ಸಿಎಂ ರಾಜೀನಾಮೆ ನೀಡಲೇಬೇಕು: ವಿಜಯೇಂದ್ರ

KannadaprabhaNewsNetwork |  
Published : Oct 19, 2024, 12:22 AM IST
45456 | Kannada Prabha

ಸಾರಾಂಶ

ಮೈಸೂರು ಕೆಸರೆ ಗ್ರಾಮದಿಂದಲೇ ಸಿಎಂ ಕೆಸರು ಎರಚಿಕೊಂಡಿದ್ದಾರೆ. ಅಕ್ರಮವಾಗಿ ಅವರ ಕುಟುಂಬ ಜಮೀನು ಖರೀದಿಸಿದೆ. ಅಲ್ಲದೇ, ಮುಡಾದಿಂದ 14 ನಿವೇಶನ ಸಿಎಂ ಪತ್ನಿಗೆ ನೀಡಲಾಗಿದೆ.

ಹುಬ್ಬಳ್ಳಿ:

ಮುಡಾ ಹಗರಣ ಕೇವಲ 14 ನಿವೇಶನಕ್ಕೆ ಮಾತ್ರ ಸೀಮಿತವಾಗಿಲ್ಲ. ನಾಲ್ಕೈದು ಸಾವಿರ ಕೋಟಿ ಬೆಲೆ ಬಾಳುವ ನಿವೇಶನವನ್ನು ಹಾದಿ ಬೀದಿಯಲ್ಲಿ ಹೋಗುವ ದಲ್ಲಾಳಿಗಳಿಗೆ ನೀಡಲಾಗಿದೆ. ಹೀಗಾಗಿಯೇ ಇಡಿ ದಾಳಿ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಇಲ್ಲಿಯ ಕೇಶವ ಕುಂಜಕ್ಕೆ ಶುಕ್ರವಾರ ಭೇಟಿ ನೀಡಿ ಆರ್‌ಎಸ್‌ಎಸ್‌ ಪ್ರಮುಖರ ಜತೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ರೀತಿಯಲ್ಲಿ ಮುಡಾ ಮೇಲೆ ಇಡಿ ದಾಳಿ ನಡೆಸಿದೆ. ಇಡಿ ದಾಳಿ ಪಕ್ಷಪಾತದಿಂದ ಕೂಡಿದೆ ಎನ್ನುವುದಾದರೆ, ಯಾವ ಪುರಷಾರ್ಥಕ್ಕೆ ನಿವೇಶನ ವಾಪಸ್‌ ನೀಡಿದ್ದೀರಿ? ಸಿಎಂ ಸ್ಥಾನದಲ್ಲಿರುವ ಅವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಕಾನೂನಿನ ಕುಣಿಕೆಯಲ್ಲಿ ಸಿಎಂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಪಾಪದ ಕೊಡ ತುಂಬಿದೆ ಎಂದು ಕುಟುಕಿದರು.

ಮೈಸೂರು ಕೆಸರೆ ಗ್ರಾಮದಿಂದಲೇ ಸಿಎಂ ಕೆಸರು ಎರಚಿಕೊಂಡಿದ್ದಾರೆ. ಅಕ್ರಮವಾಗಿ ಅವರ ಕುಟುಂಬ ಜಮೀನು ಖರೀದಿಸಿದೆ. ಅಲ್ಲದೇ, ಮುಡಾದಿಂದ 14 ನಿವೇಶನ ಸಿಎಂ ಪತ್ನಿಗೆ ನೀಡಲಾಗಿದೆ. ಇದೇ ಹಿನ್ನೆಲೆಯಲ್ಲಿ ನ್ಯಾಯಾಲಯವು ತನಿಖೆಗೆ ಆದೇಶ ಬಂದಿದ್ದು, ಸಿಬಿಐ ತನಿಖೆ ನಡೆಸಬೇಕೆಂಬ ಅರ್ಜಿ ನ್ಯಾಯಾಲಯದಲ್ಲಿದೆ ಎಂದು ಹೇಳಿದರು.

ಮುಡಾ ಹಗರಣ ವಿರೋಧಿಸಿ ಬಿಜೆಪಿ ಹೋರಾಟ ಮಾಡಿದ ಬಳಿಕ ನಿವೇಶನ ಹಿಂದಿರುಗಿಸಲಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ, ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದ ಸಿಎಂ ಅವರ ಅಸಲಿಯತ್ತು ಬಹಿರಂಗವಾಗಿದ್ದು, ಸಿಎಂ ಅವರೇ ಆರೋಪಿ ನಂಬರ್‌ 1 ಆಗಿದ್ದು, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಹಾಗಾಗಿ ಸಿಎಂ ಭಂಡತನ ಬಿಟ್ಟು ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇನ್ನು ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ದೇಶ ದ್ರೋಹ ಕೆಲಸ ಮಾಡಿದವರ ಬೆಂಬಲ ನೀಡುತ್ತಿರುವ ಸರಕಾರದ ನಡೆ ಎಷ್ಟುಸರಿ ಎಂದು ಕಿಡಿಕಾರಿದ ಅವರು, ಅ. 25ರಂದು ಪ್ರತಿಭಟನೆ ನಡೆಸಲು ಯೋಜಿಸಲಾಗಿತ್ತು. ಆದರೀಗ ಚುನಾವಣೆ ಇರುವ ಕಾರಣಕ್ಕೆ ಈ ಬಗ್ಗೆ ಯೋಚಿಲಾಗುತ್ತಿದ್ದು, ಬಿಜೆಪಿ ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಹೇಳಿದರು.

ಶೀಘ್ರ ದೆಹಲಿ ಭೇಟಿವಿಧಾನಸಭೆ ಚುನಾವಣೆ ಚರ್ಚೆಗೆ ಶೀಘ್ರದಲ್ಲಿಯೇ ದೆಹಲಿಗೆ ಹೋಗುತ್ತಿದ್ದೇನೆ. ಎರಡ್ಮೂರು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಚನ್ನಪಟ್ಟಣದ ವಿಚಾರ ಹೈಕಮಾಂಡ್‌ ತೀರ್ಮಾನಿಸಲಿದೆ. ಈಗಾಗಲೇ ಕುಮಾರಸ್ವಾಮಿ ಅವರು ತಮ್ಮ ಅಭಿಪ್ರಾಯ ಹೇಳಿದ್ದು, ರಾಷ್ಟ್ರೀಯ ಅಧ್ಯಕ್ಷರ ಜತೆ ಚರ್ಚೆ ಮಾಡಲಾಗುವುದು. ಇನ್ನು ಶಿಗ್ಗಾವಿ ಕ್ಷೇತ್ರದ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಮುಖ್ಯ. ಪಕ್ಷದ ಪ್ರಮುಖರ, ಕಾರ್ಯಕರ್ತರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