ಕನ್ನಡಪ್ರಭ ವಾರ್ತೆ ಮಧುಗಿರಿ
ಗ್ಯಾರಂಟಿ ಯೋಜನೆ ಬಿಟ್ಟರೆ ರಾಜ್ಯ ಸರ್ಕಾರಕ್ಕೆ ಬೇರೆ ವಿಚಾರಗಳಿಲ್ಲ. ದನ ಕರುಗಳಿಗೆ ಮೇವು ,ಕುಡಿವ ನೀರಿಲ್ಲ. ರಾಜ್ಯದಲ್ಲಿ ಕೆಟ್ಟ ಸರ್ಕಾರ ಆಡಳಿತ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಇಲ್ಲಿನ ಸಂತೆ ಮೈದಾನದಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ದೇಶಕ್ಕೆ ಸುಭದ್ರ ಸರ್ಕಾರ ನೀಡುವ ನಿಟ್ಟಿನಲ್ಲಿ ತುಮಕೂರು ಲೋಕಸಭಾ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣಗೆ ಅತ್ಯಧಿಕ ಮತ ನೀಡಿ ಗೆಲ್ಲಿಸಬೇಕು. ಕಾಂಗ್ರೆಸ್ ಸರ್ಕಾರ 1.5 ಲಕ್ಷ ಕೋಟಿ ರು.ಸಾಲ ಮಾಡಿದ್ದು, ರಾಜ್ಯದ ಜನರ ಜೇಬು ಖಾಲಿ ಮಾಡುತ್ತಿದೆ. ಬಡ ಕುಟುಂಬಗಳ ಬದುಕು ಹಸನುಗೊಳಿಸಲು ನಾನು ಸಾರಾಯಿ, ಲಾಟರಿ ನಿಷೇಧ ಮಾಡಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸೈಕಲ್ ಕೊಟ್ಟು, ಇಂಗ್ಲೀಷ್ ಶಿಕ್ಷಣಕ್ಕಾಗಿ ಕರ್ನಾಟಕ ಪಬ್ಲಿಕ್ ಶಾಲೆ ತೆರೆದು ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇನೆ ಎಂದರು.
ರೈತರ ಸಾಲ ಮನ್ನಾ ಮಾಡಲು ಹೊರಟಾಗ ಸಿದ್ದರಾಮಯ್ಯ ಅಡ್ಡಿಪಡಿಸಿದರು. ಇವರ ತರ ಸಾಲ ಮಾಡದೆ ಕೇಂದ್ರದ ಕಡೆಗೂ ಕೈ ಚಾಚದೆ ರೈತರ 25 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದೆ. ಆದರೂ ನನ್ನ ಉಜ್ವಲ ಭವಿಷ್ಯದ ಕರ್ನಾಟಕದ ಕನಸು ಹಾಗೆ ಉಳಿದಿದೆ. ಈ ಕನಸನ್ನು ಪೂರ್ಣಗೊಳಿಸಲು ಒಬ್ಬನಿಂದ ಸಾಧ್ಯವಿಲ್ಲ. ಹಾಗಾಗಿ ವಿಶ್ವ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು ಬಿಜೆಪಿ ಜೊತೆ ಕೈಜೋಡಿಸಿದ್ದೇನೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದು ಬಿದ್ದಿದೆ. 36 ಸಾವಿರ ಕೋಟಿ ರು.ಬೆಳೆ ನಷ್ಟವಾಗಿದೆ. ಸರ್ಕಾರ ಎಕರೆಗೆ ಕೇವಲ ಎಂಟು ನೂರು ರು.ಕೊಡುತ್ತಿದೆ. ನಿಮಗೆ ಕೊಡುವ ಗ್ಯಾರಂಟಿ ಹಣ ತಲಾ 36 ಸಾವಿರ ಸಾಲವಿದೆ. ಈ ಭಾಗದ ರೈತರಿಗೆ ನೀರಾವರಿ ಶಕ್ತಿ ನೀಡುತ್ತೇನೆ. ಮೈತ್ರಿ ಅಭ್ಯರ್ಥಿ ಸೋಮಣ್ಣರನ್ನು 4 ಲಕ್ಷ ಲೀಡ್‌ನಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಕುಂಚಿಟಿಗರಿಗೆ ಒಬಿಸಿ, ಕಾಡುಗೊಲ್ಲರಿಗೆ ಎಸ್‌ಟಿ ಸ್ಥಾನ ಖಚಿತ: ಜಿಲ್ಲೆಯ ಕುಂಚಿಟಿಗ ಸಮಾಜಕ್ಕೆ ಹಿಂದುಳಿದ ಒಬಿಸಿ ಮೀಸಲಾತಿಯನ್ನು ಒಂದು ವರ್ಷದಲ್ಲಿ ಈಡೇರಿಸಲಾಗುವುದು. ಈ ಕುರಿತು ಎಚ್.ಡಿ.ದೇವೇಗೌಡರು ಮುತುವರ್ಜಿವಹಿಸಿದ್ದಾರೆ. ಕಾಡುಗೊಲ್ಲ ಸಮಾಜವನ್ನು ಎಸ್‌ಟಿ ಮೀಸಲಾತಿಗೆ ಸೇರಿಸಲು ಮುಂದಾಗಿದ್ದಾರೆ. ಈ ಹಿಂದೆ ದೇವೇಗೌಡರು ನಾಯಕ ಸಮಾಜವನ್ನು ಎಸ್‌ಟಿಗೆ ಸೇರಿಸಿದ್ದರು.
