ರಾಜ್ಯ ಆಯವ್ಯಯ ವಿಶೇಷ: ಗ್ಯಾರಂಟಿಯಿಂದ ಅಭಿವೃದ್ಧಿ ಕಡೆಗೆ

KannadaprabhaNewsNetwork |  
Published : Feb 17, 2024, 01:17 AM ISTUpdated : Feb 17, 2024, 11:46 AM IST
ಬಜೆಟ್‌ ಮಂಡನೆ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್‌ನನ್ನು ಶುಕ್ರವಾರ ಮಂಡಿಸಿದರು. 3.71 ಲಕ್ಷ ಕೋಟಿ ರು. ಗಾತ್ರದ ಮುಂಗಡ ಪತ್ರವನ್ನು ಅವರು ಮಂಡಿಸಿದರು. ಸಂಪೂರ್ಣ ಆಯವ್ಯಯದ ಸಂಕ್ಷಿಪ್ತ ನೋಟಿ ಇಲ್ಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡಪ್ರಭ ಬಜೆಟ್ ಎಕ್ಸ್‌ಪ್ರರ್ಟ್‌

ಒಂದು ದಶಕದ ದೂರದೃಷ್ಟಿಯ ಬಜೆಟ್‌
ಈ ಆಯವ್ಯಯ ರಾಜ್ಯದ ಮುಂದಿನ ನಡೆ ನಿರೂಪಿಸುತ್ತದೆ. ಕರ್ನಾಟಕದ ಅಭಿವೃದ್ಧಿಗೆ ಮುಂದಿನ ಒಂದು ದಶಕದ ಹಾದಿಯನ್ನು ನಿಚ್ಚಳಗೊಳಿಸಲಿದೆ. ಗ್ಯಾರಂಟಿ ಯೋಜನೆಗಳೊಂದಿಗೆ ಉದ್ಯೋಗ ಸೃಜನೆ, ಶಿಕ್ಷಣ, ಆರೋಗ್ಯ, ಹಸಿವು ನಿವಾರಣೆ, ಕೃಷಿ ಮತ್ತು ನೀರಾವರಿಗೆ ಪ್ರೋತ್ಸಾಹ, ಮೂಲಸೌಕರ್ಯ ಅಭಿವೃದ್ಧಿ ಮತ್ತಿತರ ವಲಯಗಳ ಅಭಿವೃದ್ಧಿಗೆ ಒತ್ತು ನೀಡಲಿದೆ. - ಸಿದ್ದರಾಮಯ್ಯ ಮುಖ್ಯಮಂತ್ರಿ

ಟಾರ್ಗೆಟ್‌ ಕೇಂದ್ರ, ಬಿಜೆಪಿ
10 ವರ್ಷಗಳ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದ ಅಸಮಾನತೆ ಹೆಚ್ಚಾಗಿದೆ. ಕೆಲವೇ ಜನರ ಬಳಿ ಸಂಪತ್ತಿನ ಶೇಖರಣೆಯಾಗಿದೆ- ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಬಣ್ಣಿಸಿದರು. ಈಗ ನಮ್ಮ ಗ್ಯಾರಂಟಿಗಳನ್ನೇ ಕದ್ದು ಅವರ ಗ್ಯಾರಂಟಿ ಎಂದು ನಂಬಿಸುತ್ತಿದ್ದಾರೆ.

ಜಿಎಸ್‌ಟಿ ಪದ್ಧತಿಯ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ ಕಳೆದ 7 ವರ್ಷಗಳಲ್ಲಿ 59274 ಕೋಟಿ ರು. ನಷ್ಟವಾಗಿದೆ- 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಹಿಂದಿನ ಸರ್ಕಾರ ವಿಫಲವಾಗಿದೆ.

ಹಿಂದಿನ ಸರ್ಕಾರ ಕೈ ಚೆಲ್ಲಿ ಕೂತಿದ್ದರಿಂದ ಅಂತಿಮ ವರದಿಯ ಶಿಫಾರಸಿನಲ್ಲೂ ರಾಜ್ಯಕ್ಕೆ ನಷ್ಟವಾಗಿದೆ-15ನೇ ಹಣಕಾಸು ಆಯೋಗದ 6 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ 62098 ಕೋಟಿ ರು. ನಷ್ಟವಾಗಿದೆ.

ಕೇಂದ್ರ ಸರ್ಕಾರ ಸೆಸ್, ಸರ್‌ಚಾರ್ಜ್‌ಗಳನ್ನು 7 ವರ್ಷಗಳಲ್ಲಿ 153%ರಷ್ಟು ಹೆಚ್ಚಿಸಿದೆ. ಇದನ್ನು ರಾಜ್ಯಗಳಿಗೆ ಹಂಚಿಕೆ ಮಾಡದ ಕಾರಣ, ಕರ್ನಾಟಕಕ್ಕೆ 45,322 ಕೋಟಿ ರು. ನಷ್ಟ ಉಂಟಾಗಿದೆ.

ಭದ್ರಾ ಮೇಲ್ದಂಡೆಗೆ 5300 ಕೋಟಿ ರು. ಘೋಷಿಸಿದ್ದ ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ. ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು.

ಕೇಂದ್ರದ ಅಂಗಳಕ್ಕೆ- ಅಡಿಕೆ, ಈರುಳ್ಳಿ, ದ್ರಾಕ್ಷಿ, ಮಾವು, ಬಾಳೆಗೂ ಕನಿಷ್ಠ ಬೆಂಬಲ ಬೆಲೆ ನೀಡಲು ಕೇಂದ್ರಕ್ಕೆ ಒತ್ತಾಯ

ಕನಿಷ್ಠ ಬೆಂಬಲ ಬೆಲೆಯನ್ನು ವ್ಯವಸಾಯಕ್ಕೆ ತಗುಲುವ ವೆಚ್ಚ ಮತ್ತು ಶೇ.50ರಷ್ಟು ಲಾಭಾಂಶ ಆಧಾರದಡಿ ನಿಗದಿಗೆ ಕೇಂದ್ರಕ್ಕೆ ಆಗ್ರಹ

ಬೆಂಗಳೂರು ಸಬರ್ಬನ್‌ ರೈಲು ಯೋಜನೆಗೆ ಹೆಚ್ಚು ಅನುದಾನ ನೀಡಲು ಒತ್ತಾಯ

ಜನರಿಗೆ 4 ಸೆಸ್‌ ಹೊರೆ

1. ನಗರ ಪ್ರದೇಶದ ಬಡ ನಿವಾಸಿಗಳಿಗೆ ಅಗ್ಗದ ದರದಲ್ಲಿ ವಸತಿ ಸೌಲಭ್ಯ ಒದಗಿಸಲು ವಸತಿ ಸೆಸ್‌. ಜತೆಗೆ ಕೊಳಗೇರಿ ಸೆಸ್‌ ಪರಿಷ್ಕರಣೆ.

2. ಗಿಗ್‌ (ಡೆಲಿವರಿ ಬಾಯ್‌) ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳ ಜಾರಿಗಾಗಿ ಆನ್‌ಲೈನ್‌ ವಹಿವಾಟುಗಳ ಮೇಲೆ ಸೆಸ್‌

3. ಸಾರಿಗೆ ವಾಹನಗಳ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮ ರೂಪಿಸಲು ವಾಣಿಜ್ಯ ಸಾರಿಗೆ ವಾಹನ ನೋಂದಣಿ ಮೇಲೆ ಸುಂಕ

4. ಅಗ್ನಿಶಾಮಕ ಇಲಾಖೆ ಕಾರ್ಯಕ್ಷಮತೆ ಹೆಚ್ಚಿಸಲು ರಾಜ್ಯದ ಹೊಸ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆ ಮೇಲೆ ಶೇ.1ರಷ್ಟು ಫೈರ್‌ ಸೆಸ್‌

ಗ್ಯಾರಂಟಿ ಯೋಜನೆ ಮುಂದುವರಿಸುವುದರ ಜತೆಗೆ 10 ವರ್ಷಗಳ ಅಭಿವೃದ್ಧಿ ಕನಸು ಬಿಚ್ಚಿಟ್ಟ ಸಿದ್ದರಾಮಯ್ಯ

