ಅರ್ಜಿ ಸಲ್ಲಿಕೆ ಎಲ್ಲಿ?ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಜತೆಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳಬಹುದು.ಯಾರು ಅರ್ಹರು?- ಪದವಿ, ಡಿಪ್ಲೊಮಾ ಶಿಕ್ಷಣ ಮುಗಿಸಿ 6 ತಿಂಗಳಾದರೂ ಉದ್ಯೋಗ ಪಡೆಯದವರು, ಉನ್ನತ ಶಿಕ್ಷಣ ಕೋರ್ಸ್‌ಗೆ ಪ್ರವೇಶ ಪಡೆಯದವರು- ವ್ಯಾಸಂಗದ ಅವಧಿಯಲ್ಲಿ ಕರ್ನಾಟಕದಲ್ಲಿ ಕನಿಷ್ಠ 6 ವರ್ಷ ವಾಸವಿದ್ದವರು
ದಾಖಲೆ ಏನು?ಪದವೀಧರರು: ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ (ಪಿಡಿಸಿ). ಡಿಪ್ಲೊಮಾ: ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಡಿಪ್ಲೊಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ. ಕರ್ನಾಟಕ ವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆ.
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಎಲ್ಲಾ ಐದೂ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿಗೊಳಿಸಿದ್ದೇವೆ. ಈಗಲೂ ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ. ಇದರೊಂದಿಗೆ ಜನರಿಗೆ ಉಚಿತ ಯೋಜನೆ ನೀಡಿದರೆ ರಾಜ್ಯ ದಿವಾಳಿಯಾಗುತ್ತವೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಮಾತು ಸುಳ್ಳಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ಕಾರದ ಐದನೇ ಗ್ಯಾರಂಟಿ ಐತಿಹಾಸಿಕ ‘ಯುವನಿಧಿ’ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳ ಬಳಿಕ ಇದೀಗ ಐದನೇ ಗ್ಯಾರಂಟಿ ಯುವನಿಧಿ ಯೋಜನೆಯನ್ನೂ ನಮ್ಮ ಸರ್ಕಾರದಿಂದ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಜನರಿಗೆ ಉಚಿತ/ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಮೋದಿ ಭಾಷಣ ಮಾಡಿದ್ದರು. ಮೋದಿಯವರೇನು ಆರ್ಥಿಕ ತಜ್ಞರಾ? ಈಗ ಐದೂ ಯೋಜನೆ ಜಾರಿಯಾಗಿ ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ ಎಂದು ವಿವರಿಸಿದರು.ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಅಧಿಕಾರಕ್ಕೆ ಬರುವ ಮುನ್ನ ಹೇಳಿದ್ದಿರಲ್ಲ ಮೋದಿಯವರೇ? ವರ್ಷಕ್ಕೆ ಎರಡು ಕೋಟಿ ಅಂದರೆ ಇಷ್ಟೊತ್ತಿಗೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಎಲ್ಲಿ ಸೃಷ್ಟಿಸಿದ್ದೀರಿ ತೋರಿಸಿ. ನೀವು ಮಾತಿಗೆ ತಪ್ಪಿದ ಮೋದಿ. ಭಾರತದ ಇತಿಹಾಸದಲ್ಲಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಇವತ್ತಿನವರೆಗೂ ಬಂದಿಲ್ಲ ಎಂದು ಟೀಕಿಸಿದರು. ಶಿವಮೊಗ್ಗದಲ್ಲಿ ಜ.12ಕ್ಕೆ ಯುವನಿಧಿ ಕಾರ್ಯಕ್ರಮ: ಯುವನಿಧಿ ಯೋಜನೆಗೆ ಇಂದಿನಿಂದಲೇ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಹರು ನೋಂದಣಿ ಮಾಡಿಕೊಳ್ಳಬಹುದು. 