ಹಂದಿಗಿಟ್ಟ ಸ್ಫೋಟಕದಿಂದ ಎತ್ತಿನ ಬಾಯಿ ಛಿದ್ರ

KannadaprabhaNewsNetwork | Published : Oct 10, 2023 1:00 AM

ಸಾರಾಂಶ

ಬೇಟೆಗಾರರು ಕಾಡುಹಂದಿಗೆ ಇಟ್ಟ ಸ್ಫೋಟಕವನ್ನು ತಿನ್ನಲು ಯತ್ನಿಸಿದ ಎತ್ತಿನ ಬಾಯಿ ಛಿದ್ರವಾದ ಘಟನೆ ತಾಲೂಕಿನ ಹರವದಿ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕೂಡ್ಲಿಗಿ ಬೇಟೆಗಾರರು ಕಾಡುಹಂದಿಗೆ ಇಟ್ಟ ಸ್ಫೋಟಕವನ್ನು ತಿನ್ನಲು ಯತ್ನಿಸಿದ ಎತ್ತಿನ ಬಾಯಿ ಛಿದ್ರವಾದ ಘಟನೆ ತಾಲೂಕಿನ ಹರವದಿ ಗ್ರಾಮದಲ್ಲಿ ನಡೆದಿದೆ. ಹರವದಿ ಗ್ರಾಮದ ಬಡಿಗೇರ ಮಲಿಯಪ್ಪ ಅವರಿಗೆ ಸೇರಿದ ಎತ್ತಿಗೆ ಗಂಭೀರ ಗಾಯವಾಗಿದೆ. ಪಶುವೈದ್ಯಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾಡುಪ್ರಾಣಿ ಬೇಟೆಯಾಡಲು ಕೆಲವರು ಸ್ಫೋಟಕ ವಸ್ತು ಬಳಸುತ್ತಾರೆ. ಅದೇ ರೀತಿ ಹರವದಿ ಗ್ರಾಮದ ಕಾಡಂಚಿನ ಸಮೀಪ ಬೇಟೆಗಾರರು ಆಹಾರದಲ್ಲಿ ಸ್ಫೋಟಕ ವಸ್ತು ಇಟ್ಟಿದ್ದರು. ಮೇಯಲು ಹೋಗಿದ್ದ ಎತ್ತು ಅರಿಯದೆ ತಿನ್ನಲು ಯತ್ನಿಸಿದೆ. ಬಾಯಲ್ಲೇ ಸ್ಫೋಟಗೊಂಡು ಬಾಯಿ ಛಿದ್ರವಾಗಿದೆ. ಎತ್ತಿನ ಸ್ಥಿತಿ ಕಂಡು ಮಾಲೀಕರು, ಗ್ರಾಮಸ್ಥರು ಮಮ್ಮಲ ಮರುಗಿದರು. ಗುಡೇಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಕಳ್ಳಬೇಟೆಗೆ ತಡೆ ಯಾವಾಗ?: ತಾಲೂಕಿನಲ್ಲಿ ಬೇಟೆಗಾರರು ಹೊಲಗಳಲ್ಲಿ ಅಲ್ಲಲ್ಲಿ ಸ್ಫೋಟಕ ವಸ್ತುಗಳನ್ನು ಇಟ್ಟು ಕಾಡುಹಂದಿ ಮತ್ತಿತರ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಗ್ರಾಮಸ್ಥರಿಗೂ ಆಗಾಗ ಇಂತಹ ಘಟನೆಗಳು ಗಮನಕ್ಕೆ ಬರುತ್ತವೆ. ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಾರೆ. ಆದರೆ ಬೇಟೆಯಾಡುವುದನ್ನು ತಪ್ಪಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಕೊಟ್ಟೂರು ಹೋಬಳಿಯ ಚಿರಿಬಿ ಅರಣ್ಯ ಪ್ರದೇಶದಲ್ಲಿ ಐದಾರು ತಿಂಗಳ ಹಿಂದೆ ಚಿರತೆಯನ್ನು ಬೇಟೆಯಾಡಿ ಅದರ ಮಾಂಸವನ್ನು ತಿಂದು ಚರ್ಮ ಹಾಗೂ ಚಿರತೆಯ ಉಗುರುಗಳನ್ನು ಸಂಗ್ರಹಿಸುವ ಕಳ್ಳದಂಧೆ ನಡೆದಿತ್ತು. ಈ ಬಗ್ಗೆ ಅರಣ್ಯ ಇಲಾಖೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ನಿರಂತರವಾಗಿ ಈ ಭಾಗದಲ್ಲಿ ಪ್ರಾಣಿಬೇಟೆ ನಡೆಯುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಣಿಬೇಟೆ ತಡೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

Share this article