ಹೊಸ ಯೋಜನೆಗಳು 
ರೈತರಿಗಾಗಿ ‘ಕರ್ನಾಟಕ ರೈತ ಸಮೃದ್ಧಿ: ’ಕೃಷಿ ಕ್ಷೇತ್ರವನ್ನು ಸುಸ್ಥಿರ, ಲಾಭದಾಯಕವಾಗಿಸಲು ವಿವಿಧ ರೈತ ಯೋಜನೆಗಳನ್ನು ಒಗ್ಗೂಡಿಸಿ, ಸಮಗ್ರ ಕೃಷಿ ಉತ್ತೇಜಿಸುವ ‘ಕರ್ನಾಟಕ ರೈತ ಸಮೃದ್ಧಿ ಯೋಜನೆ’ ಜಾರಿ. ಯಾವ ಬೆಳೆ ಬೆಳೆಯಬೇಕೆಂದು ರೈತರಿಗೆ ಮಾರ್ಗದರ್ಶನ. ಮಾರುಕಟ್ಟೆ ಸಂಪರ್ಕ ಸೇರಿ ಹಲವು ನೆರವು
ಮನೆಗೇ ಪಡಿತರ ಹಂಚಲು ‘ಅನ್ನ-ಸುವಿಧಾ’: 80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆಗಳಿಗೆ ಹೋಂ ಡೆಲಿವರಿ ಆ್ಯಪ್‌ ಮೂಲಕ ಆಹಾರ ಧಾನ್ಯ ತಲುಪಿಸಲು ‘ಅನ್ನ-ಸುವಿಧಾ’ ಯೋಜನೆ
‘ಕೆಫೆ ಸಂಜೀವಿನಿ’ ಮಹಿಳಾ ಕ್ಯಾಂಟೀನ್‌: ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಅಗ್ಗದ ದರದಲ್ಲಿ ಶುಚಿ-ರುಚಿಯಾಗಿ ಒದಗಿಸಲು ಮಹಿಳೆಯರೇ ನಡೆಸುವ ‘ಕೆಫೆ ಸಂಜೀವಿನಿ’ ಕ್ಯಾಂಟೀನ್‌ ಸ್ಥಾಪನೆ. ಈ ವರ್ಷ ₹7.50 ಕೋಟಿ ವೆಚ್ಚದಲ್ಲಿ 50 ಕೆಫೆಗಳ ಸ್ಥಾಪನೆ.
ಗ್ರಾಮೀಣ ರಸ್ತೆಗಾಗಿ ‘ಪ್ರಗತಿ ಪಥ’: ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿಗೆ ‘ಪ್ರಗತಿ ಪಥ’ ಯೋಜನೆ. 189 ವಿಧಾನಸಭಾ ಕ್ಷೇತ್ರಗಳಲ್ಲಿ 5200 ಕೋಟಿ ರು. ವೆಚ್ಚದಲ್ಲಿ ತಲಾ 50 ಕಿ.ಮೀ. ರಸ್ತೆಯಂತೆ 9450 ಕಿ.ಮೀ. ಅಭಿವೃದ್ಧಿ.
ಹೈ-ಕ ಭಾಗಕ್ಕೆ ‘ಕಲ್ಯಾಣಪಥ’: ಕಲ್ಯಾಣ ಕರ್ನಾಟಕದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಗ್ರಾಮ ಸಡಕ್‌ ಮಾದರಿಯಲ್ಲಿ 1150 ಕಿ.ಮೀ. ರಸ್ತೆ 1000 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ. ಇದಕ್ಕಾಗಿ ‘ಕಲ್ಯಾಣ ಪಥ’ ಯೋಜನೆ
ಗ್ರಾಪಂಗಳಿಗೆ ‘ಹೊಂಬೆಳಕು’: ಗ್ರಾಪಂಗಳ ವಿದ್ಯುತ್‌ ವೆಚ್ಚ ಕಡಿಮೆ ಮಾಡಲು ‘ಹೊಂಬೆಳಕು’ ಕಾರ್ಯಕ್ರಮ. ಇದರಡಿ 50 ಗ್ರಾಪಂಗಳಲ್ಲಿ 25 ಕೋಟಿ ರು. ವೆಚ್ಚದಲ್ಲಿ ಸೋಲಾರ್‌ ದೀಪ ಅಳವಡಿಕೆ.
ಭಾಷಾನುವಾದಕ್ಕೆ ‘ಕನ್ನಡ ಕಸ್ತೂರಿ’:  ಕನ್ನಡ ಭಾಷೆಯ ಭಾಷಾಂತರದಲ್ಲಿ ಉಂಟಾಗುವ ಅಡೆತಡೆ ನಿವಾರಿಸಲು, ಎಲ್ಲರಿಗೂ ಸಹಾಯವಾಗುವಂತೆ ‘ಕನ್ನಡ ಕಸ್ತೂರಿ’ ಎಂಬ ಯಂತ್ರಾನುವಾದ ತಂತ್ರಾಂಶ ಅಭಿವೃದ್ಧಿ.
