ಬಹುಮತ ಸರ್ಕಾರದಲ್ಲಿ ಅತಂತ್ರ ಸಿಎಂ ಸಿದ್ದರಾಮಯ್ಯ: ಈರಣ್ಣ ಕಡಾಡಿ

KannadaprabhaNewsNetwork |  
Published : Jan 30, 2026, 01:30 AM IST
29ಕೆಡಿವಿಜಿ3, 4, 5-ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಪೂರ್ಣ ಬಹುಮತದ ಸರ್ಕಾರದಲ್ಲಿ ಅತಂತ್ರ ಮುಖ್ಯಮಂತ್ರಿ ಕೆಲಸ ಮಾಡುತ್ತಿದ್ದಾರೆ. ತನ್ನ ತಂದೆಯನ್ನು ಸಮರ್ಥಿಸಿಕೊಳ್ಳಲು ಯತೀಂದ್ರ ಸಿದ್ದರಾಮಯ್ಯ ಬಹಳ ಮುಂದಿದ್ದು, ಮಂತ್ರಿಗಳೂ ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೇ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

- ತಂದೆ, ಸಿಎಂ ಸಮರ್ಥನೆಗೆ ಪುತ್ರ ಯತೀಂದ್ರ ಸದಾ ಮುಂದು: ಆರೋಪ । ಜಿ ರಾಮ್‌ ಜಿ ಬಗ್ಗೆ ಅಪಪ್ರಚಾರ ಕೈ ಬಿಡಲು ತಾಕೀತು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪೂರ್ಣ ಬಹುಮತದ ಸರ್ಕಾರದಲ್ಲಿ ಅತಂತ್ರ ಮುಖ್ಯಮಂತ್ರಿ ಕೆಲಸ ಮಾಡುತ್ತಿದ್ದಾರೆ. ತನ್ನ ತಂದೆಯನ್ನು ಸಮರ್ಥಿಸಿಕೊಳ್ಳಲು ಯತೀಂದ್ರ ಸಿದ್ದರಾಮಯ್ಯ ಬಹಳ ಮುಂದಿದ್ದು, ಮಂತ್ರಿಗಳೂ ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೇ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಿಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ಸಿಎಂ ಪುತ್ರನ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪವೇ ಕಾರಣ ಎಂಬ ಮಾತು ಕೇಳಿಬರುತ್ತಿವೆ. 30 ತಿಂಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ ಒಬ್ಬನೇ ಒಬ್ಬ ಮಂತ್ರಿಯೂ ಇಲ್ಲ ಎಂದರು.

ಒಂದು ಟೀಮ್ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಬೇಡಿಕೆ ಇಟ್ಟು, ಹೈಕಮಾಂಡ್‌ಗೆ ಡೆಡ್‌ಲೈನ್ ನೀಡುತ್ತಿದೆ. ಮತ್ತೊಂದು ಟೀಮ್ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ಕಾಂಗ್ರೆಸ್ ಪಕ್ಷವೇ ಧೂಳೀಪಟ ಆಗುತ್ತದೆಂದು ಹೇಳುತ್ತಿದೆ. ಇದೇನಾ ಒಂದು ಸರ್ಕಾರವನ್ನು ನಡೆಸುವ ರೀತಿ? ಒಟ್ಟಾರೆ 136 ಸ್ಥಾನಗಳ ಪೂರ್ಣ ಬಹುಮತದ ಸರ್ಕಾರದಲ್ಲಿ ಸಿದ್ದರಾಮಯ್ಯ ಅತಂತ್ರ ಸಿಎಂ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕುಟುಕಿದರು.

ತಂದೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಬಹಳ ಮುಂದಿರುವ ಯತೀಂದ್ರ ಅವರು ತಂದೆ ಸಿದ್ದರಾಮಯ್ಯರ ಸಿಎಂ ಸ್ಥಾನ ಉಳಿಯುವ ಬಗ್ಗೆಯಷ್ಟೇ ಮಾತನಾಡಲಿಲ್ಲ. ಮುಂದಿನ ಮುಖ್ಯಮಂತ್ರಿ ಯಾರು ಅಂತ ಸಹ ಬೆಳಗಾವಿಯಲ್ಲೂ ಅವರು ಘೋಷಣೆ ಮಾಡಿದರು. ಸರ್ಕಾರದಲ್ಲಿ ಯತೀಂದ್ರ ಹಸ್ತಕ್ಷೇಪ ಮಾಡುತ್ತಾರೆಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ? ಕಾಂಗ್ರೆಸ್ ಸರ್ಕಾರದಲ್ಲಿ ಯತೀಂದ್ರ ಸಿದ್ದರಾಮಯ್ಯ ಪ್ರಭಾವ ಎಷ್ಟಿದೆ ನೋಡಿ ಎಂದು ವ್ಯಂಗ್ಯವಾಡಿದರು.

