-ಮೈಸೂರು ಚಲೋ ಪಾದಯಾತ್ರೆಗೆ ತೆರಳಿದ ಜೆಡಿಎಸ್ ಕಾರ್ಯಕರ್ತರುಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಇಲ್ಲಿನ ಜೆಡಿಎಸ್ ಕಚೇರಿ ಮುಂಭಾಗದಲ್ಲಿ ಜನಾಂದೋಲನಕ್ಕೆ ತೆರಳಿದ ಕಾರ್ಯಕರ್ತರ ಬಸ್ಸುಗಳಿಗೆ ಮುನೇಗೌಡ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಮುಡಾ ನಿವೇಶನ ಹಂಚಿಕೆ ಅಕ್ರಮ, ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣವರ್ಗಾವಣೆ ಪ್ರಕರಣ ಸೇರಿದಂತೆ ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ನಡೆ ಶಂಕಾಸ್ಪದವಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದು, ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಿತ್ತು. ಆದರೆ ಅಧಿಕಾರಕ್ಕೆ ಅಂಟಿಕೊಂಡು ಜನದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ವಾಲ್ಮೀಕಿ ಹಗರಣ ಹೊರಬಂದ ತಕ್ಷಣ ಸಚಿವ ಬಿ.ನಾಗೇಂದ್ರ ಅವರಿಗೆ ಮುಖ್ಯಮಂತ್ರಿ ಕ್ಲೀನ್‌ಚಿಟ್ ನೀಡಿದ್ದರು. ಆದರೆ ಬಳಿಕ ನಾಗೇಂದ್ರ ಬಂಧನವಾಯಿತು. ಸ್ವಾರ್ಥ ರಾಜಕಾರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಹಿಂದಿನ ಸರ್ಕಾರ ಅನುಮತಿ ನೀಡಿದ್ದ ಟೆಂಡರ್‌ಗಳು, ಆದೇಶಗಳನ್ನು ತಡೆಹಿಡಿಯಿತು. ಅದೇ ರೀತಿ ಮುಡಾ ನಿವೇಶನ ಹಂಚಿಕೆ ವಿಚಾರದಲ್ಲೂ ಅಕ್ರಮ ಹಂಚಿಕೆಯನ್ನು ರದ್ದು ಮಾಡಬಹುದಿತ್ತು. ಹಾಗೆ ಮಾಡುವ ಬದಲು ತಮ್ಮನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ದೂರಿದರು.
ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ತಾಲೂಕಿನಿಂದ ಸಾವಿರಾರು ಮಂದಿ ಬಿಜೆಪಿ-ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಪಾದಯಾತ್ರೆ, ಜನಾಂದೋಲನದಲ್ಲಿ ಭಾಗವಹಿಸುತ್ತಿದ್ದು, ಶುಕ್ರವಾರ ಪಾದಯಾತ್ರೆಯಲ್ಲಿ ಪಾಲ್ಗೊಂಡು,ಶನಿವಾರ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಈ ವೇಳೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ನಗರಸಭೆ ಮಾಜಿ ಸದಸ್ಯ ಚಂದ್ರಶೇಖರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನಿರಾಮಣ್ಣ, ಮಾಧ್ಯಮ ವಕ್ತಾರ ಕುಂಟನಹಳ್ಳಿ ಮಂಜುನಾಥ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ, ನಗರ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಮುಖಂಡರಾದ ಶಶಿ, ಸತೀಶ್, ಧರ್ಮೇಂದ್ರ, ಪ್ರಭಾಕರ್, ರಾಮದಾಸ್, ಕೆಂಪೇಗೌಡ, ಶ್ರೀನಿವಾಸ್, ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.