
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾಗಾಂಧಿ, ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಪಂಚಗ್ಯಾರಂಟಿ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಜ.7ರಂದು ಡಿ.ದೇವರಾಜ ಅರಸು ಅವರಿಗಿಂತ ಒಂದು ದಿನ ಹೆಚ್ಚಾಗುತ್ತದೆ. ಆ ದಾಖಲೆ ನಮಗೆಲ್ಲ ಹೆಮ್ಮೆ ಇದೆ. ಅರಸು, ಸಿದ್ದರಾಮಯ್ಯ ಶ್ರೇಷ್ಠ ನಾಯಕರು. ಸಿಎಂ ಆಡಳಿತಕ್ಕೆ 10ರ ಪೈಕಿ 11 ಅಂಕ ಕೊಡುತ್ತೇನೆ ಎಂದರು.
ಸಿಎಂ ದಾಖಲೆಗೆ ಬಿಜೆಪಿ ವಿರೋಧ ವಿಚಾರದ ಬಗ್ಗೆ ಮಾತನಾಡಿ, ಬಿಜೆಪಿಯವರು ಏನು ಮಾಡೋಕೆ ಆಗುತ್ತೆ. ನಾಲ್ಕು ವರ್ಷ ಏನು ಸಾಧನೆ ಮಾಡಿದರು?. ಸಿದ್ದರಾಮಯ್ಯ 5 ವರ್ಷ ಪೂರೈಸಿ ಎರಡನೇ ಅವಧಿಗೆ ಮುಂದುವರಿದಿದ್ದಾರೆ. ಯಡಿಯೂರಪ್ಪರನ್ನು ಆಡಳಿತ ಮಾಡೋಕೆ ಬಿಡಲಿಲ್ಲ. ಎರಡೂ ಬಾರಿಯೂ ಪಾಪ ಅವಧಿಗೂ ಮುನ್ನವೇ ತೆಗೆದು ಹಾಕಿದರು. ಇದನ್ನು ಬಿಜೆಪಿಯವರಿಗೆ ಕೇಳಿ. ಯಡಿಯೂರಪ್ಪರನ್ನು ಎರಡು ಬಾರಿಯೂ ಅವಧಿ ಪೂರೈಸದಂತೆ ಮಾಡಿದ್ದೆ ಬಿಜೆಪಿಯವರ ಸಾಧನೆ ಎಂದು ಟೀಕಿಸಿದರು.ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಯನ್ನು ಸಿಎಂ ಉದ್ಘಾಟನೆಗೆ ಪಂಚಮಸಾಲಿ ಮುಖಂಡರ ವಿರೋಧ ವಿಚಾರದ ಕುರಿತು ಮಾತನಾಡಿ, ಉದ್ಘಾಟನೆಗೆ ಯಾವುದೇ ವಿರೋಧ, ಗೊಂದಲ ಇಲ್ಲ. ರಾಣಿ ಚನ್ನಮ್ಮ ಮೂರ್ತಿ ಉದ್ಘಾಟನೆಗೆ ಪಂಚಮಸಾಲಿ ಸಮುದಾಯ ವಿರೋಧ ಅನ್ನೋದು ಮುಗಿದು ಹೋದ ಅಧ್ಯಾಯ. 2ಎ ಹೋರಾಟಕ್ಕೂ ಮೂರ್ತಿ ಉದ್ಘಾಟನೆಗೂ ಸಂಬಂಧ ಇಲ್ಲ ಎಂದು ಈಗಾಗಲೇ ಪಂಚಮಸಾಲಿ ಜಗದ್ಗುರುಗಳು ಹೇಳಿದ್ದಾರೆ. ರಾಣಿ ಚನ್ನಮ್ಮ ದೇಶದ ಆಸ್ತಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಕನ್ನಡ ನಾಡಿನ ಶ್ರೇಷ್ಠ ಮಹಿಳೆ. ಪಂಚಮಸಾಲಿ ಸಮುದಾಯದಲ್ಲಿ ಹುಟ್ಟಿರುವ ಹೆಮ್ಮೆ ಆ ಸಮುದಾಯಕ್ಕೆ ಇರಬೇಕು. ಮೂರ್ತಿ ಉದ್ಘಾಟನೆ ವಿಚಾರದಲ್ಲಿ ಯಾವುದೇ ಪ್ರಶ್ನೆ ಇಲ್ಲ. ಎಲ್ಲರೂ ಕೂಡಿಯೇ ಮೂರ್ತಿ ಉದ್ಘಾಟನೆ ಮಾಡುತ್ತಿದ್ದೇವೆ. ಯಾವುದೇ ಗೊಂದಲ ಇಲ್ಲ ಎಂದರು.
ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ, ಪಿಪಿಪಿ ವಿರೋಧಿ ಹೋರಾಟ ಹಾಗೂ ಹೋರಾಟಗಾರ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಸಿಎಂ ಅವರನ್ನು ಭೇಟಿ ಮಾಡಿಸಿದ್ದೇನೆ. ಪಿಪಿಪಿ ಮಾದರಿ ಮೆಡಿಕಲ್ ಕಾಲೇಜು ಬೇಡ. ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಅಂದಾಗ, ಸಿಎಂ ಕೂಡ ಹಾಗೇ ಮಾಡೋಣ ಎಂದಿದ್ದಾರೆ. ಇವರು ಅರ್ಥ ಮಾಡಿಕೊಳ್ಳಬೇಕಿತ್ತು, ನಾನು ಈಗಾಗಲೇ ಸುದ್ದಿಗೋಷ್ಠಿ ಮಾಡಿ ಹೇಳಿದ್ದೇನೆ. ಮತ್ತೊಮ್ಮೆ ಸಿಎಂ ಭೇಟಿ ಮಾಡಿಸೋದಾಗಿಯೂ ಹೇಳಿದ್ದೇನೆ ಜ.9 ರಂದು ಸಿಎಂ ಬಂದಾಗಲೂ ಭೇಟಿ ಮಾಡಿಸುತ್ತೇನೆ. ನನ್ನಲ್ಲಿ ಸ್ಪಷ್ಟತೆಯಿದೆ. ಇಷ್ಟೆಲ್ಲ ಹೇಳಿದಾಗಲೂ ಮತ್ತೆ ಹೋರಾಟ ಮಾಡಿದರೆ ಹೇಗೆ?. ನನಗೆ ಇದರ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ ಎಂದು ಹೇಳಿದರು.ಸ್ವಾಮೀಜಿ ಸೇರಿ ಕೆಲವರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ನನಗೆ ಗೊತ್ತಿಲ್ಲ, ಪೊಲೀಸರಿಗೆ ಕಪಾಳಕ್ಕೆ ಹೊಡೆದರೆ ನಡೆಯುತ್ತಾ?. ಸ್ವಾಮೀಜಿಗಳು ಇರಲಿ ಯಾರೇ ಇರಲಿ. ಎಂ.ಬಿ.ಪಾಟೀಲ ಕಪಾಳಕ್ಕೆ ಹೊಡೆದರೆ ನಡೆಯುತ್ತಾ? ಅದೇನು ಇದೆಯೋ ಅದನ್ನು ಕಾನೂನು ನೋಡಿಕೊಳ್ಳುತ್ತದೆ, ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಹೋರಾಟಗಾರರ ಟೆಂಟ್ ಕಿತ್ತು ಹಾಕಿದ ವಿಚಾರದ ಬಗ್ಗೆ ಮಾತನಾಡಿ, ನಾನು ಈಗಾಗಲೇ ಸಿಎಂ ಅವರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬಗ್ಗೆ ಹೇಳಿದ್ದೇನೆ. ಸಿಎಂ ಕೂಡ ಆಯ್ತು ಎಂದಿದ್ದಾರೆ. ಇಷ್ಟಾದ ಮೇಲೂ ಇವರ ಉದ್ದೇಶ ಏನು? ಸಿಎಂ ಬರೆದು ಕೊಡಲು, ಕ್ಯಾಬಿನೆಟ್‌ನಲ್ಲಿ ಅನೌನ್ಸ್ ಮಾಡೋದಕ್ಕೆ ಆಗೋದಿಲ್ಲ. ರಾಜ್ಯದಲ್ಲಿ ದಿನಕ್ಕೆ ಸಾವಿರ ಪ್ರತಿಭಟನೆಗಳು ಆಗುತ್ತವೆ. ಎಲ್ಲರಿಗೂ ಲಿಖಿತವಾಗಿ ಬರೆದುಕೊಡಲು ಆಗುತ್ತದಾ ಎಂದು ಪ್ರಶ್ನಿಸಿದರು.ಪ್ರತಿಭಟನಾಕಾರರ ಹಾದಿ ತಪ್ಪಿಸಲಾಗಿದೆ. ಹೋರಾಟಗಾರರ ಬಗ್ಗೆ ನನಗೆ ಗೌರವ ಇದೆ. ಜ.9ಕ್ಕೆ ಸಿಎಂ ಬರ್ತಾರೆ ಮತ್ತೊಮ್ಮೆ ಮುಖಂಡರನ್ನು ಭೇಟಿ ಮಾಡಿಸುತ್ತೇನೆ. ಸಿಎಂ ಕಡೆಯಿಂದಲೇ ಹೇಳಿಸುತ್ತೇನೆ. ಬರವಣಿಗೆಯಲ್ಲಿ ಬೇಕು, ಕ್ಯಾಬಿನೆಟ್‌ನಲ್ಲಿ ಡಿಸಿಜನ್ ಅಂದರೆ ಈಗಲೂ ಆಗಲ್ಲ, ಮುಂದೆಯೂ ಆಗಲ್ಲ. ನಮ್ಮ ಮೇಲೆ ನಂಬಿಕೆ ಇರಬೇಕು, ಪಿಪಿಪಿ ಮಾಡಲ್ಲ, ಸರ್ಕಾರಿ ಮೆಡಿಕಲ್ ಕಾಲೇಜು ಮಾಡುತ್ತೇವೆ. ಹಣದ ಲಭ್ಯತೆ ನೋಡಿಕೊಂಡು ಸರ್ಕಾರಿ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಸಿಎಂ ಅವರೇ ಹೇಳ್ತಾರೆ. ಅಲ್ಲಿಗೆ ಸರಿ ಆಯ್ತಲ್ಲ?.
-ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