ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯದ ಧ್ವನಿ ಎತ್ತಿದ್ದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬೆಂಗಳೂರಿಗೆ ಪಯಣ
ಕನ್ನಡಪ್ರಭ ವಾರ್ತೆ ದಾವಣಗೆರೆವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆಯೆಂಬ ಧ್ವನಿ ಎತ್ತಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸೋಮವಾರ ಸಂಜೆ ತಮ್ಮ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ಪಯಣ ಬೆಳೆಸಿರುವುದು, ಅತ್ತ ದೆಹಲಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ಬರುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ನಗರದ ಬಾಪೂಜಿ ಎಂಬಿಎ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ನಲ್ಲಿ ಸೋಮವಾರ ಸಂಜೆ 4ರ ವೇಳೆ ಹೊರಟ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ, ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಮುಖತಃ ಚರ್ಚೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಲಿಲ್ಲ. ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಿರುವ ವಿಚಾರ ಮುಗಿದು ಹೋಗಿರುವ ಕಥೆ. ಅದೆಲ್ಲಾ ಬಗೆ ಹರಿದು ಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಯಾವಾಗಲೂ ಭೇಟಿಯಾಗುತ್ತೇನೆ. ಹೊಸದಾಗಿ ಏನೂ ಭೇಟಿಯಾಗುತ್ತಿಲ್ಲವಲ್ಲ. ಸಿದ್ದರಾಮಯ್ಯ ಭೇಟಿಯಾಗುವುದರಲ್ಲೇನಿದೆ ಎಂದು ಸಿಎಂ ಭೇಟಿ ವಿಚಾರವನ್ನು ಪರೋಕ್ಷವಾಗಿ ತಿಳಿಸಿದರು.ಈಶ್ವರ ಖಂಡ್ರೆ ಮೊನ್ನೆ ಭೇಟಿಯಾಗಿದ್ದರು. ಖಂಡ್ರೆ, ನಾನು ಸಭೆಯಲ್ಲಿ ಪಾಲ್ಗೊಂಡಿದ್ದೆ ಎನ್ನುವ ಮೂಲಕ ಶಾಮನೂರು ಶಿವಶಂಕರಪ್ಪ ಡ್ಯಾಮೇಜ್ ಕಂಟ್ರೋಲ್‌ಗೆ ಪ್ರಯತ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ತಂದೆ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಿರಿಯರಿದ್ದಾರೆ. ಇಬ್ಬರೂ ಕುಳಿತು ಮಾತನಾಡುತ್ತಾರೆಂಬುದಾಗಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದರು. ಅದರ ಬೆನ್ನಲ್ಲೇ ಶಾಮನೂರು ಶಿವಶಂಕರಪ್ಪ ಬೆಂಗಳೂರಿಗೆ ತೆರಳುತ್ತಿರುವ ವಿಚಾರವೂ ಸಾಕಷ್ಟು ಮಹತ್ವ ಪಡೆದಿದೆ.
..............................................................................ವರ್ಗಾವಣೆಯೆಲ್ಲ ಜಾತಿ ಆಧಾರದಲ್ಲಿ ಸಾಧ್ಯವಿಲ್ಲ* ಶಾಮನೂರು ಹೇಳಿಕೆ ತಳ್ಳಿ ಹಾಕಿದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ
ದಾವಣಗೆರೆ: ಲಿಂಗಾಯತರ ಕಡೆಗಣನೆ ಮಾಡಲಾಗುತ್ತಿದೆಯೆಂದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ವಿ.ಬಸವರಾಜ ತಳ್ಳಿ ಹಾಕಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಹಿರಿಯರಾದ ಶಾಮನೂರು ಶಿವಶಂಕರಪ್ಪ ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆಂಬುದು ನನಗೆ ಗೊತ್ತಿಲ್ಲ. ಎಲ್ಲಾ ಅಧಿಕಾರಿಗಳು ಸೂಕ್ತ ಸ್ಥಳದಲ್ಲೇ ನೇಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ನಾಯಕರು ಈಗಾಗಲೇ ಸರಿಯಾಗಿ ಉತ್ತರಿಸಿದ್ದಾರೆ. ಖುಷಿಯಾಯಿತು. ನಾನೂ ವೀರಶೈವ ಲಿಂಗಾಯತ ಸಮಾಜದವನಿರಬಹುದು. ಆದರೆ, ನಮ್ಮ ಹಿರಿಯ ನಾಯಕರು ಸರಿಯಾಗಿ ಹೇಳಿದ್ದಾರೆ. ಜಾತಿ, ಮೀಸಲಾತಿ ಮೇಲೆ ಕೇವಲ ನೇಮಕಾತಿಗಳು ಮಾತ್ರ ನಡೆಯುತ್ತವೆ. ವರ್ಗಾವಣೆಯನ್ನೆಲ್ಲಾ ಜಾತಿ ಆಧಾರದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮಹಾಅಧಿವೇಶನ ಶಕ್ತಿ ಪ್ರದರ್ಶನವಲ್ಲ:ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ನೇತೃತ್ವದಲ್ಲಿ ನಡೆಯುವ 24ನೇ ಮಹಾ ಅಧಿವೇಶನ ವೀರಶೈವ ಲಿಂಗಾಯತ ಸಮುದಾಯದ ಶಕ್ತಿ ಪ್ರದರ್ಶನವಲ್ಲ. ಕಾಗೆ ಕೂರುವುದುಕ್ಕೂ, ಟೊಂಗೆ ಮುರಿಯುವುದಕ್ಕೂ ಸರಿಯಾದಂತಾಗಿದೆ. ಕಳೆದ ವರ್ಷವೇ ಮಾಡಬೇಕಿದ್ದ ಮಹಾಧಿವೇಶನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು ಎಂದು ಹೇಳಿದರು. ಕಳೆದ ವರ್ಷ ನಿರ್ಧರಿಸಿದ್ದಂತೆ ಅದೇ ಮೈದಾನದಲ್ಲೇ ಸಮಾಜದ ಸಮಾವೇಶ ನಡೆಸಲು ಮುಂದಾಗಿದ್ದೇವೆ.
ಆದರೆ, ಶಾಸಕರಾದ ಶಾಮನೂರು ಶಿವಶಂಕರಪ್ಪ ಹೇಳಿಕೆಯಿಂದ ಸಮಾವೇಶ ಮಹತ್ವ ಪಡೆದುಕೊಳ್ಳುತ್ತಿದೆಯೆಂದು ಕೆಲವರು ಅಂದುಕೊಂಡಿದ್ದಾರೆ. ಅದಕ್ಕೂ, ಸಮಾವೇಶಕ್ಕೆ ಯಾವುದೇ ಸಂಬಂಧ ಇಲ್ಲ. ಪೂರ್ವ ನಿಗಧಿಯಂತೆ ಈ ವರ್ಷ ಮಾಡಬೇಕಿತ್ತು. ಮಾಡುತ್ತೇವಷ್ಟೇ ಎಂದು ಶಿವಗಂಗಾ ಬಸವರಾಜ ಸ್ಪಷ್ಟಪಡಿಸಿದರು.