ಬಳ್ಳಾರಿ ಗುಂಡಿಗೆ ಗುಟುರು ಹಾಕಿದ ಸಿಎಂ!

KannadaprabhaNewsNetwork |  
Published : Jan 03, 2026, 02:00 AM IST
ಮೃತ ರಾಜಶೇಖರ ಅಂತಿಮಯಾತ್ರೆ  | Kannada Prabha

ಸಾರಾಂಶ

ಬಳ್ಳಾರಿಯಲ್ಲಿ ಕಾಂಗ್ರೆಸ್‌ ಶಾಸಕ ಭರತ್‌ ರೆಡ್ಡಿ ಮತ್ತು ಪಕ್ಷೇತರ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ಬಣ ಬಡಿದಾಟದ ನಡುವೆ ಯುವ ಕಾರ್ಯಕರ್ತ ಗುಂಡಿಗೆ ಬಲಿಯಾದ ಪ್ರಕರಣ ಬಗ್ಗೆ ಗರಂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ/ಬೆಂಗಳೂರು

ಬಳ್ಳಾರಿಯಲ್ಲಿ ಕಾಂಗ್ರೆಸ್‌ ಶಾಸಕ ಭರತ್‌ ರೆಡ್ಡಿ ಮತ್ತು ಪಕ್ಷೇತರ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ಬಣ ಬಡಿದಾಟದ ನಡುವೆ ಯುವ ಕಾರ್ಯಕರ್ತ ಗುಂಡಿಗೆ ಬಲಿಯಾದ ಪ್ರಕರಣ ಬಗ್ಗೆ ಗರಂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ಕುರಿತು ತನಿಖೆ ನಡೆಸಿ ಶೀಘ್ರ ವರದಿ ನೀಡುವಂತೆ ತಾಕೀತು ಮಾಡಿದ್ದಾರೆ.

ಬಳ್ಳಾರಿ ಘಟನೆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯೇ ಮುಖ್ಯಮಂತ್ರಿ ಅವರ ಕಾವೇರಿ ನಿವಾಸಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹಾಗೂ ಪೊಲೀಸ್‌ ಮಹಾನಿರ್ದೇಶಕ ಎಂ.ಎ.ಸಲೀಂ ಹಾಗೂ ಇತರೆ ಹಿರಿಯ ಪೊಲೀಸ್‌ ಅಧಿಕಾರಿಗಳು ಘಟನೆ ಬಗ್ಗೆ ಮಾಹಿತಿ ನೀಡಲು ಮುಂದಾದರು.

ಆದರೆ, ಗುರುವಾರ ರಾತ್ರಿ ನಡೆದ ಘಟನೆ ಬಗ್ಗೆ ತೀವ್ರ ಕೋಪಗೊಂಡಿದ್ದ ಮುಖ್ಯಮಂತ್ರಿ ಅವರು ಉಸ್ತುವಾರಿ ಸಚಿವರು ಹಾಗೂ ಪೊಲೀಸ್‌ ಅಧಿಕಾರಿಗಳ ವಿರುದ್ಧವೂ ಗರಂ ಆದರು. ಬ್ಯಾನರ್‌ ಕಟ್ಟುವ ಸಣ್ಣ ವಿಚಾರಕ್ಕೆ ಇಷ್ಟು ದೊಡ್ಡ ಅನಾಹುತ ಆಗಬೇಕಿತ್ತಾ? ಅಷ್ಟು ಜನ ಪೊಲೀಸರಿದ್ದರೂ ಮೊದಲೇ ಪರಿಸ್ಥಿತಿ ನಿಭಾಯಿಸದೆ ಏನು ಮಾಡುತ್ತಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೆ ತಕ್ಷಣ ಸ್ಥಳಕ್ಕೆ ಹೋಗಿ ಪರಿಸ್ಥಿತಿ ನಿಭಾಯಿಸಿ, ವರದಿ ನೀಡಲು ಜಮೀರ್‌ ಅವರಿಗೆ ಸೂಚಿಸಿದರಲ್ಲದೆ, ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಸಹಿಸಲ್ಲ. ಕೂಡಲೇ ಸಮಗ್ರ ತನಿಖೆ ನಡೆಸಿ ಆದಷ್ಟು ಬೇಗ ವರದಿ ನೀಡಲು ಪೊಲೀಸ್‌ ಅಧಿಕಾರಿಗಳಿಗೆ ಆದೇಶಿಸಿದರು ಎಂದು ತಿಳಿದು ಬಂದಿದೆ.

