ಕನ್ನಡಪ್ರಭ ವಾರ್ತೆ ಮಹದೇವಪುರ (ಬೆಂಗಳೂರು)
ಅತ್ತ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುವ ದಿನವೇ ಇತ್ತ ಬೆಂಗಳೂರಿನಲ್ಲಿ ಶ್ರೀ ಸೀತಾರಾಮ ಲಕ್ಷ್ಮಣ ಸ್ವಾಮಿ ದೇವಸ್ಥಾನ ಲೋಕಾರ್ಪಣೆಗೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೇಗುಲವನ್ನು ಉದ್ಘಾಟಿಸಲಿದ್ದಾರೆ.
ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರ ಕ್ಷೇತ್ರದ ಹಿರಂಡಹಳ್ಳಿಯಲ್ಲಿ ಶ್ರೀ ಸೀತಾರಾಮ ಲಕ್ಷ್ಮಣ ಸ್ವಾಮಿ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ದೇಗುಲದ ಅಂಗಳದಲ್ಲಿ 32 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು ಈಗಾಗಲೇ ಪ್ರತಿಷ್ಠಾಪಿಸಲಾಗಿದೆ.
ದೇವಾಲಯದ ಲೋಕಾರ್ಪಣೆಗೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಸೋಮವಾರ ಬೆಳಗ್ಗೆ 7 ಗಂಟೆಗೆ ಪ್ರಾಣ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 11 ಗಂಟೆಗೆ ದೇವಾಲಯ ಲೋಕಾರ್ಪಣೆಗೊಳ್ಳಲಿದೆ.
ದೇವಾಲಯವನ್ನು ಹಿರಂಡಹಳ್ಳಿ ಗ್ರಾಮದ ಚೇರ್ಮನ್ ಮುನಿಯಪ್ಪ ಅವರ ಜಮೀನಿನಲ್ಲಿ ಕಳೆದ 12 ವರ್ಷಗಳಿಂದ ಗ್ರಾಮಸ್ಥರು ಪಕ್ಷಾತೀತವಾಗಿ ನಿರ್ಮಾಣ ಮಾಡಿದ್ದಾರೆ.
ದೇಗುಲದ ಅಂಗಳದಲ್ಲಿ 32 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು 2021ರಲ್ಲೇ ಪ್ರತಿಷ್ಠಾಪಿಸಲಾಗಿದೆ. ಇದಕ್ಕಾಗಿ ಕೋಲಾರ ಜಿಲ್ಲೆಯ ನರಸಾಪುರದಿಂದ ಕಲ್ಲನ್ನು ತರಿಸಿ ದೇವಸ್ಥಾನದ ಅಂಗಳದಲ್ಲೇ ಕೆತ್ತಿಸಲಾಗಿತ್ತು.
ಈಗ ಶ್ರೀ ಸೀತಾ ರಾಮ ಲಕ್ಷ್ಮಣ ಸ್ವಾಮಿ ಮೂರ್ತಿಯನ್ನು ನಿರ್ಮಿಸಲಾಗಿದೆ.ಆರಂಭದಲ್ಲಿ ಮುಖ್ಯಮಂತ್ರಿಗಳು ದೇಗುಲ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ತುಮಕೂರಿನಲ್ಲಿ ಭಾನುವಾರ ಮಾತನಾಡಿದ ಅವರು, ಹಿರಂಡಹಳ್ಳಿಯಲ್ಲಿ ಶ್ರೀ ಸೀತಾ ರಾಮ ಲಕ್ಷ್ಮಣ ದೇಗುಲ ಲೋಕಾರ್ಪಣೆಯಲ್ಲಿ ಭಾಗವಹಿಸುವುದಾಗಿ ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಬೈರತಿ ಸುರೇಶ್, ಕೃಷ್ಣಬೈರೇಗೌಡ, ಮಾಜಿ ಸಚಿವರಾದ ಬೈರತಿ ಬಸವರಾಜು, ಅರವಿಂದ ಲಿಂಬಾವಳಿ, ಶಾಸಕರಾದ ಮಂಜುಳಾ ಲಿಂಬಾವಳಿ, ಶರತ್ ಬಚ್ಚೇಗೌಡ ಭಾಗವಹಿಸಲಿದ್ದಾರೆ.