‘ನಮ್ಮ ಮಿಲ್ಲೆಟ್‌’ ಕಾರ್ಯಕ್ರಮ: ಸಂಸ್ಕರಿಸಿದ ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧಿತ ಸಿರಿ ಧಾನ್ಯ ಉತ್ಪನ್ನಗಳನ್ನು ಕೈಗೆಟಕುವ ದರದಲ್ಲಿ ದೊರಕಿಸಲು ‘ನಮ್ಮ ಮಿಲ್ಲೆಟ್‌’ ಕಾರ್ಯಕ್ರಮ.
ಮುಟ್ಟಿನ ಕಪ್‌ ಬಳಕೆಗೆ ‘ಪ್ರೇರಣಾ’: ಮೆನ್‌ಸ್ಟ್ರುವಲ್‌ ಕಪ್‌ ಬಳಕೆ ಬಗ್ಗೆ ಸ್ವಸಹಾಯ ಗುಂಪುಗಳ ಮಹಿಳೆಯರು, ಗ್ರಾಪಂ ಮಹಿಳಾ ಸದಸ್ಯರು, ಗ್ರಾಮೀಣ ಪ್ರದೇಶದ ಮುಂಚೂಣಿ ಕಾರ್ಯಕರ್ತೆಯರಿಗೆ ಪ್ರೋತ್ಸಾಹ. ಇದಕ್ಕಾಗಿ ಪ್ರೇರಣಾ ಕಾರ್ಯಕ್ರಮ.
ಸ್ತ್ರೀಯರಿಗೆ ‘ಸಾವಿತ್ರಿ ಫುಲೆ’ ಯೋಜನೆ: ಮಹಿಳೆಯರ ಆಕಾಂಕ್ಷಿ, ಆಸಕ್ತಿಗೆ ಅನುಗುಣವಾಗಿ ಮಹಿಳೆಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲು ಆಯ್ದ 100 ಗ್ರಾಪಂಗಳಲ್ಲಿ ‘ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ’ ಯೋಜನೆ.
ವಿದ್ಯಾರ್ಥಿಗಳಿಗೆ ‘ವಿದ್ಯಾವಾರಿಧಿ ಸಂಚಯ’: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಮತ್ತು ಉದ್ಯೋಗಾವಕಾಶಗಳನ್ನು ಸಮರ್ಥವಾಗಿ ಒದಗಿಸಿ ಯಶಸ್ಸು ಪ್ರೋತ್ಸಾಹಿಸಲು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾ ವಾರಿಧಿ ಎಂಬ ಸಮಗ್ರ ದತ್ತ ಸಂಚಯ ನಿರ್ಮಾಣ.
ಉನ್ನತ ಶಿಕ್ಷಣ ಸಂಸ್ಥೆಗಾಗಿ ‘ಬೇರು- ಚಿಗುರು’: ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ‘ಬೇರು- ಚಿಗುರು’ ವಿನೂತನ ಕಾರ್ಯಕ್ರಮ.
ಬಿಇ ವಿದ್ಯಾರ್ಥಿಗಳಿಗೆ ‘ಪ್ರೇರಣಾ’: ವಿಷಯ ತಜ್ಞರು, ನಾಗರಿಕ ಸೇವಾ ಅಧಿಕಾರಿಗಳು, ಉದ್ಯಮಿಗಳಿಂದ ಸರ್ಕಾರಿ ಪಾಲಿಟೆಕ್ನಿಕ್‌ ಮತ್ತು ಸರ್ಕಾರಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ‘ಪ್ರೇರಣಾ’ ಹೆಸರಲ್ಲಿ ಮಾರ್ಗದರ್ಶನ
‘ನನ್ನ ಗುರುತು’ ಅಭಿಯಾನ: ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ದಲಿತ ಜನರು ಸರ್ಕಾರದ ಮಾನ್ಯತೆಯುಳ್ಳ ದಾಖಲೆಗಳನ್ನು ಡಿಜಿಲಾಕರ್‌ ಆಪ್‌ನಲ್ಲಿ ಸಂಗ್ರಹಿಸಿಡಲು ‘ನನ್ನ ಗುರುತು’ ಅಭಿಯಾನ.
