ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿರುವುದರಿಂದ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಸ್ಥಾನ ಪ್ರಭಾವ ಇರುವ ಸ್ಥಾನ. ಹಾಗಾಗಿ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಹಗರಣ ನಡೆದಿರುವ ಬಗ್ಗೆ ಎಲ್ಲವೂ ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿದ್ದರೆ ತನಿಖೆ ಸರಿಯಾಗಿ ನಡೆಯುವುದಿಲ್ಲ. ಹಾಗಾಗಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸ ಬೇಕು ಎಂದು ಹೇಳಿದರು.
ಪ್ರತಿ ಗ್ರಾ.ಪಂ.ನಲ್ಲಿ ಸಹಕಾರ ಸಂಘ ಸ್ಥಾಪಿಸಬೇಕು ಅನ್ನುವುದು ಪ್ರಧಾನಿ ಅವರ ಕನಸು. ಹಾಗಾಗಿ ಈಗಾಗಲೇ ಪ್ರಧಾನಿಯವರು ಘೋಷಣೆ ಮಾಡಿದ್ದಾರೆ. ಸಹಕಾರ ಸಂಘ ಬಲಿಷ್ಠ ಸ್ತಂಭ ಆಗಬೇಕು ಎಂದರು.
ವಿಐಎಸ್‌ಎಲ್ ಕನ್ನಡಿಗರ ಹೆಮ್ಮೆಯ ಸಂಸ್ಥೆ. ಅದರ ಉಳಿವಿಗಾಗಿ ನಮ್ಮ ಪ್ರಯತ್ನ ಇರುತ್ತದೆ. ಕಾರ್ಖಾನೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಭೇಟಿ ನೀಡಿದ್ದಾರೆ. ಇದನ್ನ ನಮ್ಮ ಕುಟುಂಬ ಆರಂಭಿಸಿತ್ತು. ಅದನ್ನ ಉಳಿಸುವ ಕೆಲಸ ಆಗಲಿದೆ. ವಿಐಸ್‌ಎಲ್ ಹೆಮ್ಮೆಯ ಸಂಸ್ಥೆಯಾಗಿದೆ. ಅದಕ್ಕೆ ನಮ್ಮ ಪ್ರೋತ್ಸಾಹವಿದೆ ಎಂದು ಹೇಳಿದರು.
ಮೈಸೂರು-ಕೊಡಗು ಆರ್ಗನಿಕ್ ಅಭಿವೃದ್ಧಿಯಾಗಬೇಕು. ಪಾರಂಪರಿಕ ಅಭಿವೃದ್ಧಿಯ ಅಗತ್ಯವಿದೆ. ಪ್ರವಾಸೋದ್ಯಮ ಆರ್ಥಿಕವಾಗಿ ಅವಲಂಭಿಸಿದೆ. ಮೈಸೂರಿನಲ್ಲಿ ಏರ್ ಪೋರ್ಟ್ ಆಗ ಬೇಕಿದೆ. 46 ಎಕರೆ ಭೂಸ್ವಾಧೀನ ಆಗ ಬೇಕಿದೆ. ಹೈವೆ, ಲೈಟ್ ಕಂಬಗಳು ಶಿಫ್ಟ್ ಆಗಬೇಕಿದೆ. ನಂತರ ಕ್ರೆಡಿಲ್ ನಿಂದ ಏರ್ ಪೋರ್ಟ್ ನಿರ್ಮಿಸಲಾಗುವುದು ಎಂದರು.
ಕೇಂದ್ರ ಸಚಿವೆ ನಿರ್ಮಲ ಸೀತಾ ರಾಮನ್ ಅವರ ಮೇಲೆ ಎಫ್‌ಐಆರ್ ಆಗಿದೆ. ಇದರ ಬಗ್ಗೆ ಕಾನೂನು ಕ್ರಮ ಆಗಲಿದೆ. ಮೊದಲು ಸಿಎಂ ರಾಜೀನಾಮೆ ನೀಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್,ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್, ಪ್ರಮುಖರಾದ ಎಸ್.ದತ್ತಾತ್ರಿ, ಮಾಜಿ ಶಾಸಕ ಕೆ.ಜಿ ಕುಮಾರ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇವಾಲಯ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲ
ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ದೇವಸ್ಥಾನದ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಇರಬಾರದು. ಈ ವಿಷಯ ಹೈಕೋರ್ಟ್‌ನಲ್ಲಿದೆ. ಇದರ ಬಗ್ಗೆ ಚರ್ಚೆ ಮಾಡದಿರುವುದೇ ಒಳ್ಳೆ ಯದು. ಕೊಡಗು ಪರಂಪರೆ ಸಂರಕ್ಷಣೆ ಮಾಡಬೇಕು. ಮೈಸೂರು ಕೊಡಗು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುವುದು. ಕುಶಾಲನಗರಕ್ಕೆ ಹೈವೇ ನಿರ್ಮಾಣ ವಿಸ್ತರಣೆಯಾಗಲಿದೆ ಎಂದು ತಿಳಿಸಿದರು.
