ಕನ್ನಡಪ್ರಭ ವಾರ್ತೆ ತಾಳಿಕೋಟೆ: ಪಟ್ಟಣದ ಪುರಸಭೆಯಿಂದ ಸಮುದಾಯ ಆರೋಗ್ಯ ಕೇಂದ್ರದ ಎದುರಿಗಿನ ಅವಧಿ ಮುಗಿದ ೫೧ ಮಳಿಗೆಗಳ ಹರಾಜು ಪ್ರಕ್ರಿಯೆ ಸೆ.೧೮ ರಂದು ನಿಗದಿಪಡಿಸಲಾಗಿತ್ತು. ಮೊದಲು ಬಾಡಿಗೆ ಇದ್ದ ಅಂಗಡಿಕಾರರೊಂದಿಗೆ ಶಾಮೀಲಾಗಿ ಹರಾಜು ಪ್ರಕ್ರಿಯೆಯನ್ನು ಪುರಸಭೆ ಮುಖ್ಯಾಧಿಕಾರಿಗಳು ಮುಂದೂಡಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ಮಳಿಗೆ ಹರಾಜಿನಲ್ಲಿ ಭಾಗವಹಿಸಿದ್ದ ಬಿಡ್‌ದಾರರು ದೂರು ಸಲ್ಲಿಸಿದ್ದಾರೆ.ಸೆ.೨ರಂದು ಪುರಸಭೆಯಿಂದ ಹೊರಡಿಸಿದ ಪ್ರಕಟಣೆಯಲ್ಲಿ ಕಾಲಂ ೪ರಲ್ಲಿ ಮಳಿಗೆ ಹರಾಜಿನಲ್ಲಿ ಅಂಗಡಿ ಪಡೆದ ಬಿಡ್‌ದಾರರು ತಮ್ಮ ದಾಖಲೆಗಳನ್ನು ಪೂರೈಸಬೇಕೆಂದು ನಮೂದಿಸಲಾಗಿದೆ. ಈ ಕುರಿತು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಠರಾವು ಕೂಡ ಆಗಿಲ್ಲಾ ಜಿಲ್ಲಾಧಿಕಾರಿಗಳಿಂದ ನಿರ್ದೇಶನವೂ ಇಲ್ಲ. ಹೀಗಿರುವಾಗ ಉದ್ದೇಶ ಪೂರ್ವಕವಾಗಿಯೇ ಪುರಸಭೆ ಮುಖ್ಯಾಧಿಕಾರಿಗಳು ಮೊದಲು ಬಾಡಿಗೆ ಪಡೆದಿದ್ದ ಅಂಗಡಿಕಾರರಿಂದ ಲಂಚ ಪಡೆದು ಉದ್ದೇಶಪೂರ್ವಕವಾಗಿ ಹರಾಜು ಪ್ರಕ್ರಿಯೆ ಮುಂದೂಡಿದ್ದಾರೆ. ಅವೈಜ್ಞಾನಿಕವಾಗಿ ಸೇರಿಸಿದ ಷರತ್ತಿಗೆ ಪುರಸಭೆ ಮುಖ್ಯಾಧಿಕಾರಿಗಳೇ ಕುದ್ದಾಗಿ ತಕರಾರು ಮಾಡಿಸಲು ಪ್ರೋತ್ಸಾಹ ನೀಡಿದ್ದು, ಹರಾಜು ವೇಳೆ ಮುಖ್ಯಾಧಿಕಾರಿಗಳು ಎದ್ದು ಹೋಗಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಪುರಸಭೆಯಿಂದ ಹೊರಡಿಸಿದ ಪ್ರಕಟಣೆಯನ್ನು ಪ್ರತಿ ಬಿಡ್‌ದಾರರು ₹ ೧ ಲಕ್ಷ ಯಂತೆ ೧೬೪ ಜನರು ಡಿ.ಡಿ ತೆಗೆದು ಪುರಸಭೆಗೆ ಕಟ್ಟಿ ಹರಾಜಿನಲ್ಲಿ ಭಾಗವಹಿಸಿದ್ದರು.