ಚಿಕ್ಕಮಗಳೂರಿನಲ್ಲಿ ‘ಸ್ಪೈಸ್‌ ಪಾರ್ಕ್‌’: ರಾಜ್ಯದಲ್ಲಿ ಸಾಂಬಾರು ಪದಾರ್ಥ ಬೆಳೆವ ರೈತರನ್ನು ಪ್ರೋತ್ಸಾಹಿಸಲು, ಆ ಬೆಳೆಗಳ ರಫ್ತು ಉತ್ತೇಜಿಸಲು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪೈಸ್‌ ಪಾರ್ಕ್‌.
ತಳಿ ರಕ್ಷಣೆಗೆ ‘ಸಮುದಾಯ ಬೀಜ ಬ್ಯಾಂಕ್‌’: ಕಣ್ಮರೆಯಾಗುತ್ತಿರುವ, ನಶಿಸುತ್ತಿರುವ ಸ್ಥಳೀಯ ಬೆಳೆಗಳ ತಳಿ ಸಂಗ್ರಹಿಸಿ, ಸಂರಕ್ಷಿಸಲು ‘ಸಮುದಾಯ ಬೀಜ ಬ್ಯಾಂಕ್‌’ ಸ್ಥಾಪನೆ.
ಶಾಲೆಗಳಲ್ಲಿ ‘ನಾವು- ಮನುಜರು’ ಚರ್ಚೆ: ಎಲ್ಲ ಶಾಲಾ-ಕಾಲೇಜುಗಳಲ್ಲಿ ವಾರಕ್ಕೆ ಎರಡು ಗಂಟೆಗಳ ವಿಚಾರ - ವಿಮರ್ಶೆ ಮತ್ತು ಸಂವಾದ ಚಟುವಟಿಕೆ ನಡೆಸಲು ‘ನಾವು- ಮನುಜರು’ ಎಂಬ ಹೆಸರಿನ ಕಾರ್ಯಕ್ರಮ.
2000 ಸರ್ಕಾರಿ ಶಾಲೆಗಳಲ್ಲಿ ಕನ್ನಡ - ಇಂಗ್ಲಿಷ್‌ ಮೀಡಿಯಂ: 2000 ಸರ್ಕಾರಿ ಪ್ರಾಥಮಿಕ ಶಾಲೆಗಳು ದ್ವಿಭಾಷಾ ಮಾಧ್ಯಮವಾಗಿ ಪರಿವರ್ತನೆ. ವಿದ್ಯಾರ್ಥಿಗಳು ಹೆಚ್ಚಿರುವ ಪ್ರೌಢಶಾಲೆಗಳಲ್ಲಿ ವಿಜ್ಞಾನ ಲ್ಯಾಬ್‌, ಕಂಪ್ಯೂಟರ್ ಲ್ಯಾಬ್‌. ಕಲಿಕೆಯಲ್ಲಿ ಹಿಂದುಳಿದ 6, 7ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ 10 ಕೋಟಿ ಅನುದಾನದಲ್ಲಿ ಮರು ಸಿಂಚನ ಕಾರ್ಯಕ್ರಮ.
ಬರಲಿವೆ ಕಿಸಾನ್‌ ಮಾಲ್‌ಗಳು: ತೋಟಗಾರಿಕೆಗೆ ಸಂಬಂಧಿಸಿದ ತಾಂತ್ರಿಕ ಸಲಹೆ, ಮಾರುಕಟ್ಟೆ ಸಂಪರ್ಕ, ಬೇಸಾಯ ಪರಿಕರ ಮತ್ತು ಉತ್ಪನ್ನಗಳನ್ನು ಒಂದೇ ಸೂರಿನಡಿ ಒದಗಿಸಲು ಆಯ್ದ ಜಿಲ್ಲೆಗಳಲ್ಲಿ ಕಿಸಾನ್‌ ಮಾಲ್‌ ಸ್ಥಾಪನೆ.
ಏರ್ಪೋರ್ಟ್‌ಗಳ ಬಳಿ ಆಹಾರ ಪಾರ್ಕ್‌: ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಉತ್ತೇಜಿಸಲು ರಾಜ್ಯದ ಏರ್‌ಪೋರ್ಟ್‌ಗಳ ಬಳಿ ಆಹಾರ ಪಾರ್ಕ್‌ ಸ್ಥಾಪನೆ. ಶಿವಮೊಗ್ಗ, ವಿಜಯಪುರ, ಬೆಂಗಳೂರು ಗ್ರಾಮಾಂತರದಲ್ಲಿ ಈ ವರ್ಷ ಶುರು.
ಮಹಿಳೆಯರಿಗೆ 6% ಹೈನು ಸಾಲ: ರೈತ ಮಹಿಳೆಯರು ಹೈನುಗಾರಿಕೆ ಮಾಡಲು ಪ್ರೋತ್ಸಾಹ. ಹಸು ಅಥವಾ ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮಹಿಳೆಯರಿಗೆ ಸರ್ಕಾರದಿಂದ ಶೇ.6ರಷ್ಟು ಬಡ್ಡಿ ಸಹಾಯಧನ.
