-ಕಾಗೋಡು ಚಳವಳಿ-೭೪ ಕಾರ್ಯಕ್ರಮದಲ್ಲಿ ಕಾಗೋಡು ತಿಮ್ಮಪ್ಪನವರಿಗೆ ನೇಗಿಲಯೋಗಿ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ಸಾಗರ
ನನಗೆ ದೊರಕಿದ ಅವಕಾಶವನ್ನು ಬಳಸಿಕೊಂಡು ಗೇಣಿ ರೈತರಿಗೆ ಭೂಮಿ ಹಕ್ಕು ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಮಾಜಿ ಸಚಿವ ಡಾ.ಕಾಗೋಡು ತಿಮ್ಮಪ್ಪ ಹೇಳಿದರು.ಶೃಂಗೇರಿ ಶಂಕರಮಠದ ಭಾರತೀ ತೀರ್ಥ ಸಭಾಭವನದಲ್ಲಿ ಡಾ.ಎಚ್.ಗಣಪತಿಯಪ್ಪ ಸೇವಾ ಟ್ರಸ್ಟ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾಗೋಡು ಚಳವಳಿ-೭೪ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ನೇಗಿಲಯೋಗಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕಾಗೋಡು ಚಳವಳಿ ಪ್ರಾರಂಭವಾಗಿದ್ದಾಗ ನಾನಿನ್ನು ಹುಡುಗ. ಗಣಪತಿಯಪ್ಪ ಕಾಗೋಡು ಚಳವಳಿಯನ್ನು ಕೈಗೆತ್ತಿಕೊಂಡು ಅದನ್ನು ಮುನ್ನಡೆಸಿದ ರೀತಿ ಅನನ್ಯವಾದುದು ಎಂದು ಸ್ಮರಿಸಿಕೊಂಡರು.
ಭೂಮಿ ಬದುಕು ಈ ಹೊತ್ತಿನ ಆತಂಕ ವಿಷಯ ಕುರಿತು ಮಾತನಾಡಿದ ವಾಗ್ಮಿ ಸುಧೀರ್ ಕುಮಾರ್ ಮುರೊಳ್ಳಿ, ಭೂಮಿ ಈಗ ಭೂಮಿಯಾಗಿ ಉಳಿಯದೆ ಮಾರಾಟದ ಸರಕಾಗಿದೆ. ಭೂಮಿಯೊಂದಿಗಿನ ಭಾವನಾತ್ಮಕ ಸಂಬಂಧ ಕಳಚಿದೆ. ಹಣ ಕೊಟ್ಟು ಭೂಮಿ ಕೊಂಡುಕೊಳ್ಳುವುದು, ಮಾರುವುದೇ ಭೂಮಿಯ ಪ್ರಾಧಾನ್ಯತೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಕಾಗೋಡು ಚಳವಳಿ ರೀತಿಯಲ್ಲಿಯೇ ಮತ್ತೊಂದು ಭೂಹೋರಾಟ ನಡೆಯುವ ಅಗತ್ಯವಿದೆ. ರೈತರು ಉಳುಮೆ ಮಾಡುತ್ತಿದ್ದ ಭೂಮಿಯಿಂದ ಅವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ರೈತರು ಬೆಳೆದ ಅಡಕೆ ಸಸಿಯನ್ನು ಕಡಿದು ಹಾಕಲಾಗುತ್ತಿದೆ. ಭೂಮಿ ಆತಂಕ ಹೋಗಲಾಡಿಸುವ ಪರಿಣಾಮಕಾರಿ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಅಶ್ವಿನಿಕುಮಾರ್, ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಪತ್ರಕರ್ತ ಜಿ.ನಾಗೇಶ್, ಬಿ.ಡಿ.ರವಿಕುಮಾರ್ ಹಾಜರಿದ್ದರು. ಕಿರಣಕುಮಾರ್ ಸ್ವಾಗತಿಸಿದರು. ಎಸ್.ಬಸವರಾಜ್ ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.
ಕಾಗೋಡು ತಿಮ್ಮಪ್ಪನವರಿಗೆ ನೇಗಿಲಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.