ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ । ಮುಖ್ಯಮಂತ್ರಿಯಾಗಿ ಪ್ರಥಮ ಬಾರಿಗೆ ಆಗಮನ
ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿ, ಜಿಲ್ಲೆಯನ್ನು ಅಭಿವೃದ್ಧಿಪಡಿಸುವುದಾಗಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದ ಸಿಎಂ ಸಿದ್ಧರಾಮಯ್ಯ, ಕೊನೆ ಗಳಿಗೆಯಲ್ಲಿ ಕೋಲಾರ ಕ್ಷೇತ್ರ ಕೈಬಿಟ್ಟ ನಂತರ ಮುಖ್ಯಮಂತ್ರಿಯಾಗಿ ಪ್ರಥಮ ಬಾರಿಗೆ ಕೋಲಾರ ನಗರಕ್ಕೆ ಬುಧವಾರ ಆಗಮಿಸುತ್ತಿದ್ದಾರೆ.
ಸಿಎಂ ಸಿದ್ಧರಾಮಯ್ಯ ಆಗಮನದ ಹಿನ್ನೆಲೆ ಕೋಲಾರ ಜನತೆಯು ಬೆಟ್ಟದಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸಿದ್ಧರಾಮಯ್ಯ ಸ್ಪರ್ಧಿಸಿ, ಕೋಲಾರ ನಗರದ ರಸ್ತೆಗಳ ಅಭಿವೃದ್ಧಿ, ವರ್ತುಲ ರಸ್ತೆ, ಟೊಮೆಟೋ ಮಾರುಕಟ್ಟೆ ಜಾಗ, ಕೆ.ಸಿ.ವ್ಯಾಲಿಯ ೩ನೇ ಹಂತದ ಶುದ್ಧೀಕರಣ, ಎತ್ತಿನಹೊಳೆ ನೀರು ಸೇರಿದಂತೆ ಕೋಲಾರ ನಗರ ಮತ್ತು ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಪಡಿಸುವ ಮಟ್ಟದಲ್ಲಿ ಆಗಿನ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಸಿದ್ಧರಾಮಯ್ಯರನ್ನು ಕೋಲಾರದಿಂದಲೇ ಸ್ಪರ್ಧೆ ಮಾಡಿಸಬೇಕೆಂಬ ಹಠಕ್ಕೆ ಬಿದ್ದು, ಕೋಲಾರಕ್ಕೆ ಸಿದ್ಧರಾಮಯ್ಯರನ್ನು ಕರೆಯಿಸಿ, ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಕೋಲಾರ ಸ್ಪರ್ಧೆ ಕೈತಪ್ಪಿದ ಹಿನ್ನೆಲೆ ಹಾಲಿ ಶಾಸಕ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.ಬಂಗಾರಪೇಟೆ ಸಮೀಪದ ಯರಗೋಳ್ ಯೋಜನೆ ಉದ್ಘಾಟನೆಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಆಗಮಿಸಿದ್ದ ವೇಳೆ ಕೋಲಾರದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸುವಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು ಮುಂದಾಗಿದ್ದರು. ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ.
ಆದರೆ,ಇಂದು ‘ಅದಿಮ ಸಾಂಸ್ಕೃತಿಕ ಕೇಂದ್ರದ ಹುಣ್ಣಿಮೆ ಹಾಡು’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳ್ಳಿಗ್ಗೆ ೧೧ ಗಂಟೆಗೆ ಅಧಿಕಾರಿಗಳ ಸಭೆ ಏರ್ಪಡಿಸಲಾಗಿದೆ. ಕೋಲಾರ ಅಭಿವೃದ್ಧಿಗೆ ಸಿದ್ಧರಾಮಯ್ಯನವರು ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಾರೆಯೇ ಎಂಬ ನಿರೀಕ್ಷೆಯಲ್ಲಿ ಕೋಲಾರ ಜನತೆ, ಕಾರ್ಯಕರ್ತರಿದ್ದಾರೆ.ಕೋಲಾರ ಜಿಲ್ಲೆಯಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕರು ಸಹ ಸಿದ್ಧರಾಮಯ್ಯನವರಿಂದ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅನುದಾನದ ನಿರೀಕ್ಷೆಯಲ್ಲಿದ್ದಾರೆ. ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂ.ಎಲ್.ಸಿ ಅನಿಲ್ ಕುಮಾರ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸಹ ಕೋಲಾರ ನಗರ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡುವ ನಿರೀಕ್ಷೆಯಲ್ಲಿದ್ದು, ಅದಕ್ಕಾಗಿಯೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೋಲಾರದಲ್ಲಿ ಅಧಿಕಾರಿಗಳ ಸಭೆ ನಡೆಸಲು ಮುಂದಾಗಿದ್ದಾರೆ.
