ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯದ ಲಿಂಗಾಯತ ಸಮುದಾಯದ ಪ್ರಮುಖ ಮಠಗಳಲ್ಲಿ ಒಂದಾದ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಪಂಚಮಸಾಲಿ ಪೀಠದಿಂದ ಉಚ್ಛಾಟನೆ ಮಾಡಲು ಪೀಠದ ಧರ್ಮದರ್ಶಿಗಳ ನೇತೃತ್ವದ ಸಭೆ ನಿರ್ಧಾರ ತೆಗೆದುಕೊಂಡಿದೆ.ಭಾನುವಾರ ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ಸಭೆ ಸೇರಿದ್ದ ಧರ್ಮದರ್ಶಿಗಳ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಭೆಯ ನಂತರ ಪೀಠದ ಧರ್ಮದರ್ಶಿಗಳಾದ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ನೀಲಕಂಠ ಅಸೂಟಿ ತಿಳಿಸಿದ್ದಾರೆ.
ಜಯಮೃತ್ಯುಂಜಯ ಶ್ರೀಗಳ ಉಚ್ಛಾಟನೆಗೆ ಕಾರಣ ನೀಡಿರುವ ಧರ್ಮದರ್ಶಿಗಳು ಸೆ.17 ರಂದು ಟ್ರಸ್ಟನ ಗಮನಕ್ಕೆ ತರದೆ ಜನಪ್ರತಿನಿಧಿಗಳನ್ನು ಸಭೆ ಕರೆದು ಜನಗಣತಿಯಲ್ಲಿ ಧರ್ಮ ಕಾಲಂನಲ್ಲಿ ಹಿಂದೂ ಎಂದು ಜಾತಿ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಲು ಹೇಳಿರುವುದು ಸರಿಯಲ್ಲ. ಲಿಂಗಾಯತ ತತ್ವ ಬಿಟ್ಟು ಹಿಂದುತ್ವ ಪರ ಹೊರಟಿದ್ದಾರೆ. ಪೀಠದಲ್ಲಿ ಇರುವುದಿಲ್ಲ, ಬಸವತತ್ವಕ್ಕೆ ಅಪಚಾರ ಮಾಡಿದ್ದಾರೆ. ಒಂದು ಪಕ್ಷದ ಪರ ನಿಂತಿದ್ದಾರೆ. ದಾವಣಗೆರೆ ಸೇರಿದಂತೆ ಹಲವೆಡೆ ಸ್ವಂತ ಆಸ್ತಿ ಮಾಡಿದ್ದಾರೆ. ಟ್ರಸ್ಟ್ ಸದಸ್ಯರ ಮಾತು ಕೇಳುತ್ತಿಲ್ಲ. ಸ್ವಾಮೀಜಿಗಳು ಸ್ವಾಮೀಜಿಗಳಾಗಿ ಉಳಿದಿಲ್ಲ ಎಂದು ಆರೋಪಗಳ ಸುರುಮಳೆ ಗೈದಿರುವ ಇವರು ಇಂತಹವರಿಂದ ಪಂಚಮಸಾಲಿ ಸಮುದಾಯಕ್ಕೆ ಯಾವುದೆ ರೀತಿಯಲ್ಲಿ ಶ್ರೇಯಸ್ಸು ಇಲ್ಲ ಎಂದು ಹೇಳಿದ್ದಾರೆ. ಉಚ್ಛಾಟಿಸಲು ತೀರ್ಮಾನ:ಶಾಸಕ ವಿಜಯಾನಂದ ಕಾಶಪ್ಪನವರು ಮಾತನಾಡಿ, ಸ್ವಾಮೀಜಿ ವರ್ತನೆಯನ್ನು ಧರ್ಮದರ್ಶಿಗಳ ಸಭೆ ಗಂಭೀರವಾಗಿ ಪರಿಗಣಿಸಿ ಅವರನ್ನು ಈ ಕ್ಷಣದಿಂದಲೇ ಉಚ್ಛಾಟಿಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು. ಸ್ವಾಮೀಜಿಗಳು ಸ್ವಾಮೀಜಿಯಾಗಿ ಕಾರ್ಯನಿರ್ವಹಿಸುವುದನ್ನು ಮರೆತಿದ್ದಾರೆ. ಅವರ ಕಾರ್ಯವೈಖರಿ ಕುರಿತು ಟ್ರಸ್ಟ್ ಈ ಹಿಂದೆ ಹಲವಾರು ಬಾರಿ ನೋಟಿಸ್ ಸಹ ನೀಡಲಾಗಿತ್ತು. ಅದಕ್ಕೆ ಉತ್ತರ ಸಹ ನೀಡಿದ್ದಾರೆ. ಸುಧಾರಣೆ ಮಾತ್ರ ಕಾಣಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರುವ ದಿನಗಳಲ್ಲಿ ಟ್ರಸ್ಟ್ ಧರ್ಮದರ್ಶಿಗಳು ಸಭೆ ಸೇರಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ ಕಾಶಪ್ಪನವರ, ಈ ಹಿಂದೆ ಮಠಕ್ಕೆ ಬೀಗ ಹಾಕಿದ ಸಂದರ್ಭದಲ್ಲಿ ಸಮುದಾಯದ ಅರವಿಂದ ಬೆಲ್ಲದ ಸೇರಿದಂತೆ ಇನ್ನಿತರರ ಮಾತುಗಳನ್ನು ಸಹ ಪ್ರಸ್ತಾಪಿಸಿದರು.ಸ್ವಾಮೀಜಿ ಸಿಡಿ ಎಲ್ಲಿಲ್ಲಿ ಹೋಗ್ಯಾವ ಬಿಚ್ಚಿಡುವೆ:
ಸ್ವಾಮಿಜಿ ಮಾಡಿರುವ ಆಸ್ತಿ ಹಾಗೂ ಇವರ ಕುರಿತು ಇರುವ ಸಿಡಿ ಎಲ್ಲಿಲ್ಲಿ ಹೋಗ್ಯಾವ ಅವುಗಳನ್ನು ಹೊರಗೆ ತೆಗೆಯುವೆ ಎಂದು ಗುಡುಗಿರುವ ಕಾಶಪ್ಪನವರ ಎಲ್ಲೆಲ್ಲಿ ಟ್ರಸ್ಟ್ ಮಾಡ್ಯಾರ ಮತ್ತು ಸಿಡಿಗಳ ಕುರಿತು ನಮ್ಮ ಹತ್ತಿರ ಎಲ್ಲ ದಾಖಲೆಗಳಿವೆ. ಸಮಯ ಬಂದಾಗ ಎಳೆಎಳೆಯಾಗಿ ಬಿಚ್ಚಿಡುವೆ ಎಂದು ಕಾರ್ಯಕಾರಿಣಿ ಕಾಶಪ್ಪವರ ಹೇಳಿದ್ದಾರೆ.ಕಳೆದ ಹಲವು ತಿಂಗಳಿನಿಂದ ಟ್ರಸ್ಟ್ ಹಾಗೂ ಸ್ವಾಮಿಜಿಗಳ ನಡುವಿನ ಬಹಿರಂಗ ಸಂಘರ್ಷ ಇದೀಗ ಮತ್ತಷ್ಟು ತಾರಕ್ಕಕ್ಕೇರಿದ್ದು ಇಂದಿನ ಧರ್ಮದರ್ಶಿಗಳ ನೇತೃತ್ವದ ಸಭೆಯ ನಿರ್ಧಾರ ಬರುವ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಕಾಯ್ದು ನೋಡಬೇಕಿದೆ.
ಸೋಮವಾರ ಮಾತನಾಡುವೆ: ಉಚ್ಛಾಟನೆ ಕುರಿತು ಜಯಮೃತ್ಯುಂಜಯ ಶ್ರೀಗಳನ್ನು ಸಂಪರ್ಕಿಸಿದಾಗ, ಉಚ್ಛಾಟನೆ ಮಾಹಿತಿ ತಿಳಿದುಕೊಂಡು ಸೋಮವಾರ ಕೂಡಲಸಂಗಮದಲ್ಲಿ ಮಾತನಾಡುವೆ ಎಂದು ತಿಳಿಸಿದ್ದಾರೆ.