ಕನ್ನಡಪ್ರಭ ವಾರ್ತೆ ವಿಜಯಪುರ
ನ್ಯಾ.ಸದಾಶಿವ ಆಯೋಗದ ವರದಿಯನ್ನು ಬದಿಗಿರಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದಲಿತರಿಗೆ ನ್ಯಾಯ ಕೊಡಿಸುವ ನೈಜ ಇಚ್ಛಾಶಕ್ತಿ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದ್ದಾರೆ.ಈ ಕುರಿತು ಶನಿವಾರ ಪ್ರಕಟಣೆ ನೀಡಿರುವ ಅವರು, ಅಹಿಂದ ನಾಯಕ ಎಂದು ಹೇಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಹಿಂದ ಪರವಾದ ಯಾವ ಕಾಳಜಿಯೂ ಇಲ್ಲ. ತಾನು ಮಾಡುತ್ತಿರುವ ತಪ್ಪುಗಳನ್ನು ಮುಚ್ಚಿಹಾಕಲು ಈಗ ಜಾತಿ ಜನಗಣತಿ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದಲಿತತರ ಮೇಲೆ ನೈಜವಾದ ಕಾಳಜಿ ಇದ್ದಿದ್ದರೆ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುತ್ತಿದ್ದರು. 2012-13ರಲ್ಲಿಯೇ ನ್ಯಾ.ಸದಾಶಿವ ಆಯೋಗ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಇನ್ನೂ ಅನುಷ್ಠಾನಗೊಳಿಸಬೇಕಾದ ಸರ್ಕಾರ ನಂತರ ಅಂದರೆ 2015ರಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಜಾರಿಗೊಳಿಸಲು ತರಾತುರಿ ಮಾಡುತ್ತಿದೆ. ಇದಕ್ಕಿಂತಲೂ ಎಷ್ಟೋ ವರ್ಷ ಪೂರ್ವ ಒಳಮೀಸಲಾತಿ ಶಿಫಾರಸು ಉಳ್ಳ ನ್ಯಾ.ಸದಾಶಿವ ಆಯೋಗದ ವರದಿಯನ್ನು ಏಕೆ ಜಾರಿಗೊಳಿಸಲಿಲ್ಲ ಎಂದು ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಲಿತರಿಗೆ ನ್ಯಾಯ ಕೊಡಿಸುವುದನ್ನು ಬಿಟ್ಟು ನ್ಯಾ.ಸದಾಶಿವ ಆಯೋಗದ ವರದಿ ಬದಿಗಿರಿಸಿಕೊಂಡಿದ್ದಾರೆ. ನಂತರ ರಚನೆಯಾದ ಕಾಂತರಾಜ್ ಆಯೋಗದ ವರದಿ ಜಾರಿ ಮಾಡಲು ಮುಂದಾಗಿದ್ದಾರೆ. 2015ರಿಂದಲೂ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಸಕ್ತಿ ವಹಿಸುತ್ತಿಲ್ಲ. ಈ ರೀತಿ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಸಿದ್ಧರಾಮಯ್ಯ ಅವರಿಗೆ ಅಹಿಂದ ನಾಯಕ ಎಂಬ ಪಟ್ಟ ಕಟ್ಟುವ ಅಗತ್ಯವಿಲ್ಲ ಎಂದು ಜಿಗಜಿಣಗಿ ಹೇಳಿದ್ದಾರೆ. ಅಹಿಂದ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಅಹಿಂದ ವರ್ಗಕ್ಕೆ ಯಾವ ರೀತಿಯಿಂದಲೂ ನ್ಯಾಯ ದೊರೆತಿಲ್ಲ. ಹೀಗಾಗಿ ಅವರನ್ನು ಅಹಿಂದ ನಾಯಕ ಎಂದು ಬಿಂಬಿಸುವುದು ಸರಿಯಲ್ಲ ಎಂದಿದ್ದಾರೆ.ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಈ ಜಾತಿ ಜನಗಣತಿಯನ್ನು ಸೃಷ್ಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಆಡಳಿತ ನಡೆಸಲು ವೈಫಲ್ಯವಾಗಿದ್ದಾರೆ. ಬೆಲೆ ಏರಿಕೆ ಮೊದಲಾದ ಜನವಿರೋಧಿ ಕ್ರಮ ಹಾಗೂ ಮುಡಾ ಹಗರಣ, ಗಣಿ ನವೀಕರಣ ಹಗರಣ ಹೀಗೆ ಸಾಲು ಸಾಲು ಹಗರಣಗಳಿಂದ ಜನರಿಗೆ ಸಿದ್ಧರಾಮಯ್ಯ ಅವರಿಗೆ ವಿಶ್ವಾಸ ಸಂಪೂರ್ಣ ಕಡಿಮೆಯಾಗಿದೆ. ಹೀಗಾಗಿ ಅವರೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.