರ್ಕಾರ ಉಳಿಯಲ್ಲ ಎಂಬ ಸಿ.ಟಿ.ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ. ನಮ್ಮ ಸರ್ಕಾರ ಏನು ಆಗಲ್ಲ ಭದ್ರವಾಗಿದೆ. ಜನ ೧೩೬ ಮಂದಿ ಶಾಸಕರನ್ನ ಗೆಲ್ಲಿಸಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ವ್ಯತ್ಯಾಸ ಆಗಿಲ್ಲ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರೇ ಇರ್ತಾರೆ ಎಂದರು.

ರಾಮನಗರ ರೇಷ್ಮೆ ಮಾರುಕಟ್ಟೆ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಂದು ಮಾರುಕಟ್ಟೆಯನ್ನು ವೀಕ್ಷಣೆ ಮಾಡಿ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ. ರೈತರು, ರೀಲರ್ಸ್‌ಗಳ ಜತೆ ಸಂವಾದ ಕಾರ್ಯಕ್ರಮವನ್ನೂ ಮಾಡಲಾಗುತ್ತಿದೆ. ರೈತರ ಸಮಸ್ಯೆಗಳನ್ನ ಆಲಿಸಿ ಬಗೆಹರಿಸುವ ಕೆಲಸ ಮಾಡುತ್ತೇವೆ. ರೇಷ್ಮೆ ಮಾರಾಟಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸುತ್ತೇವೆ ಎಂದರು.

ಚನ್ನಪಟ್ಟಣ ಬಳಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಆಗುತ್ತಿದ್ದು, ಅದನ್ನೂ ಪರಿಶೀಲನೆ ಮಾಡಿ ಬಂದಿದ್ದೇನೆ. ಮೊದಲ ಹಂತದ ಕಾಮಗಾರಿ ಮುಗಿದು, ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. ಇನ್ನೂ ಐದಾರು ತಿಂಗಳಲ್ಲಿ ಕಾಮಗಾರಿ ಸಂಪೂರ್ಣವಾಗಲಿದೆ. ಅಲ್ಲದೇ ರೇಷ್ಮೆ ಬೆಳೆಗೆ ಸುಳಿರೋಗದ ಬಾಧೆ ಹೆಚ್ಚಾಗಿದೆ. ಅದರ ಬಗ್ಗೆ ಪರಿಶೀಲನೆ ಮಾಡಲು ತಜ್ಞರ ಜಿತೆ ಮಾತನಾಡಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಶಾಸಕ ಇಕ್ಬಾಲ್ ಹುಸೇನ್, ವಿಧಾನಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಕೆ.ರಾಜು ಇತರರು ಹಾಜರಿದ್ದರು.

ಪೊಟೋ೧೦ಸಿಪಿಟಿ೬:

ರಾಮನಗರದ ರೇಷ್ಮೆ ಮಾರುಕಟ್ಟೆ ಭೇಟಿ ನೀಡಿದ ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಪರಿಶೀಲನೆ ನಡೆಸಿದರು.

Share this article