ಮೀನುಗಾರರಿಗೆ ‘ಸಮುದ್ರ ಆ್ಯಂಬುಲೆನ್ಸ್‌’:  ಮೀನುಗಾರಿಕೆ ವೇಳೆ ಅಪಘಾತ ಅಥವಾ ಅನಾರೋಗ್ಯಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ರಕ್ಷಿಸಿ ಕರೆತರಲು ರಾಜ್ಯದಲ್ಲಿ ಪ್ರಪ್ರಥಮ ಸಮುದ್ರ ಆಂಬ್ಯುಲೆನ್ಸ್‌. 7 ಕೋಟಿ ರು. ವೆಚ್ಚದಲ್ಲಿ ಖರೀದಿ.
ಕುರಿಗಾಹಿಗಳಿಗೆ ಬಂಪರ್‌: ವಲಸೆ ಕುರಿಗಾಹಿಗಳು ಮತ್ತು ಸ್ವತ್ತುಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಜಾರಿ. ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ. ಅವರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿ ವೇತನ ಸಹಿತ ಶಿಕ್ಷಣ. ಸಂಚಾರಿ ಕುರಿಗಾಹಿಗಳು ಇರುವ ಜಾಗದಲ್ಲೇ ಕುರಿ, ಮೇಕೆಗೆ ಸರ್ಕಾರಿ ವೈದ್ಯರಿಂದ ಲಸಿಕೆ.
ಮೀನುಗಾರಿಕೆಗೆ ₹3000 ಕೋಟಿ:  ಹೊನ್ನಾವರದ ಮಂಕಿ/ಕಾಸರಗೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ. ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ. ಮುರುಡೇಶ್ವರದಲ್ಲಿ ಮೀನುಗಾರಿಕೆ ಹೊರಬಂದರು. ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ. ಇದಕ್ಕಾಗಿ ಮೀನುಗಾರಿಕಾ ಕ್ಷೇತ್ರಕ್ಕೆ 3000 ಕೋಟಿ ರು. ಅನುದಾನ.
ಮೀನುಗಾರರ ಪರಿಹಾರ ಡಬಲ್‌: ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಕರಾವಳಿಯ ಮೀನುಗಾರರಿಗೆ ನೀಡಲಾಗುವ ಪರಿಹಾರ ಮೊತ್ತ 1500 ರು.ನಿಂದ 3000 ರು.ಗೆ ಹೆಚ್ಚಳ. 10000 ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ.
ರಾಜ್ಯದ 11 ನಗರಗಳಲ್ಲಿ ನೈಟ್‌ಲೈಫ್‌: ಬೆಂಗಳೂರು ಹಾಗೂ 10 ಮಹಾನಗರ ಪಾಲಿಕೆಗಳಲ್ಲಿ ರಾತ್ರಿಯ ವೇಳೆ ವ್ಯಾಪಾರ- ವಹಿವಾಟಿನ ಮೇಲಿನ ನಿರ್ಬಂಧ ಬೆಳಗಿನ ಜಾವ 1 ರವರೆಗೆ ವಿಸ್ತರಣೆ.
1 ಲಕ್ಷ ಮಹಿಳೆಯರಿನ್ನು ಕಾಫಿ ಉದ್ಯಮಿಗಳು: ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ 1 ಲಕ್ಷ ಮಹಿಳೆಯರಿಗೆ ಕಾಫಿ ಉದ್ಯಮಿಗಳಾಗಲು ಕಾಫಿ ಮಂಡಳಿಯ ಸಹಭಾಗಿತ್ವದಲ್ಲಿ ತರಬೇತಿ. 25 ಕೋಟಿ ರು. ವೆಚ್ಚದಲ್ಲಿ 2500 ಕಾಫಿ ಕಿಯೋಸ್ಕ್‌ಗಳ ಸ್ಥಾಪನೆ. ಮಹಿಳೆಯರಿಂದಲೇ ಇವುಗಳ ನಿರ್ವಹಣೆ.
