ಕನಕಗಿರಿ/ ನವಲಿ: ಸಿಎಂ ಸಿದ್ರಾಮಯ್ಯ ಅ.6ಕ್ಕೆ ಜಿಲ್ಲೆಗೆ ಆಗಮಿಸುತ್ತಿದ್ದು, ಪಂಚ ಗ್ಯಾರಂಟಿ ಫಲಾನುಭವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆ ತರುವಂತಾಗಬೇಕು ಎಂದು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ರೆಡ್ಡಿಶ್ರೀನಿವಾಸ ಹೇಳಿದರು.
ಅವರು ತಾಲೂಕಿನ ನವಲಿ ಬಳಿಯ ರೈಸ್ ಟೆಕ್ನಾಲಜಿ ಪಾರ್ಕ್ ಕಚೇರಿಯಲ್ಲಿ ಆಯೋಜಿಸಿದ್ದ ಕನಕಗಿರಿ ಹಾಗೂ ಕಾರಟಗಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಗೃಹಲಕ್ಷ್ಮೀ, ಯುವನಿಧಿ, ಶಕ್ತಿ ಯೋಜನೆ, ಅನ್ನಬಾಗ್ಯ, ಗೃಹಜ್ಯೊತಿ ಸೇರಿದಂತೆ ವಿವಿಧ ಯೋಜನೆಗಳ ಲಾಭ ಪಡೆಯುತ್ತಿರುವ ಫಲಾನುಭವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಕರೆ ತರಲು ತಾಲೂಕು ಮಟ್ಟದ ಗ್ಯಾರಂಟಿ ಸದಸ್ಯರು ಹೆಚ್ಚು ಕೆಲಸ ಮಾಡಬೇಕು. ಅದಕ್ಕೆ ಬೇಕಾದ ಎಲ್ಲ ಸಹಕಾರ ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ನೀಡಬೇಕು ಎಂದರು.ನಂತರ ಗೃಹಲಕ್ಷ್ಮೀ,ಅನ್ನಬಾಗ್ಯ, ಗೃಹಜ್ಯೋತಿ, ಯುವನಿಧಿ, ಸ್ತ್ರೀಶಕ್ತಿ ಯೋಜನೆಗೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಇಲಾಖೆ ಅಧಿಕಾರಿಗಳು ವರದಿ ಮಂಡಿಸಿದರು. ಎರಡು ತಾಲೂಕಿನ ಯೋಜನೆಗಳ ಪ್ರಗತಿ ಸಾಧಿಸಲು ಜಿಲ್ಲಾ ಹಾಗೂ ಅಧ್ಯಕ್ಷರು ಸಲಹೆ ನೀಡಿ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಸದಸ್ಯರಿಂದ ಪ್ರಗತಿಗೆ ಸಂಬಂಧಿಸಿದಂತೆ ಚರ್ಚಿಸಿದರು.
ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸ್ವಾವಲಂಬಿ ಜೀವನ ಸಾಗಿಸುವ ಫಲಾನುಭವಿಗಳ ಯಶಸ್ವಿ ಲೇಖನ ಎಲ್ಲ ಇಲಾಖೆಗಳ ಅಧಿಕಾರಿಗಳು ನಿಗದಿತ ಸಮಯದೊಳಗೆ ಸಲ್ಲಿಸಬೇಕು ಎಂದರು.ಸಂತಾಪ: ನಾಡಿನ ಹೆಸರಾಂತ ಸಾಹಿತಿ ಎಸ್.ಎಲ್.ಭೈರಪ್ಪ ನಿಧನದ ಹಿನ್ನೆಲೆ ಸಭೆಗೂ ಮುನ್ನ ಮೌನಾಚರಿಸಿ ಸಂತಾಪ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾ ಗ್ಯಾರಂಟಿ ಉಪಾಧ್ಯಕ್ಷ ನಾಗರಾಜ ಅರಳಿ, ಸದಸ್ಯರಾದ ಸೋಮನಾಥ ದೊಡ್ಡಮನಿ, ಶಕುಂತಲಾ, ಕಾರಟಗಿ ತಾಲೂಕಾಧ್ಯಕ್ಷ ದೇವಪ್ಪ ಭಾವಿಕಟ್ಟಿ, ಕನಕಗಿರಿ ತಾಲೂಕಾಧ್ಯಕ್ಷ ಹಜರತಹುಸೇನ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ, ಲಕ್ಷ್ಮೀದೇವಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ತಾಪಂ ಹಾಗೂ ಗ್ರಾಪಂ ಸಿಬ್ಬಂದಿಗಳಿದ್ದರು.