ಕನ್ನಡಪ್ರಭ ವಾರ್ತೆ ಮಂಗಳೂರು
ಮಾಧ್ಯಮದಲ್ಲಿ ಹೇಳಿಕೆ ಕೊಟ್ಟರೆ ಸಚಿವರ ಬದಲಾವಣೆ ಆಗಲ್ಲ. ಮುಖ್ಯಮಂತ್ರಿಗಳು ಸದ್ಯಕ್ಕೆ ಸಿದ್ದರಾಮಯ್ಯನವರೇ ಇರುತ್ತಾರೆ. ಉಪ ಮುಖ್ಯಮಂತ್ರಿಗಳು ಸದ್ಯಕ್ಕೆ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷರೂ ಕೂಡ ಅವರೇ ಇರುತ್ತಾರೆ.ಹೀಗೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮುಖ್ಯಮಂತ್ರಿ ರೇಸ್‌ನಲ್ಲಿ ಡಿಕೆ ಶಿವಕುಮಾರ್ ಇದ್ದಾರೆ, ಸಿಎಂ ಬದಲಾವಣೆ ಸ್ಪಲ್ಪ ಸಮಯ ಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಮಂಗಳೂರಿನಲ್ಲಿ ಈ ಪ್ರತಿಕ್ರಿಯೆ ನೀಡಿದರು.ಸಚಿವರು, ಶಾಸಕರಾಗಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಭೇಟಿಯಾಗೋದು ತಪ್ಪಾ? ಮುಂದಿನ ಚುನಾವಣೆ ತನ್ನ ನೇತೃತ್ವದಲ್ಲೇ ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ. ಅವರು ಹಿರಿಯ ನಾಯಕರು, ಈಗ ಡಿಸಿಎಂ ಆಗಿದ್ದಾರೆ, ನಾವು ಸಾಮೂಹಿಕ ನಾಯಕತ್ವದಲ್ಲೇ ಹೋಗುತ್ತಿದ್ದೇವೆ. ಡಿಕೆಶಿಯವರ ನಾಯಕತ್ವದಲ್ಲೂ ಹೋಗುತ್ತೇವೆ, ಸಿದ್ದರಾಮಯ್ಯ ಅವರ ನಾಯಕತ್ವದಲ್ಲೂ ಹೋಗುತ್ತೇವೆ ಎಂದರು.
ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಸಚಿವ ಸತೀಶ್ ಜಾರಕಿಹೊಳಿ ಏನು ಹೇಳುತ್ತಾ ಇದ್ದಾರೋ ನನಗೇ ಗೊತ್ತಿಲ್ಲ. ಆದರೆ ಒಂದಂತೂ ಸ್ಪಷ್ಟವಾಗಿ ಹೇಳುತ್ತೇನೆ, ಜಾರಕಿಹೋಳಿಯವರು ಕೂಡ ಹೇಳಿದ್ದಾರೆ, ಸದ್ಯಕ್ಕೆ ಸಿಎಂ, ಡಿಸಿಎಂ ಅವರುಗಳೇ ಇರುತ್ತಾರೆ ಎಂದರು.ಸತೀಶ್ ಜಾರಾಕಿಹೊಳಿ ಲೋಕೋಪಯೋಗಿ ಸಚಿವ, ಪ್ರಿಯಾಂಕ್ ಖರ್ಗೆ ಗ್ರಾಮೀಣ ಅಭಿವೃದ್ಧಿ ಸಚಿವನಾಗಿದ್ದೇನೆ. ನಮಗೆ ಎಲ್ಲ ಜವಾಬ್ದಾರಿಗಳನ್ನು ಹೈಕಮಾಂಡ್ ತೀರ್ಮಾನ ಮಾಡಿ ನೀಡಿದೆ. ನಮ್ಮ ಜವಾಬ್ದಾರಿಗಳನ್ನು ನಾವು ಸರಿಯಾಗಿ ನಿಭಾಯಿಸುತ್ತಿದ್ದೇವೆ. ಸಿಎಂ ಬದಲಾವಣೆ ಎಲ್ಲಿ ಆಗಬೇಕು? ಯಾವಾಗ ಆಗಬೇಕು? ಎಲ್ಲಿಂದ ಆಗಬೇಕು? ಯಾರಿಂದ ಆಗಬೇಕು? ಯಾವಾಗ ಆಗುತ್ತೆ ಎಂಬುದು ಗೊತ್ತಿಲ್ಲ. ಎಐಸಿಸಿಯವರು ಎಲ್ಲ ಮಂತ್ರಿಗಳ ವರದಿ ರಿಪೋರ್ಟ್ ಕಾರ್ಡ್ ತೆಗೆದುಕೊಂಡಿದ್ದಾರೆ. ಅದರಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಎಷ್ಟು ಈಡೇರಿಸಿದ್ದೀರಿ?, ಯಾವ ಹೊಸ ನೀತಿಗಳನ್ನು ಜಾರಿಗೆ ತಂದಿದ್ದೀರಿ? ಎಷ್ಟು ಅನುದಾನ ತಂದಿದ್ದೀರಾ?, ಏನು ವಿನೂತನ ಕಾರ್ಯಕ್ರಮ ಮಾಡಿದ್ದೀರಾ ಎನ್ನುವ ಮಾಹಿತಿಯನ್ನು ಎಐಸಿಸಿ ಪಡೆದುಕೊಂಡಿದೆ. ರಿಪೋರ್ಟ್ ಕಾರ್ಡ್ ನಾವು ಇಬ್ಬರಿಗೆ ಕೊಡಬೇಕಿರೋದು. ಒಂದು ಹೈಕಮಾಂಡ್‌ಗೆ, ಇನ್ನೊಂದು ಜನರಿಗೆ ಎಂದರು.