ದೇವದಾಸಿಯರ ಮಾಸಾಶನ ಹೆಚ್ಚಳ: ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಇರುವ ‘ಮೈತ್ರಿ’ ಯೋಜನೆಯಡಿ ನೀಡುತ್ತಿರುವ ಮಾಸಾಶನ 800 ರು.ಗಳಿಂದ 1200 ರು.ಗಳಿಗೆ ಹೆಚ್ಚಳ. ದೇವದಾಸಿಯರ ಮಾಸಾಶನ 1500 ರು.ನಿಂದ 2000 ರು.ಗೆ ಹೆಚ್ಚಳ.
ಡ್ಯಾಂಗಳ ಹಿನ್ನೀರಿನಲ್ಲಿ ಸೋಲಾರ್ ಪಾರ್ಕ್‌: ಜಲಸಂಪನ್ಮೂಲ ಇಲಾಖೆಯ ಮಾಲೀಕತ್ವದ ಜಮೀನು ಹಾಗೂ ಡ್ಯಾಂಗಳ ಹಿನ್ನೀರಿನಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣ
ಬೆಂಗಳೂರು ಮೇಲಿನ ಒತ್ತಡ ತಗ್ಗಿಸಲು ಬೇರೆ ಸಿಟಿ ಅಭಿವೃದ್ಧಿ: ಬೆಂಗಳೂರಿಗೆ ಪರ್ಯಾಯವಾಗಿ ರಾಜ್ಯದಲ್ಲಿ ಸುಸ್ಥಿರವಾದ ಮೂಲಸೌಕರ್ಯ ಹೊಂದಿದ, ಉದ್ಯೋಗವಕಾಶ ಸೃಷ್ಟಿಸುವ ಆಕರ್ಷಕ ನಗರಗಳ ಅಭಿವೃದ್ಧಿ. ತನ್ಮೂಲಕ ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸಲು ಕ್ರಮ
ರಾಜ್ಯದ 8 ಕಡೆ ಟೌನ್‌ಶಿಪ್‌:ಮೈಸೂರು, ಮಂಗಳೂರು, ಹು-ಧಾ, ಬೆಳಗಾವಿ, ಕಲಬುರಗಿ, ಕೆಜಿಎಫ್‌, ತುಮಕೂರು, ಬಳ್ಳಾರಿಯಲ್ಲಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಅಭಿವೃದ್ಧಿ
ಬೆಂಗಳೂರು ನಗರದ ಸುತ್ತ 6 ಸ್ಯಾಟಲೈಟ್‌ ಟೌನ್‌ಶಿಪ್‌: ಬೆಂಗಳೂರು ಹೊರವಲಯದಲ್ಲಿರುವ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ, ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ ಅಭಿವೃದ್ಧಿ.
ರಾಜ್ಯದಿಂದಲೇ 2 ಆರ್ಥಿಕ ಕಾರಿಡಾರ್‌ಗಳ ಅಭಿವೃದ್ಧಿ: ರಾಜ್ಯ ಸರ್ಕಾರದಿಂದಲೇ 2 ಆರ್ಥಿಕ ಕಾರಿಡಾರ್‌ ಅಭಿವೃದ್ಧಿ. ಮಂಗಳೂರು ಬಂದರಿನಿಂದ ಬೆಂಗಳೂರು, ಬೀದರ್‌- ಬೆಂಗಳೂರು ನಡುವೆ ಮತ್ತೊಂದು ಕಾರಿಡಾರ್‌ ಸೃಷ್ಟಿ.
2025ರ ಫೆಬ್ರವರಿಯಲ್ಲಿ ಹೂಡಿಕೆ ಸಮಾವೇಶ: ವಿದೇಶಿ ಹೂಡಿಕೆ ಆಕರ್ಷಿಸಲು 2025ರ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ. ಹೂಡಿಕೆ ಆಕರ್ಷಿಸಲು ಹೊಸ ಕೈಗಾರಿಕಾ ನೀತಿ ಜಾರಿ.
ಮಂಗಳೂರಿನಲ್ಲಿ ಜಲಮೆಟ್ರೋ: ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆ ಪರಿಚಯಿಸಲು ಕಾರ್ಯಸಾಧ್ಯತಾ ವರದಿ ತಯಾರಿ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