ತೀರ್ಪು ಬರುವವರೆಗೆ ಸಿಎಂ ರಾಜೀನಾಮೆ ನೀಡಲಿ: ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹ
ಶಿವಮೊಗ್ಗ: ಕೋರ್ಟ್ ತೀರ್ಪಿಗಿಂತ ಯಾರೂ ದೊಡ್ಡವರಲ್ಲ. ಮುಡಾ ಹಗರಣದಲ್ಲಿ ತನಿಖೆ ಮಾಡುವಂತೆ ನ್ಯಾಯಾಲಯ ಹೇಳಿದೆ. ಹೀಗಿರುವಾಗ ತಮ್ಮ ಮೇಲಿನ ಆರೋಪ ನಿರಾಧಾರ ಎಂದರೆ ತನಿಖೆಯ ಮೂಲಕ ಹೊರ ಬರಲಿ. ಅಲ್ಲಿಯವರೆಗೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಆಗ್ರಹಪಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ಸರಿಯೇ ನ್ಯಾಯಾಲಯದ ಆದೇಶ ಪಾಲಿಸಬೇಕು. ಸತ್ಯ ಮೇವ ಜಯತೇ..ನಮಗೆ ನ್ಯಾಯ ಸಿಗುತ್ತೆ ಅಂತಾ ಸಿದ್ದರಾಮಯ್ಯ ಬಂದ್ರು. ಆದರೆ, ಕೋರ್ಟ್ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ಕೊಟ್ಡಿದೆ. ಅವರು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸಿದ್ದರಾಮಯ್ಯ ಅವರ ಶ್ರೀಮತಿ ಮುಗ್ಧೆ. ಆ ತಾಯಿ ಎಂದೂ ಹೊರಗೆ ಬಂದವರಲ್ಲ. ಸಿದ್ದರಾಮಯ್ಯನವರು ತಮ್ಮ ಪತ್ನಿಯ ಹತ್ತಿರ ಸಹಿ ಮಾಡಿಸಿಕೊಂಡಿದ್ದಾರೆ. ರಾಜ್ಯದ ಜನರಿಗೆ ನೀವು ತಪ್ಪಿತಸ್ಥರೆಂದು ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಕುಟುಕಿದರು.ಇಲ್ಲಿ ನಿಮಗೊಂದು ಕಾನೂನು, ನಮಗೊಂದು ಕಾನೂನು ಇದೆಯೇ? ಈ ಹಿಂದೆ ನನ್ನ ವಿರುದ್ಧ ಆರೋಪ ಬಂದಾಗ ತನಿಖೆ ನಡೆದು ನಾನು ತಪ್ಪಿತಸ್ಥನಲ್ಲ ಎಂದು ಸಾಬೀತು ಪಡಿಸಿಕೊಂಡೆ. ನೀವು ಹಾಗೆಯೇ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಹೇಳಿದರು.
ಗಣಪತಿ ಮೆರವಣಿಗೆಯಲ್ಲಿ ಗಲಾಟೆ:ದಾವಣಗೆರೆಯ ಗಣಪತಿ ಮೆರವಣಿಗೆ ಗಲಾಟೆ ವಿಚಾರಕ್ಕೆ ಪ್ರತಿಕ್ರಿಸಿದ ಈಶ್ವರಪ್ಪ, ಇತ್ತೀಚೆಗೆ ಗಣಪತಿ ಮೆರವಣಿಗೆಯಲ್ಲಿ ಗಲಾಟೆ ನಡೆಯುತ್ತಿವೆ. ಮಸೀದಿಯಿಂದ ತಲ್ವಾರ್, ಮಚ್ಚು ಹೊರ ಬರುತ್ತಿವೆ. ಆದರೆ ಗಣಪತಿ ಪ್ರತಿಷ್ಠಾಪನೆ ಮಾಡಿದವರ ಮೇಲೆ ಕೇಸ್ ದಾಖಲಾಗುತ್ತಿವೆ. ಗಣಪತಿ ಕೂರಿಸಿದವರು ಎ1, ಎ2 ಆರೋಪಿಗಳಾಗುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಇಂತಹ ಪಾಪ ಮಾಡಿಯೇ ಈಗ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿರುವುದು. ಹಿಂದುತ್ವ ತುಳಿಯಬೇಡಿ, ಹಿಂದುತ್ವ ರಕ್ಷಣೆ ಮಾಡಿ. ಹಿಂದುತ್ವ ತುಳಿಯುವುದು ಕಾಂಗ್ರೆಸ್ ನೀತಿ. ಈ ನೀತಿಯನ್ನು ಚಾಮುಂಡೇಶ್ವರಿ ತಾಯಿ ಒಪ್ಪುವುದಿಲ್ಲ ಎಂದು ಕಿಡಿಕಾರಿದರು.
ಅತ್ತ ಜಿಲ್ಲೆಯಲ್ಲಿ ಗೋವುಗಳ ಕಳವು ನಡೆಯುತ್ತಿದೆ. ಗೋವು ಕಳ್ಳರ ವಿರುದ್ಧ ಕ್ರಮ ಆಗುತ್ತಿಲ್ಲ. ಗೋವು ಕಳ್ಳರ ಹಿಡಿದರೆ ಮುಸ್ಲಿಂರ ವೋಟು ಸಿಗಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಓಲೈಕೆ ಮಾಡುತ್ತಿದ್ದಾರೆ. ಗೋವು ಕಳ್ಳರ ಹಿಡಿದರೆ ಮುಸ್ಲಿಂರ ಓಟು ಸಿಗಲ್ಲ ಎಂಬ ನೀತಿ ಬದಲಾಗಬೇಕಿದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಅಣ್ಣ-ತಮ್ಮಂದಿರ ರೀತಿ ಇದ್ದೇವೆ. ನೀವೇ ಅವರನ್ನು ಎತ್ತಿ ಕಟ್ಟುತ್ತಿದ್ದೀರಾ? ಎಂದು ಪ್ರಶ್ನಿಸಿದರು.