ಕನಕಪುರ: ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಲ್ಲಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿದರು.
ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಒಂದು ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿರುವ ಸಚಿವ ಶಿವನಾಂದ ಪಾಟೀಲರು ರೈತರ ಬಗ್ಗೆ ಹಗುರವಾಗಿ ಮಾತನಾಡಬಾರದು. ಪರಿಹಾರದ ಹಣಕ್ಕಾಗಿ ರೈತರು ಬರಗಾಲ ಬರಲಿ ಎಂದು ಎದುರು ನೋಡುತ್ತಿರುತ್ತಾರೆ ಎನ್ನುವ ಮೂಲಕ ನಾಡಿನ ಅನ್ನದಾತರ ಕುಲಕ್ಕೆ ಅಪಮಾನ ಮಾಡಿರುವುದು ಅತ್ಯಂತ ನೋವಿನ ಸಂಗತಿ ಹಾಗೂ ಖಂಡನೀಯವಾದುದು ಎಂದರು.
ಇದೇ ರೈತರು ಬೆಳೆಯುವ ಅನ್ನವನ್ನೇ ತಿನ್ನುವ ಸಚಿವರು, ರೈತರ ಬಗ್ಗೆ ಹೀಗೆ ಅಸಡ್ಡೆಯಾಗಿ ಮಾತನಾಡುವುದು ಅವರ ಗೌರವಕ್ಕೆ ಶೋಭೆಯಲ್ಲ.ಇಂತಹ ಹೊಣೆಗೇಡಿ ಸಚಿವರನ್ನು ತಮ್ಮ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಇಟ್ಟುಕೊಂಡಿರುವ ತಪ್ಪಿಗೆ ಮುಖ್ಯಮಂತ್ರಿಗಳೇ ಸ್ವತಃ ರೈತ ಕುಲಕ್ಕೆ ಕ್ಷಮೆಯಾಚಿಸಿ ಶಿವಾನಂದ ಪಾಟೀಲರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು. ಇನ್ನು ಮುಂದೆ ಯಾವೊಬ್ಬ ಶಾಸಕರಾಗಲೀ ಅಥವಾ ಸಚಿವರಾಗಲೀ ರೈತರ ಬಗ್ಗೆ ಹಗುರವಾಗಿ ಮಾತನಾಡದಂತೆ ಮಂತ್ರಿ ಗಳಿಗೆ ಬುದ್ಧಿ ಹೇಳಬೇಕೆಂದು ಆಗ್ರಹಿಸಿದರು.ರೈತಸಂಘದ ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜು ಹಾಗು ಮುಳ್ಳಹಳ್ಳಿ ಮಂಜುನಾಥ್ ಮಾತನಾಡಿ, ಸರ್ಕಾರ ಕೊಡುವ ಬಿಟ್ಟಿ ಭಾಗ್ಯಗಳಿಗೆ ಯಾವ ರೈತರೂ ಕಾದು ಕುಳಿತಿಲ್ಲ. ಇಂದಿಗೂ ತಮ್ಮ ಹೊಲಗದ್ದೆಗಳಲ್ಲಿ ಬೆವರು ಸುರಿಸಿದ ಶ್ರಮದಿಂದಲೇ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ಅವರಿಗೆ ಯಾರ ದಾಕ್ಷಿಣ್ಯವೂ ಅಗತ್ಯವಿಲ್ಲ. ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ಆಡಳಿತ ನಡೆಸುವ ರಾಜಕಾರಣಿಗಳು ಅಧಿಕಾರ ಸಿಕ್ಕ ಕೂಡಲೇ ಅದೇ ರೈತರನ್ನು ಅಪಮಾನಿಸುತ್ತಾ ಅವರು ಬೆಳೆದ ಅನ್ನವನ್ನು ತಿಂದು ಅವರನ್ನೇ ಕೀಳಾಗಿ ಕಾಣುವ ಇಂತಹ ಲಜ್ಜೆಗೆಟ್ಟವರಿಗೆ ಮುಂದಿನ ದಿನಗಳಲ್ಲಿ ರೈತರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಸಚಿವ ಶಿವಾನಂದ ಪಾಟೀಲರನ್ನು ಸಂಪುಟದಿಂದ ವಜಾಗೊಳಿಸಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.