ಬಾಕ್ಸ್....ಪ್ರಗತಿ ಪರಿಶೀಲನಾ ಸಭೆ
ಬುಧವಾರ ಬೆಳ್ಳಿಗ್ಗೆ ೧೦ ಕ್ಕೆ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕೋಲಾರದ ಆರ್.ಎಲ್. ಜಾಲಪ್ಪ ಮೆಡಿಕಲ್ ಕಾಲೇಜು ಆವರಣದಲ್ಲಿರುವ ಹೆಲಿಪ್ಯಾಡ್‌ಗೆ ಆಗಮಿಸಿ, ಅಲ್ಲಿಂದ ಪಕ್ಕದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಿಗ್ಗೆ ೧೧ ಕ್ಕೆ ನಡೆಯಲಿರುವ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.ಮಧ್ಯಾಹ್ನ ೩ ಕ್ಕೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ರ ಮುಳಬಾಗಿಲಿನ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ೩.೩೦ಕ್ಕೆ ಕೋಲಾರದಲ್ಲಿರುವ ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ ೪ ಕ್ಕೆ ತೇರಹಳ್ಳಿ ಬೆಟ್ಟದ ‘ಆದಿಮ ಸಾಂಸ್ಕೃತಿಕ ಕೇಂದ್ರದ ೨೦೦ನೇ ಹುಣ್ಣಿಮೆ ಹಾಡು’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ ೬ ಗಂಟೆಯ ನಂತರ ರಸ್ತೆಯ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.
ಕೋಲಾರ ಶಾಸಕ ಶ್ರೀನಿವಾಸಗೌಡರ ಮನೆಗೆ ಭೇಟಿ ನೀಡುವ ಸಿದ್ಧರಾಮಯ್ಯನವರಿಗೆ ಶ್ರೀನಿವಾಸಗೌಡರನ್ನು ಎಂ.ಎಲ್.ಸಿ ಅಥವಾ ನಿಗಮ ಮಂಡಳಿ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಒತ್ತಾಯಪಡಿಸಲಿದ್ದಾರೆ ಎನ್ನಲಾಗಿದೆ.ಕೋಲಾರದಿಂದ ಸಿದ್ಧರಾಮಯ್ಯ ಸ್ಪರ್ಧಿಸುವುದಾದರೆ ನನ್ನ ಸ್ಥಾನ ಬಿಟ್ಟುಕೊಡುವುದಾಗಿ ಹಾಗೂ ಅವರನ್ನು ಗೆಲ್ಲಿಸಿಕೊಟ್ಟು ಕೋಲಾರ ಜಿಲ್ಲೆಯಿಂದ ೨ನೇ ಮುಖ್ಯಮಂತ್ರಿ ಆಯ್ಕೆ ಮಾಡುವ ಕನಸು ನನ್ನದಾಗಿದೆ. ಅವರ ಪ್ರತಿಮೆಯನ್ನು ಅನಾವರಣ ಮಾಡುತ್ತೇವೆಂದು ಶ್ರೀನಿವಾಸಗೌಡರು ಘೋಷಣೆ ಮಾಡಿದ್ದಾರೆ, ಅವರಿಗಾಗಿ ಕಳೆದ ಚುನಾವಣೆಯಲ್ಲಿ ಕ್ಷೇತ್ರ ತ್ಯಾಗ ಮಾಡಿದ್ದ ಶ್ರೀನಿವಾಸಗೌಡರನ್ನು ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ.
----