ಬಹಮತವಿದ್ದರೂ ಸಿದ್ದರಾಮಯ್ಯ ಕುಳಿತ ಕುರ್ಚಿ ಅಸ್ಥಿರವಾಗಿದೆ. ಸರ್ಕಾರವನ್ನು ಸರಿಯಾಗಿ ನಡೆಸಲಿಕ್ಕಾಗದೇ, ತಮ್ಮ ಹುಳುಕು ಮುಚ್ಚಿಕೊಳ್ಳಲೆಂದೇ ಈಗ ನರೇಗಾ ಹೆಸರು ಬದಲಾವಣೆ ವಿರೋಧಿಸುವುದಾಗಿ ಹೊಸ ನಾಟಕ ಆರಂಭ ಮಾಡಿದ್ದಾರೆ. ಕೇಂದ್ರದೊಂದಿಗೆ ಮಾಡುವ ಸಂಘರ್ಷದಿಂದ ರಾಜ್ಯ ಸರ್ಕಾರಕ್ಕಾಗಲೀ, ಕಾಂಗ್ರೆಸಿಗರಿಗಾಗಲೀ ಏನೂ ಆಗುವುದಿಲ್ಲ. ರಾಜ್ಯದ ಜನರಿಗೆ ಅನ್ಯಾಯವಾಗುತ್ತದೆ. ಇನ್ನಾದರೂ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಂಘರ್ಷ, ದೊಂಬರಾಟ ನಿಲ್ಲಿಸಲಿ ಎಂದು ಸಲಹೆ ನೀಡಿದರು.

ವಿಬಿ ಜಿ ರಾಮ್ ಜಿ ವಿರೋಧಿಸುವ ಹೊಸ ನಾಟಕ ಮಾಡುತ್ತಿರುವ ಕಾಂಗ್ರೆಸ್ಸಿನವರು ತಿಪ್ಪರಲಾಗ ಹಾಕಿದರೂ ಜನರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ನಾವು ಬಿಜೆಪಿಯವರೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸಿಗರಿಗೆ ರಾಮ ಅಂದಾಕ್ಷಣ ಬೆಂಕಿ ಹತ್ತಿದಂತಾಗುತ್ತದೆ. ಸ್ವತಃ ಗಾಂಧೀಜಿಯೇ ಇದ್ದಿದ್ದರೂ ಹೊಸ ಯೋಜನೆಗೆ ವಿರೋಧ ಮಾಡುತ್ತಿರಲಿಲ್ಲ. ವಿಜಿ ಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್ಸಿಗರಿಗೆ ತಾಕತ್ತಿದ್ದರೆ ಜನರ ಬಳಿ ಚರ್ಚೆಗೆ ಬರಲಿ, ನಾವು ಚರ್ಚೆಗೆ ಬರುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.

ಕಾಂಗ್ರೆಸ್ ಸರ್ಕಾರದ ಹುಳುಕು, ದೊಂಬರಾಟದ ವಿರುದ್ಧ ವಿಧಾನಸಭೆ ಒಳಗೆ ಮತ್ತು ಹೊರಗೂ ಬಿಜೆಪಿ ಹೋರಾಟ ನಡೆಸಲಿದೆ. ಎಲ್ಲ ಜಿಲ್ಲೆಗಳಲ್ಲೂ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ. ಗ್ರಾಮಮಟ್ಟದಲ್ಲೂ ಹೋರಾಟ, ಜಾಗೃತಿ ಸಮಾವೇಶ ನಡೆಸಲಾಗುವುದು ಎಂದು ಈರಣ್ಣ ಕಡಾಡಿ ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಬಿ.ಎಂ. ಸತೀಶ ಕೊಳೇನಹಳ್ಳಿ, ರಾಜು ತೋಟಪ್ಪ, ಬಾತಿ ಶಿವಕುಮಾರ, ಎನ್.ಎಚ್. ಹಾಲೇಶ ನಾಯ್ಕ, ಎಚ್.ಪಿ. ವಿಶ್ವಾಸ ಇತರರು ಇದ್ದರು.