2022-23ನೇ ಸಾಲಿನಲ್ಲಿ ಪದವಿ, ಡಿಪ್ಲೊಮಾ ಪಾಸಾಗಿ ಆರು ತಿಂಗಳಾದರೂ ಉದ್ಯೋಗ ದೊರೆಯದ ಎಲ್ಲರೂ ಅರ್ಜಿ ಸಲ್ಲಿಸಬಹುದು. ಈ ನೋಂದಣಿ ಆಧಾರದ ಮೇಲೆ ಜ.12ರ ವಿವೇಕಾನಂದ ಜಯಂತಿಯಂದು ಶಿವಮೊಗ್ಗದಲ್ಲಿ ಲಕ್ಷಾಂತರ ಯುವಕ-ಯುವತಿಯರ ಸಮ್ಮುಖದಲ್ಲಿ ಯುವನಿಧಿ ಯೋಜನೆಯ ಅರ್ಹರ ಖಾತೆಗೆ ನೇರ ಹಣ ಜಮೆ ಮಾಡುವ ಕಾರ್ಯಕ್ರಮ ನಡೆಸುತ್ತೇವೆ ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣಪ್ರಕಾಶ್ ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು. ಗ್ಯಾರಂಟಿ ಕುರಿತ ಡಿಕೆಶಿ ಕವನಕ್ಕೆ ಸಿಳ್ಳೆ, ಚಪ್ಪಾಳೆ ಸುರಿಮಳೆ!ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ತಾವೇ ರಚಿಸಿದ ಕವನವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಮಾರಂಭದಲ್ಲಿ ಹೇಳುವ ಮೂಲಕ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗೆ ಟಾಂಗ್ ನೀಡಿದರು. ಅವರ ಕವನದ ಸಾಲುಗಳಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯುವಜನರು ಸಿಳ್ಳೆ, ಚಪ್ಪಾಳೆ ಹೊಡೆದ ಪ್ರಸಂಗ ನಡೆಯಿತು. ಭಾಷಣ ಆರಂಭಿಸಿದ ಡಿ.ಕೆ.ಶಿವಕುಮಾರ್ ಅವರು, ಕಾರ್ಯಕ್ರಮ ನಡೆಯುವಾಗಲೇ ಗ್ಯಾರಂಟಿಗಳ ಬಗ್ಗೆ ನನ್ನ ತಲೆಗೆ ಏನೋ ಹೊಳೆದಿದ್ದನ್ನು ನಾನು ಬರೆದಿದ್ದೇನೆ ಎಂದು ಕವನದ ಸಾಲುಗಳನ್ನು ಓದಲಾರಂಭಿಸಿದರು. ‘ಐದು ಬೆರಳು ಸೇರಿ ಒಂದು ಮುಷ್ಟಿಯಾಯಿತು.. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು.. ಅರಳಿದ ಕಮಲ ಇದನ್ನು ನೋಡಿ ಉದುರಿ ಹೋಯಿತು.. ಐದು ಗ್ಯಾರಂಟಿ ನೋಡಿ ಮಹಿಳೆ ಹೊತ್ತ ತೆನೆಯನ್ನು ಎಸೆದು ಹೋದಳು.. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಕರ್ನಾಟಕ ಸಮೃದ್ಧವಾಯಿತು...’ ಎಂಬ ಕವನವನ್ನು ಓದಿ ಹೇಳಿದಾಗ ನೆರೆದಿದ್ದ ಯುವಜನರಿಂದ ಸಿಳ್ಳೆ, ಚಪ್ಪಾಳೆಯ ಸುರಿಮಳೆ ಬಂತು.ಬೆಂಗಳೂರು ಹುಡುಗಿ ಮೇನಕಾಗೆ ಮೊದಲ ಯುವನಿಧಿ ನೋಂದಣಿ ಪತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ ವೇಳೆ ಮೇನಕಾ ಎಂಬ ವಿದ್ಯಾರ್ಥಿನಿಗೆ ಯೋಜನೆಯ ಮೊದಲ ನೋಂದಣಿ ಪತ್ರ ನೀಡಲಾಯಿತು.
2022-23ನೇ ಸಾಲಿನಲ್ಲಿ ಬಿ.ಕಾಂ ಪದವಿ ಪೂರ್ಣಗೊಳಿಸಿದ ಬೆಂಗಳೂರಿನ ವಿದ್ಯಾರ್ಥಿನಿ ಮೇನಕಾ ಇದುವರೆಗೂ ಉದ್ಯೋಗ ದೊರೆಯದ ಕಾರಣ ನಿರುದ್ಯೋಗ ಭತ್ಯೆಗೆ ನೋಂದಾಯಿಸುವ ಮೂಲಕ ಮೊದಲು ನೋಂದಾಯಿಸಿದ ಯುವತಿ ಎನಿಸಿಕೊಂಡರು.ಯೋಜನೆಯ ನೋಂದಣಿ ಕಾರ್ಯಕ್ರಮ ಉದ್ಘಾಟನೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವೇದಿಕೆ ಮುಂಭಾಗ ಕುಳಿತಿದ್ದ ಓರ್ವ ಯುವಕ ಮತ್ತು ಓರ್ವ ಯುವತಿಯನ್ನು ಕರೆಸಿ ಅವರ ಕೈಯಿಂದಲೂ ದೀಪ ಬೆಳಗಿಸಿದ್ದು ವಿಶೇಷವಾಗಿತ್ತು.