ಹೈಕಮಾಂಡ್ ಭೇಟಿ ಸರಿ:ಡಿಸಿಎಂ ಡಿಕೆಶಿ ಅವರು ಹೈಕಮಾಂಡ್ ಭೇಟಿ ಮಾಡಿರುವುದು ಸರಿ ಎಂದ ಸಚಿವ ಪ್ರಿಯಾಂಕ್ ಖರ್ಗೆ, ನಾವು ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡದೆ ಕೇಶವ ಕೃಪಾಗೆ ಭೇಟಿ ನೀಡಲು ಆಗುತ್ತಾ? ನಾವು ಹೋಗಿ ಮೋದಿಯವರನ್ನು ಭೇಟಿಯಾಗೋದಕ್ಕೆ ಆಗುತ್ತಾ? ನಾವು ಹೋಗಿ ಭೇಟಿಯಾಗೋದು ಸುರ್ಜೆವಾಲ, ವೇಣುಗೋಪಾಲ್, ಖರ್ಗೆ, ರಾಹುಲ್ ಗಾಂಧಿಯವರನ್ನು, ಅದರಲ್ಲಿ ತಪ್ಪೇನಿದೆ? ನಮ್ಮ ಹೈಕಮಾಂಡ್‌ನ್ನು ನಾವು ಭೇಟಿ ಮಾಡದೆ ಮತ್ತೆ ಯಾರು ಭೇಟಿ ಮಾಡುತ್ತಾರೆ ಎಂದು ಅವರು ಮರು ಪ್ರಶ್ನಿಸಿದರು.
ಗ್ಯಾರಂಟಿ ಕೊರತೆ ಆರೋಪಕ್ಕೆ ಕಿಡಿ:ಗ್ಯಾರಂಟಿ ಯೋಜನೆಗಳಿಗೆ ಅನುದಾನ ಕೊರತೆ ಕುರಿತು ವಿಪಕ್ಷ ಬಿಜೆಪಿ ಆರೋಪಕ್ಕೆ ಕಿಡಿ ಕಾರಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿಯವರಿಗೆ ಕೆಲಸ ಇಲ್ಲ, ಕೆಲಸ ಇಲ್ಲವಾದರೆ ಮೈ ಎಲ್ಲ ಪರಚಿಕೊಂಡ ರೀತಿ ಬಿಜೆಪಿಯ ಪರಿಸ್ಥಿತಿಯಾಗಿದೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಮೊದಲು ಉತ್ತರಿಸಲಿ. ಕೇಂದ್ರದಿಂದ ರಾಜ್ಯಕ್ಕೆ ಹಣ ಬರುತ್ತಿಲ್ಲ, ಅವರ ಹಣ ಸಹ ನಾವೇ ಕೊಡುತ್ತಿದ್ದೇವೆ ಎಂದರು.
ಅನ್ಯಾಯ ವಿರುದ್ಧ ಬಿಜೆಪಿ ಧ್ವನಿ ಎತ್ತಲಿ:ಜಲಜೀವನ್ ಮಿಷನ್‌ನಡಿ ರಾಜ್ಯಕ್ಕೆ 36,00 ಕೋಟಿ ರು. ಕೇಂದ್ರ ಕೊಡಬೇಕಿತ್ತು. ನಮಗೆ ಬಂದಿರುವುದು ಕೇವಲ 517 ಕೋಟಿ ರು. ಕುಡಿಯುವ ನೀರಿನ ಯೋಜನೆಯನ್ನು ನಿಲ್ಲಿಸಬಾರದು ಎಂದು ನಮ್ಮ ರಾಜ್ಯ ಸರ್ಕಾರವೇ 2,900 ಕೋಟಿ ರು.ನೀಡಿದೆ. ಹೆಸರು ಮಾತ್ರ ಬಿಜೆಪಿಯವರದ್ದು ಆದರೆ ದುಡ್ಡು ನಮ್ಮದು. ನಮಗೆ ತೆರಿಗೆ ಹಾಗೂ ಜಿಎಸ್‌ಟಿ ಪಾವತಿಯಲ್ಲಿ ಕೇಂದ್ರ ಅನ್ಯಾಯ ಮಾಡುತ್ತಿದೆ. ಜಿಎಸ್‌ಟಿ ಪಾವತಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಕರ್ನಾಟಕಕ್ಕೆ ಬಿಡಿಗಾಸು ನೀಡುತ್ತಿದ್ದಾರೆ. ಆದರೆ ಉತ್ತರ ಪ್ರದೇಶ, ಬಿಹಾರ್ ರಾಜ್ಯಗಳಿಗೆ ಕೋಟ್ಯಂತರ ರು. ಮೊತ್ತ ನೀಡುತ್ತಿದೆ. ಕೇಂದ್ರ ಸರ್ಕಾರದಿಂದದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಬಿಜೆಪಿ ಮೊದಲು ಧ್ವನಿ ಎತ್ತಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಗೃಹ ಲಕ್ಷ್ಮಿ ಯೋಜನೆ ಹಣ ನೀಡಲು ವಿಳಂಬವಾಗಿರುವುದು ನಿಜ. ಈ ವಾರದಲ್ಲಿ ಹಣ ಪಾವತಿಯಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಹಾಗಿರುವಾಗ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿಭಾಗ್ಯ ಎಂದ ಬಿಜೆಪಿಯವರು ಯಾಕೆ ಪ್ರಶ್ನಿಸುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.