ಭರತ್‌ ಜೊತೆ ಮಾತನಾಡಲೊಪ್ಪದ ಸಿಎಂ:

ಇನ್ನು, ಮುಖ್ಯಮಂತ್ರಿ ಅವರ ಭೇಟಿ ವೇಳೆ ಜಮೀರ್‌ ಅಹಮದ್‌ ಅವರು ನಾರಾ ಭರತ್‌ ರೆಡ್ಡಿ ಅವರನ್ನು ದೂರವಾಣಿ ಮೂಲಕ ಮಾತನಾಡಿಸಲು ಪ್ರಯತ್ನಿಸಿದರಾದರೂ, ಗರಂ ಆಗಿದ್ದ ಮುಖ್ಯಮಂತ್ರಿ ಅವರು ಮಾತನಾಡಲು ಒಪ್ಪಲಿಲ್ಲ. ಬದಲಿಗೆ ಕಂಪ್ಲಿ ಗಣೇಶ್‌, ನಾಗೇಂದ್ರ ಸೇರಿ ಪಕ್ಷದ ಇತರೆ ಸ್ಥಳೀಯ ನಾಯಕರೊಂದಿಗೆ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬರಲಿದ್ದು ಅವರೊಂದಿಗೆ ಸೇರಿ ಪರಿಸ್ಥಿತಿ ನಿಭಾಯಿಸಲು ಕ್ರಮ ವಹಿಸುವಂತೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಕೂಲಂಕುಷ ತನಿಖೆ ನಡೆಸಿ ವರದಿಗೆ ಸೂಚನೆ:

ಇನ್ನು, ಘಟನೆ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರುವ ಮುಖ್ಯಮಂತ್ರಿ ಅವರು, ಬಳ್ಳಾರಿಯ ಗುಂಪು ಘರ್ಷಣೆ ಹಾಗೂ ಓರ್ವ ಕಾರ್ಯಕರ್ತ ಗುಂಡೇಟಿಗೆ ಬಲಿಯಾಗಿರುವ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಪೊಲೀಸರಿಗೆ ಸೂಚಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಸ್ಥಳಕ್ಕೆ ತೆರಳಿ ಸ್ಥಳೀಯ ನಾಯಕರು, ಪೊಲೀಸರ ಸಹಕಾರದೊಂದಿಗೆ ಪರಿಸ್ಥಿತಿ ನಿಭಾಯಿಸಿ ವರದಿ ನೀಡಲು ಸೂಚಿಸಿದ್ದೇನೆ ಎಂದು ಹೇಳಿದರು.

ಬಳ್ಳಾರಿಯ ಗುಂಪು ಘರ್ಷಣೆ ಕುರಿತು ತನಿಖೆಗೆ ಈಗಾಗಲೇ ಸೂಚಿಸಲಾಗಿದೆ. ಘಟನೆಯಲ್ಲಿ ಬಳಸಲಾದ ಗನ್‌ ಯಾರಿಗೆ ಸೇರಿದ್ದು ಎಂಬುದೂ ಸೇರಿ ಕೂಲಂಕುಷವಾಗಿ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಿದ್ದೇನೆ. ಸತೀಶ್‌ ರೆಡ್ಡಿ ಅವರು ಭದ್ರತೆಗಾಗಿ ಗನ್‌ ಇಟ್ಟುಕೊಂಡಿದ್ದಾರೆ. ಜತೆಗೆ ಇತರರು ಗನ್‌ ಇಟ್ಟುಕೊಂಡಿದ್ದು. ಘರ್ಷಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದಾಗ ರಾಜಶೇಖರ ಎಂಬಾತನಿಗೆ ತಗುಲಿರಬಹುದು. ಈ ಬಗ್ಗೆ ತನಿಖೆ ನಂತರ ಸತ್ಯ ತಿಳಿಯಲಿದೆ ಎಂದರು.

