ಎರಡನೇ ಬೆಳೆಗೆ ನೀರು ನೀಡಲು ಸಿಎಂ ಮಧ್ಯೆ ಪ್ರವೇಶಿಸಲಿ

KannadaprabhaNewsNetwork |  
Published : Oct 29, 2025, 01:30 AM IST
ಫೋಟೋ: ೨೮ಕೆಆರ್‌ಟಿ-೧ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಬಸವರಾಜ ದಢೇಸ್ಗೂರು. | Kannada Prabha

ಸಾರಾಂಶ

ಅಣೆಕಟ್ಟೆಯಲ್ಲಿ ಸುಮಾರು ೮೦ಟಿಎಂಸಿ ನೀರು ಇದೆ. ಈಗ ಲಭ್ಯವಿರುವ ನೀರನ್ನು ನಾಲ್ಕು ಜಿಲ್ಲೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆ ಮಾಡಿದರೆ ಭತ್ತದ ಬೆಳೆಗಾರರು ಉಳಿಯುತ್ತಾರೆ

ಕಾರಟಗಿ: ತುಂಗಭದ್ರ ಅಣೆಕಟ್ಟೆಯಲ್ಲಿ ಸರಿಸುಮಾರು ೮೦ ಟಿಎಂಸಿ ನೀರು ಇದ್ದರೂ ಕ್ರಸ್ಟ್‌ ಗೇಟ್‌ ಅಳವಡಿಕೆ ನೆಪದಲ್ಲಿ ಎರಡನೇ ಬೆಳೆಗೆ ನೀರು ಪೂರೈಕೆ ಸ್ಥಗಿತಗೊಳಿಸುವ ವಿಚಾರ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದ್ದು, ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ದಢೇಸ್ಗೂರು ಒತ್ತಾಯಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಕಾರಟಗಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಅಣೆಕಟ್ಟೆಯಲ್ಲಿ ದುರಸ್ಥಿಗೊಂಡ ಕ್ರಸ್ಟ್‌ ಗೇಟ್ ಅಳವಡಿಸುವ ಕಾರ್ಯ ಆರಂಭಿಸಲಾಗುತ್ತಿದ್ದು, ಈ ಬಾರಿ ಅಚ್ಚುಕಟ್ಟುಪ್ರದೇಶಕ್ಕೆ ಬೇಸಿಗೆ ಬೆಳೆಗೆ ನೀರಿಲ್ಲ ಎಂದು ಹೇಳಿದ ಹಿನ್ನೆಲೆಗೆ ದಢೇಸ್ಗೂರು ಪ್ರತಿಕ್ರಿಯಿಸಿ ಸಚಿವ ತಂಗಡಗಿ ಕಾರ್ಯವೈಖರಿ ಟೀಕಿಸಿ ಎರಡನೇ ಬೆಳೆಗೆ ಏ. ೧೦ರವರೆಗೆ ನೀರು ಪೂರೈಸಬೇಕು ಜತೆಗೆ ಕ್ರಸ್ಟ್‌ ಗೇಟ್‌ ಅಳವಡಿಸಬೇಕೆಂದು ಒತ್ತಾಯಿಸಿದರು.ಈ ಬಾರಿ ಅಣೆಕಟ್ಟೆಯಲ್ಲಿ ಸುಮಾರು ೮೦ಟಿಎಂಸಿ ನೀರು ಇದೆ. ಈಗ ಲಭ್ಯವಿರುವ ನೀರನ್ನು ನಾಲ್ಕು ಜಿಲ್ಲೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆ ಮಾಡಿದರೆ ಭತ್ತದ ಬೆಳೆಗಾರರು ಉಳಿಯುತ್ತಾರೆ. ಏಕಾಏಕಿ ಸಚಿವ ತಂಗಡಗಿ ನೀರು ಇಲ್ಲ ಎನ್ನುವುದು ಮೂರ್ಖತನ. ಸಿಎಂ ಸಿದ್ದರಾಮಯ್ಯ ನಾಲ್ಕು ಜಿಲ್ಲೆ ರೈತರ ಒಳತಿಗಾಗಿ ಮುಂದಾಗಬೇಕು. ನಮ್ಮ ಪಾಲಿನ ನೀರನ್ನು ಕಾರ್ಖಾನೆಗೆ ಮಾರಿಕೊಳ್ಳದೆ ಬೆಳೆ ಬೆಳೆಯಲು ಬಿಡುಗಡೆ ಮಾಡಬೇಕೆಂದರು.

