ಸಿಎಂ ದೀರ್ಘಾವಧಿ ಆಡಳಿತ - ಚಿಕ್ಕಮಗಳೂರಿನಲ್ಲಿ ಸಂಭ್ರಮಾಚರಣೆ

KannadaprabhaNewsNetwork |  
Published : Jan 07, 2026, 01:30 AM IST
ರಾಜ್ಯದ ಮುಖ್ಯಮಂತ್ರಿಯಾಗಿ ದೀರ್ಘಾವಧಿ ಆಡಳಿತ ನಡೆಸಿ ದಾಖಲೆ ನಿರ್ಮಿಸಿದ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಅಹಿಂದಾ ಘಟಕದಿಂದ ಚಿಕ್ಕಮಗಳೂರಿನಲ್ಲಿ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳು ಜರುಗಿದವು. | Kannada Prabha

ಸಾರಾಂಶ

ಚಿಕ್ಕಮಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ದೀರ್ಘಾವಧಿ ಆಡಳಿತ ನಡೆಸಿ ದಾಖಲೆ ನಿರ್ಮಿಸಿದ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಅಹಿಂದಾ ಘಟಕದಿಂದ ನಗರದಲ್ಲಿ ಬುಧವಾರ ಅಭಿನಂದನಾ ಕಾರ್ಯಕ್ರಮ ನಡೆಯಿತು.

