ಚಿಕ್ಕಮಗಳೂರು : ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನ ಪರಿಷತ್‌ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಿಂದ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿಯ ವರದಿ ಸಿದ್ಧವಾಗಿದ್ದು, ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ವರದಿಯನ್ನು ಸಲ್ಲಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಸಿ.ಟಿ.ರವಿ ತಿಳಿಸಿದ್ದಾರೆ.

ಸತ್ಯಶೋಧನಾ ಸಮಿತಿಯ ಸದಸ್ಯರು ಸಭೆ

ಚಿಕ್ಕಮಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿಯ ಸದಸ್ಯರು ಸಭೆ ನಡೆಸಿ ವರದಿ ಸಿದ್ಧಪಡಿಸಿದ್ದೇವೆ. ಸಮಿತಿಯ ಎಲ್ಲ ಸದಸ್ಯರು ವರದಿಗೆ ಸಹಿ ಮಾಡಿದ್ದು, ಸೀಲ್ಡ್‌ ಕವರ್‌ನಲ್ಲಿ ವರದಿಯನ್ನು ಭದ್ರಪಡಿಸಲಾಗಿದೆ. ಶುಕ್ರವಾರ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ರಾಜ್ಯಾಧ್ಯಕ್ಷರಿಗೆ ವರದಿ

ರಾಜ್ಯಾಧ್ಯಕ್ಷರಿಗೆ ವರದಿ ನೀಡುವುದಕ್ಕೂ ಮುನ್ನ ಯಾವ ಅಂಶಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ, ಯಾರು-ಯಾರು ಅಡ್ಡ ಮತದಾನ ಮಾಡಿರಬಹುದು ಎಂದು ಅನುಮಾನಿಸಲಾಗಿದೆ. ಯಾವ ಕಾರಣಕ್ಕೆ ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ ಎಂಬುದನ್ನು ವಿವರಿಸಲಾಗುವುದು ಎಂದು ಹೇಳಿದರು.


ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರು ಯಾರು ಎಂಬುದನ್ನು ಕೇವಲ ಅನುಮಾನಿಸಬಹುದಾಗಿದೆ ಅಷ್ಟೇ. ಇದು ಗೌಪ್ಯ ಮತದಾನ ಆಗಿರುವುದರಿಂದ ಖಡಾಖಂಡಿತವಾಗಿ ಇವರೇ ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಅನುಮಾನಿಸಬಹುದಷ್ಟೇ. ನೇರವಾಗಿ ಆರೋಪಿ ಸ್ಥಾನದಲ್ಲಿ ಯಾರನ್ನೂ ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.