ಕನ್ನಡಪ್ರಭ ವಾರ್ತೆ ವಿಜಯಪುರ
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಬಡವರಿಗೆ ಮೋಸ ಮಾಡಿದೆ. ಬಡವರ ಮನಸ್ಸು ಗೆದ್ದು ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದಿದೆ, ಆದರೆ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಏಳು ಲಕ್ಷ ಕೋಟಿ ರಾಜ್ಯದ ಸಾಲದಲ್ಲಿ ಐದು ಲಕ್ಷ ಕೋಟಿ ಸಾಲವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ₹38,000 ಕೋಟಿ ಎಸ್‌ಇಪಿ, ಟಿಎಸ್‌ಪಿ ಹಣ ಬಳಕೆ ಮಾಡಿಕೊಂಡಿದ್ದಾರೆ. ಈಗ ಜಾತಿ ಗಣತಿ ವಿಚಾರ ತಂದು ಜನರ ಗಮನ ಬೇರೆಡೆ ಸೆಳೆಯೋಕೆ ಮುಂದಾಗಿದ್ದಾರೆ. ಕಾಂತರಾಜ ವರದಿ ಜಾರಿ ಮಾಡದೇ ಈಗ ಮತ್ತೆ ಜಾತಿಗಣತಿ ಮಾಡುತ್ತಿದ್ದಾರೆ. ಹಿಂದೂ ಧರ್ಮ ಒಡೆಯೋಕೆ ಸಿಎಂ ಮುಂದಾಗಿದ್ದಾರೆ. ಬ್ರಿಟೀಷರು ಪೋರ್ಚುಗೀಸರು ಹಾಗೂ ಇತರರು ಹಿಂದೂ ಧರ್ಮ ವಿಚಾರದಲ್ಲಿ ಕೈ ಹಾಕಿರಲಿಲ್ಲ. ಇದೆಲ್ಲ ಸೋನಿಯಾ ಗಾಂಧಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಚಿತಾವಣಿ ಆಗಿದೆ. ಸಚಿವ ಸಂಪುಟದಲ್ಲಿ ಜಾತಿ ಗಣತಿ ವಿರುದ್ದ ಅವರದ್ದೇ ಹೆಚ್ಚಿನ ಸಚಿವರು ವಿರೋಧ ಮಾಡಿದರು. ನಂತರ ಸಚಿವರಿಗೆ ಬೆದರಿಕೆ ಹಾಕಿ ಒಪ್ಪಿಸಿದ್ದಾರೆಂದು ಗೋವಿಂದ ಕಾರಜೋಳ ಗಂಭೀರ ಆರೋಪ ಮಾಡಿದರು.ಲಂಬಾಣಿ ಕ್ರೈಸ್ತ್, ಹಿಂದೂ ಕ್ರೈಸ್ತ್ ಎಂದೆಲ್ಲ ಮಾಡಲಾಗಿದೆ. ಧರ್ಮಾಂತರ ಆದ ಬಳಿಕ ಮೂಲ ಧರ್ಮವನ್ನು ಹೇಳಲಾಗದು. ಜೈನ ಪಂಚಮಸಾಲಿ ಎಂದು ಮಾಡಿದ್ದಾರೆ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ಧಾರೆ. ಭಾರತವನ್ನು ಕ್ರಿಶ್ಚಿಯನ್ ದೇಶ ಮಾಡುವ ಉದ್ದೇಶ ಸೋನಿಯಾರದ್ದಾಗಿದೆ. ಲಿಂಗಾಯತ ಜಾತಿಯಲ್ಲಿ 56 ಉಪಜಾತಿ ಇದ್ದಿದ್ದನ್ನು 200ಕ್ಕೂ ಅಧಿಕ ಉಪಜಾತಿ ಮಾಡಿದ್ದಾರೆ. ಇದೇ ರೀತಿ ಇತರೆ ಜಾತಿಗಳಲ್ಲಿಯೂ ಉಪಜಾತಿಗಳನ್ನು ಮಾಡಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಬಡವರ ಏಳಿಗೆಗಾಗಿ ಸಮೀಕ್ಷೆ ಮಾಡುವುದಾದರೆ ವೈಜ್ಞಾನಿಕವಾಗಿ ಮಾಡಬೇಕೆಂದು ಒತ್ತಾಯಿಸಿದರು. ನಾಳೆಯಿಂದಲೇ ತರಾತುರಿಯಲ್ಲಿ ಜಾತಿ ಜನಗಣತಿ ಬೇಡ, ಸಮಗ್ರವಾಗಿ ಸಮೀಕ್ಷೆಯಾಗಲಿ ಎಂದು ಒತ್ತಾಯಿಸಿದರು.
ಜಾತಿ ಜಾತಿಗಳ ಮಧ್ಯೆ ಭಿನ್ನಾಭಿಪ್ರಾಯ ತರೋ ಕೆಲಸ ಮಾಡಲಾಗುತ್ತಿದೆ. ಇದರ ಶಾಪ ಸಿದ್ದರಾಮಯ್ಯಗೆ ತಟ್ಟಲಿದೆ. ಬಲಾಢ್ಯರ ಜೊತೆ ಬಡವರು ಹೋರಾಟ ಮಾಡುವಂತಾಗಬಾರದು. ನಾಗಮೋಹನದಾಸ್ ವರದಿಗೆ ₹150 ಕೋಟಿ ಖರ್ಚು ಮಾಡಿ ಆ ವರದಿಯಮನ್ನು ಮೂಲೆಗೆ ಹಾಕಿದ್ದಾರೆ. ಜಾತಿ ಗಣತಿ ಇದೇ ರೀತಿ ಮುಂದುವರೆಸಿದರೆ ಬಿಜೆಪಿ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.ಮತಗಳ್ಳತನ ಆರೋಪದ ವಿಚಾರವಾಗಿ ಮಾತನಾಡಿ, ಅಸ್ಪೃಸ್ಯ ಜನರಿಗೆ ದಲಿತರಿಗೆ ಮಾಡುತ್ತಿರೋ ಮೋಸವಿದು. ಮತಗಳ್ಳತನ ಆರೋಪದ ಮೂಲಕ ಅಸ್ಪಶ್ಯರಿಗೆ ದಲಿತರಿಗೆ ಮತದಾನ ಹಕ್ಕು ಕಸಿದುಕೊಳ್ಳುವ ಹುನ್ನಾರವಿದು. ದೇಶದಲ್ಲಿ ಅನಕ್ಷರಸ್ಥರಿಗೆ ಈ ಆರೋಪದ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ಅಹಿಂದ ನಾಯಕನೆಂದು ಹೇಳುವ ಸಿಎಂ ಸಿದ್ದರಾಮಯ್ಯ ಅವರಿಗಿಂತ ದೊಡ್ಡ ಅಹಿಂದ ನಾಯಕ ಪಿಎಂ ನರೇಂದ್ರ ಮೋದಿಯವರಾಗಿದ್ದಾರೆ ಎಂದು ಶ್ಲಾಘಿಸಿದರು. ಬಾದಾಮಿಯಲ್ಲಿ ಈ ಹಿಂದೆ ಸಿದ್ದರಾಮಯ್ಯ ಮತಗಳ ಖರೀದಿ ಮಾಡಿದ್ದ ಆರೋಪ ಇದೆ. ಇದರ ಬಗ್ಗೆ ಇಬ್ರಾಹಿಂ ಅವರೇ ಆರೋಪ ಮಾಡಿದ್ದರು. ಇದೂ ಸಹ ಎಸ್‌ಐಟಿ ತನಿಖೆಯಾಗಲಿ ಎಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.