ಕನ್ನಡಪ್ರಭ ವಾರ್ತೆ ರಾಮನಗರ
ರೈತರ ಕೃಷಿ ಭೂಮಿ ಕಸಿದುಕೊಳ್ಳುವ ಟೌನ್ ಶಿಪ್ ಯೋಜನೆಯನ್ನು ಕೈಬಿಡದಿದ್ದರೆ ಜನರು ವಿಷ ಕುಡಿಯಲಿದ್ದು, ರಕ್ತದ ಕೋಡಿಯೇ ಹರಿಯಲಿದೆ. ಅಲ್ಲದೆ, ಮುಖ್ಯಮಂತ್ರಿಗಳ ನಿವಾಸವನ್ನು ಘೇರಾವ್ ಮಾಡುತ್ತೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.ತಾಲೂಕಿನ ಬಿಡದಿ ಹೋಬಳಿ ಬೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ಶುಕ್ರವಾರ ಜನಾಭಿಪ್ರಾಯನಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಭೂಮಿ, ನಮ್ಮ ಹಕ್ಕು. ನಮ್ಮ ಇಂಚು ಭೂಮಿಯನ್ನು ಕೊಡುವುದಿಲ್ಲ. ರೈತರೊಂದಿಗೆ ನಾವೆಲ್ಲರೂ ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆ ಎಂದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ 10 ಸಾವಿರ ಎಕರೆ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲು ಹೊರಟಿದ್ದು, ಇದಕ್ಕೆ ಎಲ್ಲ ಗ್ರಾಮಗಳಲ್ಲಿ ರೈತರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ರೈತ ವಿರೋಧಿ ಧೋರಣೆ ವಿರುದ್ಧ ಹೋರಾಟಕ್ಕೆ ಕೃಷಿಕರೆಲ್ಲರೂ ಅಣಿಯಾಗಿದ್ದಾರೆ.ಸರ್ಕಾರ ರೈತರ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಲಿಲ್ಲ. ಅಷ್ಟಕ್ಕೂ ಯಾವ ರೈತರೂ ಜಮೀನು ನೀಡಲು ಸಿದ್ಧರಿಲ್ಲ ಎಂದು ಹೇಳಿದರು.
ರೈತರ ಬದುಕಿನ ಜೊತೆ ಚೆಲ್ಲಾಟವಾಡಲು ಬಿಡುವುದಿಲ್ಲ. ತೆಂಗು, ಮಾವು, ಬಾಳೆ, ರೇಷ್ಮೆ, ಜಾನುವಾರು ಮೇವು ಬೆಳೆದು ಇಲ್ಲಿನ ಕೃಷಿಕರು ಬದುಕು ಸಾಗಿಸುತ್ತಿದ್ದಾರೆ. ರೈತರ ರಕ್ಷಣೆ ದೃಷ್ಟಿಯಿಂದ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಗುಂಪಿಲ್ಲದೆ ಪಕ್ಷಾತೀತವಾಗಿ ಹೋರಾಟ ನಡೆಸುತ್ತೇವೆ.ಸ್ಥಳೀಯ ಶಾಸಕ ಬಾಲಕೃಷ್ಣರವರು ಟೌನ್ ಶಿಪ್ ಅನ್ನು ಜೆಡಿಎಸ್ ನ ಪಾಪದ ಕೂಸು ಅಂತ ಹೇಳಿದ್ದಾರೆ. 2013ರಲ್ಲಿ ನೀವೇ ಶಾಸಕರಾಗಿದ್ದಾಗ ಕಡಲೆಪುರಿ ತಿನ್ನುತ್ತಿದ್ರಾ. ಒಬ್ಬನೇ ಒಬ್ಬ ರೈತ ನಿಮ್ಮ ಮನೆ ಬಾಗಿಲಿಗೆ ಬಂದು ಟೌನ್ ಶಿಪ್ ಗೆ ಜಮೀನು ನೀಡುತ್ತೇನೆಂದು ಹೇಳಿದ್ದರೆ ಚರ್ಚೆಗೆ ಬರಲಿ. ಬಾಲಕೃಷ್ಣ ಮತ್ತು ಪ್ರಾಧಿಕಾರ ಅಧ್ಯಕ್ಷ ನಟರಾಜ್ ಅವರಿಗೆ ಧೈರ್ಯವಿದ್ದರೆ ಗ್ರಾಮಗಳಿಗೆ ಭೇಟಿ ನೀಡಿ ಜಮೀನು ವಶ ಪಡಿಸಿಕೊಳ್ಳುತ್ತೇವೆಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಟೌನ್ ಶಿಪ್ ಗೆ ಭೂಮಿ ಕಬಳಿಸಿದರೆ ಇಲ್ಲಿನ ಜಾನುವಾರುಗಳಿಗೆ ಮೇವು ಏನು ಮಾಡಬೇಕು. ಹಿಂದೂ ಧರ್ಮದ ಪ್ರಕಾರ ಪೂರ್ವಜರ ಸಮಾಧಿಗಳಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದು, ಅದನ್ನು ನೆಲಸಮ ಮಾಡಿದರೆ ಹೇಗೆ. ನಿಮ್ಮಿಂದ ಒಂದು ಕೈಗಾರಿಕೆ ತರಲು ಸಾಧ್ಯವಿಲ್ಲ. ಕೃಷಿ ಭೂಮಿಗಳಲ್ಲಿ ಲೇಔಟ್ ಮಾಡಿದರೆ ರೈತರ ಗತಿ ಏನಾಗಬೇಕು ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಪ್ರತಿನಿಧಿಗಳಿಗೆ ರೈತರೊಂದಿಗೆ ಮಾತನಾಡುವ ತಾಕತ್ತಿಲ್ಲ. ಈಗಷ್ಟೇ ಪ್ರಾಧಿಕಾರ ಕಣ್ಣು ಬಿಟ್ಟಿದೆ. ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಪರಿಹಾರ ನೀಡಲು ಪ್ರಾಧಿಕಾರದಲ್ಲಿ ಹಣ ಇಲ್ಲ. ರೈತರನ್ನು ಉಳಿಸಲು ಎದೆಕೊಟ್ಟು ಹೋರಾಟ ಮಾಡುತ್ತೇನೆ. ಮುಖ್ಯಮಂತ್ರಿಗಳ ನಿವಾಸ ಘೇರಾವ್ ಮಾಡುವುದು ಮಾತ್ರವಲ್ಲದೆ ಎಲ್ಲ ಬಗೆಯ ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ಹೇಳಿದರು.