ಜನಾರ್ದನ ರೆಡ್ಡಿ ಗುರಿಯಾಗಿಸಿ ದಾಳಿ; ಶ್ರೀರಾಮುಲು:

ಶಾಸಕ ಜನಾರ್ದನ ರೆಡ್ಡಿ ಮನೆಯ ಎದುರು ಗುರುವಾರ ರಾತ್ರಿ ನಡೆದ ಗಲಾಟೆ ಪ್ರಕರಣ ಪೂರ್ವಯೋಜಿತವಾಗಿದೆ. ರೆಡ್ಡಿಯನ್ನು ಗುರಿಯಾಗಿಸಿಕೊಂಡೇ ಕೃತ್ಯ ಎಸಗಲಾಗಿದೆ. ಸಂವಿಧಾನ ಕಾಪಾಡಬೇಕಿದ್ದ ಶಾಸಕ ಭರತ್‌ ರೆಡ್ಡಿಯೇ ದೌರ್ಜನ್ಯಕ್ಕೆ ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭರತ್‌ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರ ಮನೆ ಸುಟ್ಟು ಹಾಕುತ್ತೇನೆ ಎಂದು ಹೇಳುತ್ತಿರುವುದನ್ನು ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ಎಲ್ಲವನ್ನು ಗಮನಿಸಿದರೆ ಮುಂಚಿತವಾಗಿ ಪ್ಲ್ಯಾನ್‌ ಮಾಡಿ, ಪೆಟ್ರೋಲ್‌ ಬಾಂಬ್‌ ತೆಗೆದುಕೊಂಡು ಬಂದಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಆರೋಪಿಸಿದರು.

ಬ್ಯಾನರ್‌ ಕಟ್ಟುವುದಕ್ಕೆ ನಮ್ಮ ಅಭ್ಯಂತರವಿರಲಿಲ್ಲ. ಆದರೆ, ಮಾರ್ಗದ ಮಧ್ಯೆ ಕಟ್ಟುವುದು ಬೇಡ ಎಂದು ಹೇಳೀದ್ದೇವೆ. ಇದನ್ನೇ ನೆಪವಾಗಿರಿಸಿಕೊಂಡು ಉದ್ದೇಶಪೂರ್ವಕವಾಗಿ ಜನಾರ್ದನ ರೆಡ್ಡಿ ನಿವಾಸದ ಬಳಿ ಓಡಾಡುವ ಸ್ಥಳದಲ್ಲಿ ಬ್ಯಾನರ್‌ ಹಾಕಲಾಗಿದೆ. ಇದನ್ನು ಪ್ರಶ್ನಿಸಿದ ಜನಾರ್ದನ ರೆಡ್ಡಿ ಮೇಲೆ ಶಾಸಕ ಭರತ್‌ ರೆಡ್ಡಿ ಬೆಂಬಲಿಗ ಸತೀಶ್‌ ರೆಡ್ಡಿ ಹಾಗೂ ಬೆಂಬಲಿಗರು ಏಕಾಏಕಿ ದಾಳಿ ನಡೆಸಿದ್ದಾರೆ. ಅಷ್ಟರಲ್ಲಿ ಸ್ಥಳದಲ್ಲಿದ್ದ ಪೊಲೀಸರು ಗುಂಪು ಚದುರಿಸಿದ್ದಾರೆ. ಈ ವೇಳೆ ಸತೀಶ್‌ ರೆಡ್ಡಿ ಕಡೆಯ ಬಾಡಿ ಗಾರ್ಡ್‌ಗಳು ಸಿನಿಮಾ ಶೈಲಿಯಲ್ಲಿ ಫೈರಿಂಗ್‌ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಫೈರಿಂಗ್‌ ಮಾಡಲು ಅವಕಾಶ ಕೊಟ್ಟವರು ಯಾರು? ಫೈರಿಂಗ್‌ ಬಳಿಕ ಪತ್ತೆಯಾದ ಪಾಯಿಂಟ್‌ 76ಎಂಎಂ ಬುಲೆಟ್‌ ಯಾರದ್ದು? ಎಂಬುದು ಬಹಿರಂಗವಾದ ಬಳಿಕ ಯುವಕನ ಸಾವಿಗೆ ಕಾರಣ ಯಾರು ಎಂಬುದು ಗೊತ್ತಾಗಲಿದೆಯಲ್ಲವೇ?. ಘಟನೆ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿಗಳಿಂದ ಅಥವಾ ಸಿಬಿಐನಿಂದ ತನಿಖೆ ನಡೆಸಲಿ ಎಂದು ಅವರು ಒತ್ತಾಯಿಸಿದರು.ಆಸ್ಪತ್ರೆಯಲ್ಲಿ ದಾಖಲಾಗುವಷ್ಟು ಸತೀಶ್‌ ರೆಡ್ಡಿಗೆ ಏನೂ ಆಗಿಲ್ಲ. ಅದು ಬೋಗಸ್‌ ಬ್ಯಾಂಡೇಜ್‌ ಎಂದು ಟೀಕಿಸಿದರು.ಬಳ್ಳಾರಿಯಲ್ಲಿ ಶಾಸಕನಿಂದ ಮಟ್ಕಾ ದಂಧೆ; ಜನಾರ್ದನ ರೆಡ್ಡಿ:

