ಬಳ್ಳಾರಿ: ರೈತ ಹೋರಾಟದ ಧ್ವನಿಯಾಗಿದ್ದ ಮಾಜಿ ಶಾಸಕ ದಿ.ಸಿ.ಎಂ.ರೇವಣಸಿದ್ದಯ್ಯನವರು ತಮ್ಮ ಬದುಕಿನುದ್ದಕ್ಕೂ ಜನಪರವಾಗಿ ನಿಂತು ಆದರ್ಶನೀಯ ರಾಜಕಾರಣಿಯಾಗಿದ್ದರು ಎಂದು ಶ್ರೀಶೈಲ ಕದಳಿವನದ ಚಿದಾನಂದ ತಾತನವರು ತಿಳಿಸಿದರು.ಸಿರುಗುಪ್ಪ ತಾಲೂಕಿನ ಶಿರಿಗೇರಿ ಗ್ರಾಮದಲ್ಲಿ ಜರುಗಿದ ದಿ.ಸಿಎಂ.ರೇವಣಸಿದ್ದಯ್ಯನವರ 13ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ರೇವಣಸಿದ್ದಯ್ಯನವರು ಶಾಸಕರಾಗಿದ್ದಾಗ್ಯೂ ಅಪ್ಪಟ ಕೃಷಿಕರಾಗಿದ್ದರು. ವ್ಯವಸಾಯಕ್ಕೆ ಮೊದಲ ಆದ್ಯತೆ ನೀಡಿದ್ದರು. ವಿಧಾನಸಭೆಯಲ್ಲಿ ಹತ್ತಾರು ಬಾರಿ ರೈತರ ಸಂಕಷ್ಟಗಳನ್ನು ಪ್ರಸ್ತಾಪಿಸಿ, ಅನ್ನದಾತರ ಹಿತ ಕಾಯಬೇಕು ಎಂದು ಧ್ವನಿ ಎತ್ತಿದ್ದರು. ಶಾಸಕರಾಗಿದ್ದಾಗ್ಯೂ ನಿತ್ಯ ದನ-ಕರುಗಳಿಗೆ ಮೇವು ಹಾಕುವುದು, ನೀರುಣಿಸುವುದು, ಸಗಣೆ ಎತ್ತುವ ಕೆಲಸ ತಪ್ಪದೆ ಮಾಡುತ್ತಿದ್ದರು. ಅವರ ಸರಳ ಜೀವನ ಇಂದಿನ ರಾಜಕೀಯ ನಾಯಕರಿಗೆ ಆದರ್ಶವಾಗಬೇಕು. ಬದುಕನ್ನು ಸಾರ್ಥಕಗೊಳಿಸುವುದು ಹೇಗೆ ಎಂಬುದು ರೇವಣಸಿದ್ದಯ್ಯನವರ ಅನುಕರಣೀಯ ಜೀವನದಿಂದ ತಿಳಿದು ಬರುತ್ತದೆ ಎಂದು ಶ್ರೀಗಳು ಸ್ಮರಿಸಿದರು.ತುಂಗಭದ್ರಾ ರೈತ ಸಂಘದ ಅಧ್ಯಕ್ಷ, ರೈತ ಹೋರಾಟಗಾರ ದರೂರು ಪುರುಷೋತ್ತಮಗೌಡ ಮಾತನಾಡಿ, ರೇವಣಸಿದ್ದಯ್ಯನವರು ಅಪ್ಪಟ ರೈತ ಹೋರಾಟಗಾರರು. ಅನ್ನದಾತರು ಸಂಕಷ್ಟಕ್ಕೆ ಸಿಲುಕಬಾರದು ಎಂಬ ಕಾರಣಕ್ಕಾಗಿಯೇ ವಿಧಾನಸೌಧದಲ್ಲಿ ಪ್ರತಿಧ್ವನಿಸಿ ಅನೇಕ ರೈತಪರ ಯೋಜನೆಗಳನ್ನು ಜಾರಿಗೊಳಿಸಿದರು. ರೇವಣಸಿದ್ದಯ್ಯನವರು ಮಾಡಿದ ಕೆಲಸ ಅವರ ನಿಧನ ನಂತರವೂ ಜೀವಂತವಾಗಿ ಉಳಿದಿವೆ. ಅವರ ರೈತರಪರ ಹಾಗೂ ಬಡವರ ಪರ ನಿಲುವು ಸದಾ ಸ್ಮರಣೀಯವಾಗಿವೆ ಎಂದರಲ್ಲದೆ, ರೇವಣಸಿದ್ದಯ್ಯನವರ ಸ್ಮಾರಕ ಸ್ಥಳದ ಆಸ್ತಿಯನ್ನು ಕುಟುಂಬ ಸದಸ್ಯರು ಉಳಿಸಿಕೊಂಡು, ಮುಂದಿನ ಪೀಳಿಗೆಗೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಎಸ್.ಎಂ. ನಾಗರಾಜಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ರೇವಣಸಿದ್ದಯ್ಯನವರ ಪುತ್ರ ಸಿ.ಎಂ.ನಾಗರಾಜಸ್ವಾಮಿ, ವಕೀಲರಾದ ಸಿದ್ಧಲಿಂಗಯ್ಯಸ್ವಾಮಿ, ಕೆ.ಎಂ. ಮಲ್ಲಯ್ಯಸ್ವಾಮಿ, ಗೋಡೆ ಚಂದ್ರಶೇಖರಗೌಡ, ಡಾ.ಟಿ.ಎಂ. ಮೃತ್ಯುಂಜಯಸ್ವಾಮಿ, ಸಿರುಗುಪ್ಪದ ವೈದ್ಯಾಧಿಕಾರಿ ಡಾ.ಈರಣ್ಣ, ಶಿರಿಗೇರಿ ವೈದ್ಯಾಧಿಕಾರಿ ನಾಗರಾಜ್, ಎಸ್. ಮರ್ಷೀದ್ ಅಹ್ಮದ್, ತಾಪಂ ಮಾಜಿ ಸದಸ್ಯ ಬಿ.ಸೋಮಶೇಖರಪ್ಪ, ಹೊಳಗುಂದಿ ಎಚ್.ದೇವಣ್ಣ, ಬಿ.ನಾಗೇಂದ್ರ, ಎಸ್.ಎಂ. ಅಡಿವಯ್ಯಸ್ವಾಮಿ, ಗರ್ಜಿ ಲಿಂಗಪ್ಪ, ನಬೀಸಾಬ್, ಗೋಡೆ ಚೆನ್ನಪ್ಪ, ಕುಂಬಾರ ಬಸವರಾಜ್, ಹೂಗಾರ್ ಬಸವರಾಜ್, ಭಜಂತ್ರಿ ರಮೇಶ್, ದಾಸಾಪುರ ದೊಡ್ಡಮುದಕಪ್ಪ, ಗುಂಡಿಗನೂರು ಪಂಪನಗೌಡ ಇದ್ದರು.