- - -

(ಬಾಕ್ಸ್‌)

* ಕುರ್ಚಿ ಬಿಡೋ ಸ್ಥಿತಿ ಬಂದ್ರೆ ಪುತ್ರಗೆ ಡಿಸಿಎಂ ಪಟ್ಟಕ್ಕೆ ಷಡ್ಯಂತ್ರ

- ಯತೀಂದ್ರ ಹಸ್ತಕ್ಷೇಪದಿಂದ ರೋಸಿಹೋಗಿರುವ ಮಂತ್ರಿಗಳು: ರೇಣುಕಾಚಾರ್ಯ ಕಿಡಿನುಡಿ ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಇಡೀ ಸರ್ಕಾರವನ್ನೇ ಸಂಪೂರ್ಣವಾಗಿ ಕಂಟ್ರೋಲ್ ಮಾಡುತ್ತಿದ್ದು, ಯತೀಂದ್ರ ಅವರೇ ಸೂಪರ್ ಸಿಎಂ ಎಂಬಂತಾಗಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯ ಹಲವಾರು ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಅನೇಕರದಲ್ಲಿ ಅಸಮಾಧಾನ, ಬೇಸರಕ್ಕೆ ಕಾರಣವಾಗಿದೆ. ಫೋನ್ ಮಾಡಿ, ಅಪ್ಪಾ ಅಂತಾ ಕೋಡ್ ವರ್ಡ್‌ನಲ್ಲಿ ಮಾತನಾಡುತ್ತಿದ್ದರು. ಕಾಂಗ್ರೆಸ್‌ನ ಎಲ್ಲ ಸಚಿವರು ಯತೀಂದ್ರ ಸಿದ್ದರಾಮಯ್ಯ ಹಾಗೂ ಅಪ್ಪಾ ಎನ್ನುವ ಈ ಕೋಡ್ ವರ್ಡ್‌ನಿಂದಲೇ ರೋಸಿಹೋಗಿದ್ದಾರೆ. ಯತೀಂದ್ರ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ಒಂದುವೇಳೆ ಅಧಿಕಾರ ಹಂಚಿಕೆ ಸೂತ್ರದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸಂಗ ಬಂದರೆ ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯಗೆ ಉಪ ಮುಖ್ಯಮಂತ್ರಿ ಮಾಡಬೇಕೆಂಬ ಷಡ್ಯಂತ್ರವನ್ನೂ ಮಾಡುತ್ತಾರೆ ಎಂದು ರೇಣುಕಾಚಾರ್ಯ ಆರೋಪಿಸಿದರು. * (ಕೋಟ್‌)ಕೇಂದ್ರದ ನೂತನ ವಿಬಿ ಜಿ ರಾಮ್ ಜಿ ಯೋಜನೆಯನ್ನು ವಿರೋಧಿಸುವ ಕಾಂಗ್ರೆಸ್‌ನವರು ರಸ್ತೆ, ಸೇತುವೆ, ಕ್ರೀಡಾಂಗಣ, ಆಸ್ಪತ್ರೆಗಳಿಗೆ ಇಟ್ಟಿರುವ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರುಗಳನ್ನೂ ಎಲ್ಲ ಕಡೆ ಬದಲಾವಣೆ ಮಾಡಲಿ. ರಾಜ್ಯ ಸರ್ಕಾರ ಯಾವ ಪುರುಷಾರ್ಥಕ್ಕಾಗಿ ಅಧಿವೇಶನ ನಡೆಸುತ್ತದೆ. ರಾಜ್ಯಪಾಲರಿಗೆ ಅಪಮಾನ ಮಾಡುವುದಕ್ಕಾ? ರಾಜ್ಯಪಾಲರಿಗೆ ಅಗೌರವ ತೋರಿಸಿದವರ ವಿರುದ್ಧ ಪೊಲೀಸ್‌ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಿ.

- ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಮುಖಂಡ.

- - -

-29ಕೆಡಿವಿಜಿ3, 4, 5.ಜೆಪಿಜಿ:

ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