ಮಾಜಿ ಸಚಿವ ಜನಾರ್ದನ ರೆಡ್ಡಿ ಮಾತನಾಡಿ, ಜೀವ ರಕ್ಷಣೆ, ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ದೂರು ದಾಖಲಿಸಲು ನಿರ್ಧರಿಸಲಾಗಿದೆ. ಬಳ್ಳಾರಿಯಲ್ಲಿ ಶಾಸಕರೇ ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಲಂಚ, ಮರಳು ಅಕ್ರಮ, ವರ್ಗಾವಣೆ ದಂಧೆ ಹೆಚ್ಚಾಗಿದೆ. ಕಾಂಗ್ರೆಸ್‌, ಜಿಲ್ಲೆಯಲ್ಲಿ ಜನರ ಪ್ರೀತಿ ಕಳೆದುಕೊಳ್ಳುತ್ತಿದೆ. ಹೀಗಾಗಿ, ಬ್ಯಾನರ್‌ ವಿಚಾರ ಇಟ್ಟುಕೊಂಡು ಇಷ್ಟು ದೊಡ್ಡಮಟ್ಟದ ಗಲಾಟೆ ನಡೆಸಿದ್ದಾರೆ ಎಂದು ದೂರಿದರು.ಜನಾರ್ದನ ರೆಡ್ಡಿ, ರಾಮುಲು ವಿರುದ್ಧ ಪೊಲೀಸರಿಂದ ಒಟ್ಟು 4 ಎಫ್‌ಐಆರ್‌:ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಅಳವಡಿಕೆ ಹಿನ್ನೆಲೆಯಲ್ಲಿ ನಡೆದ ಗುಂಪು ಘರ್ಷಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಸಾವಿಗೆ ಸಂಬಂಧಿಸಿದಂತೆ ನಗರದ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ.ಪ್ರತ್ಯೇಕ ದೂರು ಆಧರಿಸಿ ಮೂರು (01/2026, 02/2026, 03/2026) ಎಫ್‌ಐಆರ್‌ ಮತ್ತು ಬಳ್ಳಾರಿ ನಗರ ಡಿವೈಎಸ್‌ಪಿ ಚಂದ್ರಕಾಂತ ನಂದಾ ರೆಡ್ಡಿ ಅವರ ದೂರಿನ ಆಧಾರದಲ್ಲಿ ಒಂದು ಸ್ವಯಂ ಪ್ರೇರಿತ ಪ್ರಕರಣ (04/2026)ವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರನ ಕೊಲೆ, ಜಾತಿ ನಿಂದನೆ, ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ನೀಡಲಾದ ದೂರು ಆಧರಿಸಿ ಪ್ರಕರಣ ಎಫ್‌ಐಆರ್‌ ದಾಖಲು ಮಾಡಲಾಗಿದೆ.ಎಲ್ಲ ಪ್ರಕರಣಗಳಲ್ಲಿಯೂ ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಕ್ರಮವಾಗಿ ಎ1, ಎ2, ಎ3 ಆರೋಪಿಗಳನ್ನಾಗಿ ಮಾಡಲಾಗಿದೆ. ಪೊಲೀಸರು ದಾಖಲು ಮಾಡಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಸಹಚರರ ಜೊತೆಗೆ, ಭರತ್‌ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ.ನನ್ನಿಂದ ಶಾಂತಿಭಂಗವಾಗಿದ್ದರೆ ಕ್ಷಮೆಯಾಚಿಸುವೆ; ಭರತ್ ರೆಡ್ಡಿ:ನನ್ನಿಂದ ಸಾರ್ವಜನಿಕರ ಶಾಂತಿಗೆ ಭಂಗವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ಯಾರಿಂದಲೇ ನಡೆದಿರಲಿ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ. ಆದರೆ, ನಿನ್ನೆ ತಡರಾತ್ರಿವರೆಗೆ ನಡೆದ ಬೆಳವಣಿಗೆಯಲ್ಲಿ ನನ್ನಿಂದ ಜನರಿಗೆ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಇದೊಂದು ಆಕಸ್ಮಿಕ ಘಟನೆಯಾಗಿದೆ. ಶಾಸಕನಾಗಿ ನಾನು ಜನರ ಕ್ಷಮೆ ಕೇಳುತ್ತೇನೆ ಎಂದರು.

