ಕೊಡಗಿನ ಪುಣ್ಯಭೂಮಿಯಲ್ಲಿ ಶರಣರ ಜಯಂತಿ, ಕೊಡಗನ್ನು ಆಳಿದ ಅರಸರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸಂಸ್ಮರಣೋತ್ಸವವನ್ನು ಆಚರಿಸುವ ಮೂಲಕ ವೀರಶೈವ ಸಮುದಾಯವು ಆಧ್ಯಾತ್ಮಿಕ, ಸಾಮಾಜಿಕ ಮತ್ತು ರಾಷ್ಟ್ರ ಭಕ್ತಿಗೆ ಸಂಗಮ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕೊಡಗಿನ ಪುಣ್ಯಭೂಮಿಯಲ್ಲಿ ಶರಣರ ಜಯಂತಿ, ಕೊಡಗನ್ನು ಆಳಿದ ಅರಸರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸಂಸ್ಮರಣೋತ್ಸವವನ್ನು ಆಚರಿಸುವ ಮೂಲಕ ವೀರಶೈವ ಸಮುದಾಯವು ಆಧ್ಯಾತ್ಮಿಕ, ಸಾಮಾಜಿಕ ಮತ್ತು ರಾಷ್ಟ್ರ ಭಕ್ತಿಗೆ ಸಂಗಮ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.ಸಮೀಪದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರಾ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕ ಹಾಗೂ ಯುವ ಘಟಕದ ಆಶ್ರಯದಲ್ಲಿ ನಡೆದ ಬಸವ ಜಯಂತಿ, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ರೇಣುಕಾಚಾರ್ಯ ಜಯಂತಿ, ಕೊಡಗನ್ನು ಆಳಿದ ಹಾಲೇರಿ ಅರಸರ ಮತ್ತು ಸ್ವಾತಂತ್ರ್ಯ ಹೋರಾಟಗಾರ ಹೆಮ್ಮನೆ ಪುಟ್ಟಬಸಪ್ಪನವರ ಸಂಸ್ಮರಣೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು ೧೨ನೇ ಶತಮಾನದಲ್ಲಿ ಸಾಮಾಜಿಕ ಚಿಂತನೆ, ಸಮಾನತೆ ಜಾತಿ ಬೇಧ ಮುಂತಾದ ಸಾಮಾಜಿಕ ಹೋರಾಟ ಮಾಡಿದ್ದರು. ಅವರಿಗೆ ಪೂರಕವಾಗಿ ೨೧ನೇ ಶತಮಾನದಲ್ಲಿ ಸಿದ್ದಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮೀಜಿಯವರು ಶಿಕ್ಷಣ, ದಾಸೋಹ ಮುಂತಾದ ಸಮಾಜ ಸೇವೆ ಮಾಡುವ ಮೂಲಕ ಮುಂದಿನ ಪೀಳಿಗೆಗೂ ದಾರಿ ದೀಪವಾಗಿದ್ದಾರೆ ಎಂದರು.ರಾಜ್ಯಕ್ಕೆ ವೀರಶೈವ ಸಮುದಾಯದವರ ಆಧ್ಯಾತ್ಮಿಕ, ಸಂಸ್ಕೃತಿ, ಪಾರಂಪರಿಕ, ಸಾಮಾಜಿಕ ಕೊಡುಗೆ ಅಪಾರವಾದುದು. ಈ ನಿಟ್ಟಿನಲ್ಲಿ ವೀರಶೈವ ಸಮುದಾಯ ಒಟ್ಟಾಗಿ ನಿಂತು ಸಮುದಾಯದ ಸಂಘಟನೆಯ ಬಲವರ್ಧನೆಗೆ ಸಹಕರಿಸಬೇಕು ಎಂದರು.
