ಬೆಂಗಳೂರು : ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಅಡ್ಡ ಮತದಾನದ ಆರೋಪ ಕುರಿತು ಅತಿ ಶೀಘ್ರದಲ್ಲೇ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಮ್ಮ ಶಾಸಕಾಂಗ ಪಕ್ಷದ ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಭಾನುವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವೆಲ್ಲರೂ ದೇವರನ್ನು ನಂಬುವವರು. ತಾಯಿಗೆ ದ್ರೋಹ ಮಾಡಿದ ಶಾಸಕರು ಯಾರೆಂಬುದು ಮತ್ತು ಸತ್ಯ ಗೊತ್ತಾಗಬೇಕು. ಇದು ಧರ್ಮಸ್ಥಳದಲ್ಲಿ ತೀರ್ಮಾನ ಆಗಬೇಕೆಂದು ನಿರ್ಧಾರ ಮಾಡಿದ್ದೇನೆ. ಶಾಸಕಾಂಗ ಪಕ್ಷದ ಸಭೆ ಕರೆಯುವ ಸಂಬಂಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರೊಂದಿಗೆ ಮಾತನಾಡುವೆ ಎಂದು ನುಡಿದರು.
ಕಾರ್ಯಕರ್ತರಿಗೆ ನೋವಾಗುವುದು ಸಹಜ. ಅಡ್ಡ ಮತದಾನವನ್ನು ನನ್ನ ಮನಃಸಾಕ್ಷಿ ಒಪ್ಪುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಟೀಕೆಗಳ ಬಗ್ಗೆ ನಾನೂ ಗಮನಿಸಿದ್ದೇನೆ. ಇದನ್ನೇ ನೆಪ ಮಾಡಿಕೊಂಡು ಪರೋಕ್ಷ ದಾಳಿ ಮಾಡುವ ಕೆಲಸ ಹಾಗೂ ಕುತಂತ್ರ ನಡೆಯುತ್ತಿದೆ. ಈ ಸಂಬಂಧ ನಾವು ಜನರ ಎದುರು ಸತ್ಯಾಸತ್ಯತೆ ಇಡಬೇಕಾಗಿದೆ. ಪಕ್ಷದ ಗೌರವ ಉಳಿಸಬೇಕಿದೆ. ಕಾರ್ಯಕರ್ತರಿಗೆ ನೆಮ್ಮದಿ ನೀಡಬೇಕಿದೆ ಎಂದು ಹೇಳಿದರು.
63 ಶಾಸಕರ ಬಗ್ಗೆಯೂ ಅನುಮಾನ:
ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿಯಿಂದಲೂ 4 ಅಡ್ಡ ಮತದಾನ ಆಗಿರುವ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಪತ್ರಿಕೆಗಳಲ್ಲೂ ಬಂದಿದೆ. ಸಾಮಾಜಿಕ ಜಾಲತಾಣದಲ್ಲೂ ಅತಿ ಹೆಚ್ಚು ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ನಮ್ಮ ಕಾರ್ಯಕರ್ತರು ನಮ್ಮ ಶಾಸಕರ ನಡವಳಿಕೆ ಬಗ್ಗೆ ಬಹಳ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯ 63 ಶಾಸಕರ ಬಗ್ಗೆ ಅನುಮಾನ ಹುಟ್ಟುವಂತಾಗಿದೆ ಎಂದು ಬೇಸರಿಸಿದರು.
ಬೆಳಗ್ಗೆ 3 ಗಂಟೆಗೆ ಎದ್ದು ಕೂತಿದ್ದೆ:
ಪಕ್ಷದ ರಾಜ್ಯಾಧ್ಯಕ್ಷನಾಗಿ ಈ ಬೆಳವಣಿಗೆ ನನಗೂ ಸಾಕಷ್ಟು ಬೇಸರ ತಂದಿದೆ. ನಾನು ಬೆಳಗ್ಗೆ 3 ಗಂಟೆಗೇ ಎದ್ದು ಕೂತಿದ್ದೇನೆ. ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಶನಿವಾರ ಬೆಳಿಗ್ಗೆ 7 ಗಂಟೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಕರೆ ಮಾಡಿ ಮಾತನಾಡಿದ್ದೇನೆ. ನಾನು ಮತ್ತು ಆರ್.ಅಶೋಕ್ ಅವರು ದೆಹಲಿಗೆ ಹೋಗಲಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.