ಮೊದಲು ತಜ್ಞರ,ರೈತ ಮುಖಂಡರ, ನಾಲ್ಕು ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದು ನೀರು ಬಿಡುವ ಸಾಧಕ ಬಾಧಕ ಬಹಿರಂಗವಾಗಿ ಚರ್ಚೆ ಮಾಡಿ ತೀರ್ಮಾನಿಸಲಿ. ಅದನ್ನು ಬಿಟ್ಟು ಏಕ್‌ದಂ ನೀರು ಬಿಡುವುದಿಲ್ಲ ಎನ್ನುವುದು ರೈತರ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ನೀರಿಲ್ಲದೇ ಆಗುವ ಅನಾಹುತಕ್ಕೆ ಸಚಿವ ತಂಗಡಗಿ ಮತ್ತು ರಾಜ್ಯ ಸರ್ಕಾರ ಹೊಣೆ ಹೋರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಳೆದ ಕೆಲವು ತಿಂಗಳಿಂದ ಅಕಾಲಿಕ ಮಳೆಯಿಂದ ಭತ್ತದ ಕಣಜದಲ್ಲಿ ತೆನೆ ತುಂಬಿ ಕಟಾವಿಗೆ ಬಂದ ಬೆಳೆ ಹಾಳಾಗಿದೆ. ರೈತರು ಈಗಾಗಲೇ ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿಂದ ಮುಂದಿನ ಆಗಷ್ಟ ವರೆಗೆ ಒಟ್ಟು ೮ ತಿಂಗಳ ಗೇಟ್ ದುರಸ್ಥಿ ಕಾಮಗಾರಿಗೆ ಕಾಲಾವಕಾಶ ತೆಗೆದುಕೊಂಡರೆ ರೈತರ ಪಾಡೇನು. ಸರ್ಕಾರ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಮೊದಲು ಮುಂದಾಗಬೇಕು. ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದ್ದ ವೇಳೆ ಸರ್ಕಾರ ಕ್ರಸ್ಟ್‌ ಗೇಟ್‌ ಕೂಡಿಸುವ ಕೆಲಸ ಮಾಡಿದೆ ಅಲ್ಲವೇ. ಅದೇ ರೀತಿ ಈಗ ೮೦ ಟಿಎಂಸಿ ನೀರು ಇರುವಾಗ ಇಂಥ ಕೆಲಸ ಮಾಡಲು ಮುಂದಾಗಲಿ. ರಾಜ್ಯದಲ್ಲಿ ನುರಿತ ತಜ್ಞರು, ತಾಂತ್ರಿಕತೆಗೆ ಕೊರತೆ ಇಲ್ಲ. ದೇಶದ ಇತರೆ ಭಾಗದಿಂದ ತಜ್ಞರನ್ನು, ತಾಂತ್ರಿಕ ಕೆಲಸಗಾರ ಸಲಹೆ ಪಡೆದು ಕೆಲಸ ಮಾಡಲಿ. ಮುಖ್ಯವಾಗಿ ಕ್ರಸ್ಟ್‌ ಗೇಟ್‌ ದುರಸ್ಥಿಗೆ ತೆಗೆದುಕೊಂಡ ಕಾಲಾವಕಾಶ ಪರಾಮರ್ಶಿಸಿ ಮೂರು ತಿಂಗಳ ಕಾಲಾವಕಾಶ ನಿಗದಿ ಪಡಿಸಿದರೆ ರೈತರಿಗೆ ಎರಡನೇ ಬೆಳೆಗೆ ನೀರು ಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಉದ್ಯಮಿ ಜಿ.ತಿಮ್ಮನಗೌಡ ಮಂಡಲ ಅಧ್ಯಕ್ಷ ಮಸ್ಕಿ ಮಂಜುನಾಥ ಇದ್ದರು.

ಪ್ರತಿಭಟನೆ: ರಸ್ತಾರೋಖ್:

ಎರಡನೇ ಬೆಳೆಗೆ ನೀರು ಬಿಡುಗಡೆ ಮಾಡದಿದ್ದರೆ ನ. ೪ರಂದು ಕಾರಟಗಿಯಲ್ಲಿ ಬೃಹತ್ ರಸ್ತಾರೋಖ್ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರನ್ನೊಳಗೊಂಡು ಈ ಹೋರಾಟ ಮಾಡಲಾಗುವುದು. ಮೊದಲು ರಾಜ್ಯ ಸರ್ಕಾರ ಎಲ್ಲರ ಸಭೆ ಕರೆದು ನೀರು ನಿಲ್ಲಿಸುವ ಅಥವಾ ಬಿಡುವ ಕುರಿತು ತೀರ್ಮಾನ ಮಾಡಿ ಎಂದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು