ಕನ್ನಡಪ್ರಭ ವಾರ್ತೆ ಬೆಂಗಳೂರು
ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳ ಬೆನ್ನಲ್ಲೇ ಗುರುವಾರ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಜತೆ ಮಹತ್ವದ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ, ಕೊರೋನಾ ಸೋಂಕು ಪ್ರಕರಣಗಳ ನಿಯಂತ್ರಣ ಹಾಗೂ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲು ಕೂಡ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ವಿಶ್ವದಾದ್ಯಂತ ಜೆಎನ್.1 ಎಂಬ ಒಮಿಕ್ರಾನ್ ಉಪತಳಿ ತೀವ್ರವಾಗಿ ಹರಡುತ್ತಿದೆ. ರಾಜ್ಯದಲ್ಲಿ ಕೊರೋನಾದಿಂದ ಎರಡು ದಿನದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ಇವರಿಗೆ ಕೊರೋನಾ ಇದ್ದದ್ದು ದೃಢಪಟ್ಟಿದ್ದರೂ ದೀರ್ಘಕಾಲೀನ ಅನಾರೋಗ್ಯಗಳು ಸಾವಿಗೆ ಕಾರಣ. ಹೀಗಿದ್ದರೂ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ದೀರ್ಘಕಾಲೀನ ಕಾಯಿಲೆಗಳನ್ನು ಹೊಂದಿರುವ ಕೊರೋನಾ ಸೋಂಕಿತರಿಗೆ ಕೊರೋನಾ ಜತೆಗೆ ಇತರೆ ಕಾಯಿಲೆಗಳಿಗೂ ಪರಿಣಾಮಕಾರಿ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಆಗಿದ್ದ ತಪ್ಪುಗಳು ಮರುಕಳಿಸಬಾರದು ಎಂದು ಸ್ಪಷ್ಟಪಡಿಸಿರುವುದಾಗಿ ತಿಳಿಸಿದರು.
ಗಡಿಗಳಲ್ಲಿ ಹೆಚ್ಚೆಚ್ಚು ಪರೀಕ್ಷೆ:
ಕೇರಳ ಹಾಗೂ ತಮಿಳುನಾಡು ಗಡಿ ಭಾಗದಲ್ಲಿ ನಿಗಾ ವಹಿಸಬೇಕು. ಈ ಭಾಗದಲ್ಲಿ ಜ್ವರದ ಲಕ್ಷಣಗಳು ಕಂಡುಬಂದರೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ನಡೆಸಬೇಕು.
ಆತಂಕ ಬೇಕಿಲ್ಲ, ಎಚ್ಚರ ಅಗತ್ಯ:ರಾಜ್ಯದಲ್ಲಿ 92 ಸಕ್ರಿಯ ಸೋಂಕಿತರು ಇದ್ದಾರೆ. ಇದರಲ್ಲಿ ಬೆಂಗಳೂರು ನಗರದಲ್ಲೇ 80 ಪ್ರಕರಣ ಇವೆ. ಈ ಬಗ್ಗೆ ಯಾರೂ ಆತಂಕಪಡಬೇಕಾಗಿಲ್ಲ. ಆದರೆ ಎಚ್ಚರಿಕೆ ವಹಿಸಬೇಕು. ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ. ಸರ್ಕಾರದ ಜತೆಗೆ ಜನರು ಸಹಕರಿಸಬೇಕು ಎಂದು ಹೇಳಿದರು.
ವೈಭವೀಕರಿಸಬೇಡಿಮಾಧ್ಯಮಗಳು ಸೇರಿದಂತೆ ಎಲ್ಲರೂ ಜವಾಬ್ದಾರಿ ಅರಿತು ನಡೆಯಬೇಕು. ಪ್ರಸ್ತುತ ಕೊರೋನಾ ಆತಂಕ ಸೃಷ್ಟಿಸುವ ಮಟ್ಟದಲ್ಲಿ ಇಲ್ಲ. ಮಾಧ್ಯಮಗಳು ವೈಭವೀಕರಿಸಿ ಜನರಲ್ಲಿ ಆತಂಕ ಸೃಷ್ಟಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಎಲ್ಲರಿಗೂ ಮಾಸ್ಕ್ ಬೇಕಿಲ್ಲ
ಉಳಿದಂತೆ ಹೆಚ್ಚು ಜನಸಂಪರ್ಕ ಉಳ್ಳವರು, ಜನಸಂದಣಿಗೆ ಹೋಗುವವರು ಮಾಸ್ಕ್ ಧರಿಸಬೇಕು ಎಂದು ಶಿಫಾರಸು ಮಾಡಿದ್ದೇವೆ. ಶಾಲಾ-ಕಾಲೇಜುಗಳು ಕೆಲ ಕಡೆ ಮಕ್ಕಳಿಗೆ ಮಾಸ್ಕ್ ಧರಿಸುವಂತೆ ಸೂಚಿಸಿವೆ. ಇದು ಒಳ್ಳೆಯದು. ಆದರೆ ಸರ್ಕಾರದಿಂದ ಸದ್ಯಕ್ಕೆ ಎಲ್ಲರಿಗೂ ಮಾಸ್ಕ್ ಕಡ್ಡಾಯ ಎಂದು ಹೇಳಿಲ್ಲ. ಅಂತಹ ಅಗತ್ಯ ಇನ್ನೂ ಬಂದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
-----ಕ್ರಿಸ್‌ಮಸ್, ಹೊಸ ವರ್ಷಕ್ಕೆ ಪ್ರತ್ಯೇಕ ನಿರ್ಬಂಧಗಳಿಲ್ಲ
ಕ್ರಿಸ್‌ಮಸ್, ಹೊಸ ವರ್ಷಾಚರಣೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಎರಡೂ ಹಬ್ಬಗಳ ಆಚರಣೆ ವೇಳೆ ಜನದಟ್ಟಣೆ ಇದ್ದರೆ ಅಂತಹ ಕಡೆ ಹೋಗುವವರು ಮಾಸ್ಕ್ ಧರಿಸಿ ಹೋಗಬೇಕು. ಅದನ್ನು ಬಿಟ್ಟು ಉಳಿದ ಯಾವುದೇ ಪ್ರತ್ಯೇಕ ಮಾರ್ಗಸೂಚಿ ರೂಪಿಸಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.-----
ಸಭೆಯ ಇತರೆ ತೀರ್ಮಾನಗಳು* ಆಕ್ಸಿಜನ್ ಕೊರತೆಯಿಂದ ಕಳೆದ ಬಾರಿ ಸಾವು ಹೆಚ್ಚಾಗಿತ್ತು . ಇದು ಮರುಕಳಿಸದಂತೆ ಆಕ್ಸಿಜನ್ ಲಭ್ಯತೆ ಖಾತರಿಪಡಿಸಿಕೊಳ್ಳಬೇಕು. ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಸನ್ನದ್ಧವಾಗಬೇಕು.
* ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕು.* ಕೊರೋನಾ ಸಮರ್ಪಕ ನಿರ್ವಹಣೆ ಹಾಗೂ ಪಾರದರ್ಶಕತೆಗಾಗಿ ಸಚಿವ ಸಂಪುಟ ಉಪ ಸಮಿತಿ ರಚಿಸಬೇಕು.* ಮಾಕ್ ಡ್ರಿಲ್‌ನಲ್ಲಿ ಕಂಡುಬಂದಿರುವ ಲೋಪಗಳನ್ನು ಸರಿಪಡಿಸಿಕೊಂಡು ಎಲ್ಲಾ ಆಸ್ಪತ್ರೆಗಳು ಸಜ್ಜಾಗಬೇಕು.* ಕೊರೋನಾಗಾಗಿಯೇ ಪ್ರತ್ಯೇಕ (ಡೆಡಿಕೇಟೆಡ್) ಆಸ್ಪತ್ರೆಯನ್ನು ಸಜ್ಜುಗೊಳಿಸಬೇಕು.