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆಗೂ ಬೆಲೆಯಿಲ್ಲ: ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಪಾರ್ಥಿವ ಶರೀರ ಹೊಳಲು ಜಾಗ ಕೊಡಲಿಲ್ಲ. ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆಗೂ ಬೆಲೆಯಿಲ್ಲ, ಚುನಾವಣೆ ನಂತರ ರಾಜ್ಯಕ್ಕೆ ವಾಪಸ್ ಬರಲಿದ್ದಾರೆ. ಸಿದ್ದರಾಮಯ್ಯ ದಲಿತರ ಮೇಲೆ ಡೋಂಗಿ ಪ್ರೀತಿ ತೋರಿಸಿತ್ತಿದ್ದಾರೆ. 2013ರಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶರ್ ಅವರನ್ನು ಸೋಲಿಸಿ ಸಿಎಂ ಸ್ಥಾನ ತಪ್ಪಿಸಿದರು. ಸಿದ್ದರಾಮಯ್ಯ ಖರ್ಗೆಯನ್ನು ರಾಜ್ಯದಿಂದ ದೆಹಲಿಗೆ ಓಡಿಸಿದ್ದಾರೆ. ಇದನ್ನು ದಲಿತ ಸಮಾಜ ಅರ್ಥ ಮಾಡಿಕೊಳ್ಳಬೇಕು. ದೇವೇಗೌಡರು ಕುರುಬ ಸಮಾಜದ ಭಾಸ್ಕರಪ್ಪನನ್ನು ತುಮಕೂರು ಲೋಕಸಭೆಗೆ ಕಳಿಸಿ ಕುರುಬರಿಗೆ ರಾಜಕೀಯ ಶಕ್ತಿ ನೀಡಿದ್ದಾರೆ ಎಂದರು.ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ. ಇದು ದೇಶದ ಚುನಾವಣೆ ನನ್ನ ಕ್ರಮ ಸಂಖ್ಯೆ 3 ಊರಿಗೆಲ್ಲ ನೀರು, ರಸ್ತೆಗೆ ಟಾರು, ಜನರಿಗೆಲ್ಲಾ ಸೂರು ಎಂಬ ಧ್ಯೇಯ ವಾಕ್ಯವನ್ನು ಅಕ್ಷರ ಸಹ ಸಕಾರಗೊಳಿಸಲು ನನಗೆ ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ, ಸುಧಾಕರ್‌ಲಾಲ್, ಎಂಎಲ್‌ಸಿ ಚಿದಾನಂದಗೌಡ, ತಿಪ್ಪೇಸ್ವಾಮಿ, ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ, ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಮುಖಂಡರಾದ ಎಲ್.ಸಿ.ನಾಗರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಬಿಜೆಪಿ ಮಂಡಲಾಧ್ಯಕ್ಷ ನಾಗೇಂದ್ರ, ಎಸ್.ಆರ್.ಲಕ್ಷ್ಮಮ್ಮ, ಎಸ್.ಡಿ.ಕೃಷ್ಣಪ್ಪ, ಕೊಂಡವಾಡಿ ಚಂದ್ರಶೇಖರ್, ಬಿ.ಎಸ್.ಶ್ರೀನಿವಾಸ್, ಕಾರ್ಯಕರ್ತರು ಇದ್ದರು.