ಕೊಡಗಿನಲ್ಲಿ ಸಿ ಆ್ಯಂಡ್ ಲ್ಯಾಂಡ್ ವಿಚಾರದಲ್ಲಿ ರೈತರ ಬೆಂಬಲಕ್ಕೆ ಹೋರಾಟಗಾರರೊಂದಿಗೆ ಜನಪ್ರತಿನಿಧಿಗಳು ಎಲ್ಲರೂ ಒಗ್ಗಟ್ಟಿನಿಂದ ಪಕ್ಷಾತೀತವಾಗಿ ಬೆಂಬಲಕ್ಕೆ ಬರುತ್ತೇವೆ ಎಂದು ಹೇಳಿದರು.ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಮಾತನಾಡಿ, ವೀರಶೈವ ಸಮುದಾಯದಲ್ಲಿ ಯಾವುದೇ ಬಿನ್ನಾಭಿಪ್ರಾಯಗಳಿದ್ದರೂ ಅದನ್ನು ಅಲ್ಲೇ ಬಗೆಹರಿಸಿಕೊಂಡು ಸಂಘಟನೆಯ ಬೆಳವಣಿಗಾಗಿ ಎಲ್ಲರೂ ಒಗ್ಗಟ್ಟಾಗಿರಬೇಕು. ಕೊಡಗು ಜಿಲ್ಲೆಯಲ್ಲಿ ಪ್ರತಿಯೊಂದು ತಾಲೂಕು, ಹೋಬಳಿ ಘಟಕಗಳು ಸಕ್ರಿಯವಾಗಿರಬೇಕು. ಬಸವಣ್ಣ ನಂತರದಲ್ಲಿ ಶಿವಕುಮಾರ ಸ್ವಾಮೀಜಿ ೮೮ ವರ್ಷಗಳ ಕಾಲ ಶಿಕ್ಷಣ, ದಾಸೋಹ, ಸಾಮಾಜಿಕ ಕಳಕಳಿಯಲ್ಲಿ ಮಠವನ್ನು ಮುನ್ನಡೆಸಿದ್ದಾರೆ. ಈ ಹಾದಿ ಮುಂದೆ ಸೂರ್ಯಚಂದ್ರ ಇರುವರೆಗೂ ಮುಂದುವರೆಯುತ್ತದೆ ಎಂದರು.
ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಮಾತನಾಡಿ, ಸಮುದಾಯದ ಸಂಘಟನೆಯ ಬಲವರ್ಧನೆಗೆ ಇಂತಹ ಜಯಂತೋತ್ಸವ, ಸಂಸ್ಮರಣೋತ್ಸವ ಕಾರ್ಯಕ್ರಮಗಳ ಅಗತ್ಯ ಇದೆ. ಕೊಡಗಿನಲ್ಲಿ ವೀರಶೈವ ಮಹಾಸಭಾ ವತಿಯಿಂದ ಇಂತಹ ಯಶಸ್ವಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನಿಯ. ಬಸವಣ್ಣನವರ ತತ್ವ ಆದರ್ಶ, ಸಾಮಾಜಿಕ ಮಾರ್ಗದರ್ಶನವನ್ನು ಮೈಸೂರು ರಾಜವಂಶ ಪಾಲಿಸುತ್ತಿದೆ ಎಂದು ಹೇಳಿದರು.ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಸಮಾಜದಲ್ಲಿ ಜಾತಿ, ಸಮುದಾಯ ಎಂಬ ಬೇಧ ಭಾವ ಇಲ್ಲದೆ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕು. ಸ್ವಾತಂತ್ರ ಹೋರಾಟಗಾರ ಹೆಮ್ಮನೆ ಪುಟ್ಟಬಸಪ್ಪ ಅವರ ಸ್ಮಾರಕ ನಿರ್ಮಾಣಕ್ಕೆ ಸದರಿ ಗ್ರಾಮದಲ್ಲಿ ಜಾಗ ನೀಡಿದರೆ ಸರ್ಕಾರದಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಸಿದ್ದಗಂಗಾ ಮಠದ ಶಿವ ಸಿದ್ದೇಶ್ವರ ಸ್ಮಾಮೀಜಿ ಆಶೀವರ್ಚನ ನೀಡಿದರು. ಹೈಕೋರ್ಟಿನ ಹಿರಿಯ ವಕೀಲ ಚಂದ್ರಮೌಳಿ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ವಿರೂಪಾಕ್ಷಯ್ಯ, ಯುವ ಘಟಕದ ಅಧ್ಯಕ್ಷ ಮೋಕ್ಷಿಕ್ ರಾಜ್, ಪ್ರಮುಖ ಕಾಂತರಾಜ್ ಮುಂತಾದವರಿದ್ದರು.ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲೆಯ ವಿವಿಧ ಮಠದ ಮಠಾಧೀಶರು ದಿವ್ಯ ಸಾನಿಧ್ಯ ವಹಿಸಿದ್ದರು.