- ದೇವಾಲಯ ಮಸೀದಿ ಚರ್ಚ್‌ಗಳಲ್ಲಿ ವಿಶೇಷ ಪೂಜೆ,

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜ್ಯದ ಮುಖ್ಯಮಂತ್ರಿಯಾಗಿ ದೀರ್ಘಾವಧಿ ಆಡಳಿತ ನಡೆಸಿ ದಾಖಲೆ ನಿರ್ಮಿಸಿದ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಅಹಿಂದಾ ಘಟಕದಿಂದ ನಗರದಲ್ಲಿ ಬುಧವಾರ ಅಭಿನಂದನಾ ಕಾರ್ಯಕ್ರಮ ನಡೆಯಿತು.ನಗರದ ತಾಲೂಕು ಕಚೇರಿ ಆವರಣದಲ್ಲಿರುವ ಗಣಪತಿ ದೇವಾಲಯ ಮತ್ತು ಮಸೀದಿ, ಚರ್ಚ್‌ಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರದ ಪೋಸ್ಟರ್ ಹಿಡಿದು ತಾಲೂಕು ಕಚೇರಿಯಿಂದ ಮೆರವಣಿಗೆ ಹೊರಟ ನೂರಾರು ಕಾರ್ಯಕರ್ತರು ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡರು. ಸಿಎಂ ಪರವಾದ ಘೋಷಣೆ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಮಾಜಿ ಸಚಿವ ಬಿ.ಬಿ.ನಿಂಗಯ್ಯ ಈ ವೇಳೆ ಮಾತನಾಡಿ, ರಾಜ್ಯವನ್ನು ಆಳಿದಂತಹ ಬಹಳಷ್ಟು ಮುಖ್ಯಮಂತ್ರಿಗಳಲ್ಲಿ ದೇವರಾಜು ಅರಸು ನಂತರ ಮೈಸೂರಿನವರೇ ಆದ ನಮ್ಮ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಸು ಆಡಳಿತ ಸರಿಗಟ್ಟಿ ನಾಳೆಗೆ ಅವರಿಗಿಂತ ಒಂದು ದಿನ ಹೆಚ್ಚು ಆಡಳಿತ ನಡೆಸಿದವರಾಗುತ್ತಾರೆ ಎಂದರು.ಅವರ ಜತೆ ಮಂತ್ರಿಯಾಗಿ, ಎಂಎಲ್‌ಎ ಆಗಿ ಕೆಲಸ ಮಾಡುವ ಭಾಗ್ಯ ನನ್ನದಾಗಿತ್ತು. ಅವರು 1983ರಲ್ಲೇ ಎಂಎಲ್‌ಎ ಆಗಿ ಆಯ್ಕೆಯಾದರು. ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದರು. ಬಿ.ರಾಚಯ್ಯ ಅವರ ಕಾಲದಲ್ಲಿ ಮಂತ್ರಿಯೂ ಆದರು. ನಾನು 1985ಕ್ಕೆ ಶಾಸಕನಾಗಿ ಅವರ ಜತೆಗೂಡಿದೆ. ಇಂದಿಗೂ ರಾಜ್ಯ ಕಂಡ ಶ್ರೇಷ್ಠ ನಾಯಕರಲ್ಲಿ ಸಿದ್ದರಾಮಯ್ಯ ಒಬ್ಬರು. ದನಿಯಿಲ್ಲದವರ ದನಿಯಾಗಿ, ಬಡವರ, ರೈತ ಕಾರ್ಮಿಕರ, ಎಲ್ಲರ ಪರವಾಗಿ ಜನ ಮೆಚ್ಚುವ ಕೆಲಸ ಮಾಡಿರುವ ಏಕೈಕ ಮುಖ್ಯಮಂತ್ರಿ ಎಂದರೆ ತಪ್ಪಾಗದು. ಅವರು ನೀಡಿದ ಭಾಗ್ಯಗಳು, ಪಂಚ ಗ್ಯಾರಂಟಿ ಕಾರ್ಯಕ್ರಮ ರಾಜ್ಯದ ಇತಿಹಾಸದಲ್ಲಿ ಮರೆಯಲಾಗದ ಕೆಲಸಗಳು. ಅರಸು ಅವರ ಎಲ್ಲ ಜನವರ್ಗವನ್ನು ಒಟ್ಟಿಗೆ ಕರೆದೊಯ್ದು ಒಳ್ಳೆಯ ಆಡಳಿತ ಕೊಟ್ಟರು. ಅವರ ಹಾದಿಯಲ್ಲೇ ಸಿದ್ದರಾಮಯ್ಯ ಸಾಗಿದ್ದು ಸಿಎಂ ಆಗಿ ಏನೆಲ್ಲಾ ಮಾಡಲು ಸಾಧ್ಯವಿತ್ತೋ ಅದನ್ನೆಲ್ಲಾ ಮಾಡಿದ್ದಾರೆ. 16 ಬಾರಿ ಬಜೆಟ್ ಮಂಡಿಸಿದ ದಾಖಲೆ ಅವರ ಹೆಸರಲ್ಲಿದೆ ಎಂದು ಹೇಳಿದರು.ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, 1982 ರಿಂದ ನಾನು ಸಿದ್ದರಾಮಯ್ಯ ಒಟ್ಟೊಟ್ಟಿಗೆ ಬಂದವರು. ಅವರು ಮೈಸೂರು ಜಿಲ್ಲೆಯ ರೈತ ಸಂಘದ ಅಧ್ಯಕ್ಷರಾಗಿದ್ದಾಗ ನಾನು ಚಿಕ್ಕಮಗಳೂರು ತಾಲೂಕು ಅಧ್ಯಕ್ಷನಾಗಿದ್ದೆ. ಸಿದ್ದರಾಮಯ್ಯ ಅವರು ಪ್ರೊ. ನಂಜುಂಡಸ್ವಾಮಿ ಅಭಿಮಾನಿಯಾಗಿದ್ದರು. ಅವರಿಗೆ ಇರುವ ಬದ್ಧತೆ, ಸಿದ್ದಾಂತ ರಾಜ್ಯದಲ್ಲಿ ನಾವು ಯಾರಲ್ಲೂ ನೋಡಲು ಸಾಧ್ಯವಿಲ್ಲ. ಎಲ್ಲ ವರ್ಗದ ಪ್ರೀತಿ ಗಳಿಸಿರುವ ಮಹಾಚೇತನ ಎಂದು ಬಣ್ಣಿಸಿದರು.ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆರೋಪ ಮಾಡುವವರಿದ್ದಾರೆ. ಸುದೀರ್ಘ ಕಾಲದ ಸಿಎಂ ಆಗಿದ್ದರೂ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಮಾಡಿಲ್ಲ. ಇಂತಹ ಪ್ರಾಮಾಣಿಕ ಸಿಎಂಗೆ ಹತ್ತಾರು ಸಾವಿರ ಕೋಟಿ ರೂ.ಲೂಟಿ ಹೊಡೆದಿರುವವರು ಎಂದು ಆಪಾದನೆ ಮಾಡುತ್ತಾರೆ ಎಂದು ಟೀಕಿಸಿದರು. ವಿಧಾನಪರಿಷತ್‌ ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ಸಿದ್ದರಾಮಯ್ಯ ತಮ್ಮ 40 ವರ್ಷದ ರಾಜ ಕಾರಣದಲ್ಲಿ ಒಂದೇ ಒಂದು ಅಹಿತಕರ ಘಟನೆ ನಡೆಯದ ಹಾಗೆ ಸ್ವಚ್ಛ ಆಡಳಿತ ನೀಡಿದ್ದಾರೆ. ಅರಸು ತರಹನೇ ಸಿದ್ದ ರಾಮಯ್ಯ ಆಡಳಿತ ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.ಅಹಿಂದ ಘಟಕದ ಜಿಲ್ಲಾಧ್ಯಕ್ಷ ತ್ರಿಭುವನ್‌ ಎತ್ತಿನಮನೆ ಮಾತನಾಡಿ, ಸಿದ್ದರಾಮಯ್ಯ ಅವರ ಹಿಂದೆ ಅಹಿಂದ ವರ್ಗ ಸದಾ ಇರುತ್ತದೆ ಎಂದು ಹೇಳಿದರು.ಹೆರಿಗೆ ಆಸ್ಪತ್ರೆಯಲ್ಲಿ ಹಣ್ಣು ವಿತರಣೆ, ರಕ್ತದಾನ, ನೇತ್ರ, ಆರೋಗ್ಯ ತಪಾಸಣೆ ನಡೆಯಿತು. ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್‌, ಅಹಿಂದ ಮುಖಂಡರಾದ ಎ.ಎನ್.ಮಹೇಶ್, ಕುರುಬರ ಸಂಘದ ಅಧ್ಯಕ್ಷ ಕೆ.ಎಸ್. ಶಾಂತೇಗೌಡ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಮಲ್ಲೇಶ್ ಸ್ವಾಮಿ, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಅಹಿಂದ ಸದಸ್ಯರುಗಳಾದ ಎಚ್.ಪಿ. ಮಂಜೇಗೌಡ, ಸಿ.ಸಿ. ಮಧು, ಪ್ರಕಾಶ್‌ ರೈ, ದಲಿತಪರ ಸಂಘಟನೆಯ ಮುಖಂಡರಾದ ಅಣ್ಣಯ್ಯ, ಭೀಮಯ್ಯ, ಲಕ್ಷ್ಮಣ, ರಾಮಚಂದ್ರ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. 6 ಕೆಸಿಕೆಎಂ 2ರಾಜ್ಯದ ಮುಖ್ಯಮಂತ್ರಿಯಾಗಿ ದೀರ್ಘಾವಧಿ ಆಡಳಿತ ನಡೆಸಿ ದಾಖಲೆ ನಿರ್ಮಿಸಿದ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಅಹಿಂದಾ ಘಟಕದಿಂದ ಚಿಕ್ಕಮಗಳೂರಿನಲ್ಲಿ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳು ಜರುಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