ಪ್ರಾಧಿಕಾರದವರಿಗೆ ತಾಕತ್ತಿದ್ದರೆ ರೈತರ ಮನೆ ಬಾಗಿಲಿಗೆ ನೋಟಿಸ್ ಅಂಟಿಸಲಿ ನೋಡೋಣ. ಜಿಲ್ಲಾಧಿಕಾರಿಯೂ ರೈತನ ಮಗನಾಗಿದ್ದು, ರಿಯಲ್ ಎಸ್ಟೇಟ್ ದಂಧೆಕೋರರ ಏಜೆಂಟ್ ನಂತೆ ಕೆಲಸ ಮಾಡಬಾರದು. ರೈತರ ವಿರೋಧ ಇದ್ದಾಗ ಯೋಜನೆ ಕೈಬಿಡಬೇಕು. ಆರು ತಿಂಗಳಲ್ಲಿ ಸುತ್ತಮುತ್ತಲೂ ಬೇನಾಮಿ ಹೆಸರಿನಲ್ಲಿ ಆಸ್ತಿ ಕಬಳಿಸಿದ್ದು, ಶೀಘ್ರದಲ್ಲಿಯೇ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.ಸಭೆಯಲ್ಲಿ ಕಂಚುಗಾರನಹಳ್ಳಿ ಗ್ರಾಪಂ ಸದಸ್ಯ ಹರೀಶ್ ಗೌಡ, ಎಚ್.ಆರ್. ರಾಧಾ ಕೃಷ್ಣ, ಸತೀಶ್, ಶ್ರೀಧರ್, ಹೇಮಂತ್ ಕುಮಾರ್, ಶಿವರಾಜ್, ಮಂಜುನಾಥ್, ಕೃಷ್ಣ, ರಘು, ಸೋಮಶೇಖರ್ ಮತ್ತಿತರರು ಹಾಜರಿದ್ದರು.
ಹುಡ್ಕೋದವರು 21 ಸಾವಿರ ಕೋಟಿ ಸಾಲ ಕೊಡುತ್ತಾರೆಂಬುದೇ ಶುದ್ಧ ಸುಳ್ಳುರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ ಯೋಜನೆಗಾಗಿ ಹುಡ್ಕೋದವರು 21 ಸಾವಿರ ಕೋಟಿ ಸಾಲ ಕೊಡಲು ಮುಂದಾಗಿದ್ದಾರೆ ಎಂಬುದು ಶುದ್ಧ ಸುಳ್ಳು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎ.ಮಂಜುನಾಥ್ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಭೂಮಿಯನ್ನು ಅಡಮಾನವಿಟ್ಟು ಸಾಲ ಪಡೆಯಲು ಇವರ್‍ಯಾರು. ರಾಜ್ಯ ಸರ್ಕಾರವೇ ನೇರವಾಗಿ ರಿಯಲ್ ಎಸ್ಟೇಟ್ ಗೆ ಇಳಿದಿದೆ. ಟೌನ್ ಶಿಪ್ ವಿರುದ್ಧ ಹೋರಾಟಕ್ಕೆ ರೈತರೆಲ್ಲರೂ ಒಗ್ಗಟ್ಟಿನಿಂದ ಇದ್ದು, ಯಾವ ಬಣವೂ ಇಲ್ಲ ಎಂದರು.ಟೌನ್ ಶಿಪ್ ಯೋಜನೆಗಾಗಿ ಭೂ ಸ್ವಾಧೀನದ ಪ್ರಿಲಿಮರಿ ನೋಟಿಫಿಕೇಷನ್ ಗೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ಯೋಜನೆಯನ್ನು ಕೈಬಿಡಬೇಕು. ರೈತರು, ಅವರ ಮಕ್ಕಳು, ಮಹಿಳೆಯರು ಸಮರ ಸಾರಿದ್ದಾರೆ. ಪ್ರಿಲಿಮರಿ ನೋಟಿಫಿಕೇಷನ್ ಹೊರಡಿಸಿರುವ ಕಾರಣ ತಕರಾರು ಸಲ್ಲಿಸಲು ಅವಕಾಶವಿದೆ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಕಾಂಗ್ರೆಸ್ ನಾಯಕರು ಸಹ ಹೋರಾಟಕ್ಕೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಸುಮಾರು 10 ಸಾವಿರ ರೈತರನ್ನು ಸೇರಿಸಿ ಚಳವಳಿ ನಡೆಸಲಾಗುವುದು. ಯಾವ ರೀತಿ ಭೂ ಸ್ವಾಧೀನ ಪಡಿಸಿಕೊಳ್ಳುತ್ತಾರೋ ನೋಡುತ್ತೇವೆ ಎಂದು ಎ.ಮಂಜುನಾಥ್ ಎಚ್ಚರಿಸಿದರು.