ಈ ಅಡ್ಡ ಮತದಾನದ ಕುರಿತು ವರದಿ ನೀಡಲು ಸತ್ಯಶೋಧನಾ ಸಮಿತಿ ಮಾಡಿದ್ದೇವೆ. ಸಿ.ಟಿ.ರವಿ, ಮಹೇಶ್ ಟೆಂಗಿನಕಾಯಿ, ಮಾಜಿ ಸಚಿವ ಮಹೇಶ್ ಈ ಸಮಿತಿಯಲ್ಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪುಕ್ಸಟ್ಟೆ ಅಡ್ಡ ಮತ ಹಾಕಿರಲು ಸಾಧ್ಯವಿಲ್ಲ:
ನಮ್ಮದು ರಾಷ್ಟ್ರೀಯ ಪಕ್ಷ. ನಾವು ಶಾಸಕರಾಗಿ ಗೆಲ್ಲಲು ಪಕ್ಷದ ಆಶೀರ್ವಾದವಿದೆ. ಕಾರ್ಯಕರ್ತರ ಪರಿಶ್ರಮವೂ ಇದೆ. ಇದರಿಂದ ಕಾರ್ಯಕರ್ತರಿಗೆ ಆಘಾತ, ನೋವಾಗಿದೆ. ಮತದಾರರು ಮೋದಿ ಅವರನ್ನು ನೋಡಿಕೊಂಡು ಮತ ಕೊಟ್ಟಿದ್ದಾರೆ. ನಮ್ಮ ಯೋಗ್ಯತೆ ಒಂದು ಕಡೆ ಬದಿಗಿಡಿ. ಶಾಸಕರು ಎಷ್ಟೇ ದೊಡ್ಡವರಾಗಿದ್ದರೂ ಗೌಪ್ಯ ಮತದಾನ ನಡೆದ ಕಾರಣ ನನ್ನನ್ನೂ ಸೇರಿ 63 ಶಾಸಕರನ್ನೂ ಅನುಮಾನ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಡ್ಡಮತ ಹಾಕಿದವರು ಪುಕ್ಸಟ್ಟೆ ಮತ ಹಾಕಿರಲು ಸಾಧ್ಯ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಬಿ.ವೈ.ವಿಜಯೇಂದ್ರ ಹೇಳಿದರು.
ಗೌಪ್ಯ ಮತದಾನ ಆಗಿರುವುದರಿಂದ ಸತ್ಯಾಸತ್ಯತೆ ಜನರ ಮುಂದಿಡಬೇಕಾಗುತ್ತದೆ. ಕಾರ್ಯಕರ್ತರಿಗೂ ನೆಮ್ಮದಿ ತರುವ ಕೆಲಸ ಆಗಬೇಕಿದೆ. ಅತೀ ಶೀಘ್ರದಲ್ಲೇ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದು ಸತ್ಯಾಸತ್ಯತೆ ಮುಂದಿಡಬೇಕಿದೆ.
- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
2 ದಿನದಲ್ಲಿ ಮಧ್ಯಂತರ ವರದಿ ಸಲ್ಲಿಕೆ: ಸಿ.ಟಿ.ರವಿ
ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಮುಂದಿನ ಎರಡು ದಿನಗಳಲ್ಲಿ ಪಕ್ಷದ ಹೈಕಮಾಂಡ್‌ಗೆ ಪ್ರಾಥಮಿಕ ಹಾಗೂ ಮಧ್ಯಂತರ ವರದಿ ಸಲ್ಲಿಸಲಾಗುವುದು ಎಂದು ಸತ್ಯಶೋಧನಾ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸದ್ಯಕ್ಕೆ ಯಾರ ಮೇಲೂ ನಾವು ನೇರ ಆರೋಪ ಮಾಡುವುದಿಲ್ಲ. ಕೇವಲ ಸಾಂದರ್ಭಿಕ ಸಾಕ್ಷ್ಯಗಳನ್ನು ಮತ್ತು ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಅನುಮಾನಿಸಬಹುದಷ್ಟೇ ಎಂದರು.