ಶಾಸಕ ನಾಗೇಂದ್ರ ಮಾತನಾಡಿ, ಬಳ್ಳಾರಿಯಲ್ಲಿ ಶನಿವಾರ ನಡೆಯಬೇಕಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಭರತ್ ರೆಡ್ಡಿ ಅವರ ಮನವೊಲಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಇದಕ್ಕಾಗಿ ಬಳ್ಳಾರಿಗೆ ನನ್ನನ್ನು ಕಳಿಸಿಕೊಟ್ಟಿದ್ದಾರೆ. ಹೀಗಾಗಿ, ಸಿಎಂ ಹಾಗೂ ಡಿಸಿಎಂ ಅವರ ಸೂಚನೆಯಂತೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ಸಂಸದ ತುಕಾರಾಂ:

ಬಳ್ಳಾರಿಯಲ್ಲಿ ನಡೆದ ಬ್ಯಾನರ್‌ ಗಲಾಟೆ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರ ವಿರುದ್ಧ ಕಾನೂನುಬದ್ಧವಾಗಿ ಸೂಕ್ತ ಹಾಗೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಂಸದ ಇ.ತುಕಾರಾಂ ಸ್ಪಷ್ಟಪಡಿಸಿದ್ದಾರೆ.ಕಂಪ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಾಟೆ ಅನಿರೀಕ್ಷಿತವಾಗಿ ನಡೆದ ದುರ್ಘಟನೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯ ಕಾರ್ಯದರ್ಶಿ ಈಗಾಗಲೇ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಐಜಿಪಿ ವರ್ತಿಕಾ ಕಾಟೀಯಾರ್, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯನ್ನು ಭಯಮುಕ್ತವಾಗಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಬಳ್ಳಾರಿ ಬಂಗಾರದ ತಟ್ಟೆಯಂತಹ ಮಹತ್ವದ ಪ್ರದೇಶವಾಗಿದ್ದು, ಇಲ್ಲಿ ಶಾಂತಿ, ಸೌಹಾರ್ದ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಮುಂದೂಡಿಕೆ:ಬ್ಯಾನರ್ ಗಲಾಟೆ ಹಿನ್ನೆಲೆಯಲ್ಲಿ ನಗರದ ಎಸ್ಪಿ ವೃತ್ತದಲ್ಲಿ ಶುಕ್ರವಾರ ನಡೆಯಬೇಕಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಬಳ್ಳಾರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವುದರಿಂದ ಸದ್ಯಕ್ಕೆ ಪುತ್ಥಳಿ ಅನಾವರಣಗೊಳಿಸುವುದು ಸರಿಯಲ್ಲ. ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸುವ ಸಾಧ್ಯತೆಯಿದೆ. ಮತ್ತೆ ಗಲಾಟೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬ ಮಾಹಿತಿ ಮುಖ್ಯಮಂತ್ರಿ ಕಚೇರಿ ತಲುಪಿದೆ. ಹೀಗಾಗಿ, ಸದ್ಯಕ್ಕೆ ಕಾರ್ಯಕ್ರಮ ಮುಂದೂಡುವಂತೆ ಸೂಚಿಸಲಾಗಿದೆ. ಹೀಗಾಗಿ, ಕಾರ್ಯಕ್ರಮಕ್ಕಾಗಿ ಇಲ್ಲಿನ ಎಸ್ಪಿ ವೃತ್ತದಲ್ಲಿ ಮಾಡಿಕೊಂಡಿದ್ದ ವೇದಿಕೆಯನ್ನು ತೆರವುಗೊಳಿಸಲಾಗಿದೆ.

ಪುತ್ಥಳಿ ಅನಾವರಣಕ್ಕಾಗಿ ಬಳ್ಳಾರಿಯಲ್ಲಿ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕ ಹಿರಿಯ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ನಗರದ ಎಲ್ಲ ವೃತ್ತಗಳು, ಪ್ರಮುಖ ರಸ್ತೆಗಳಲ್ಲಿ ಬ್ಯಾನರ್, ಫ್ಲೆಕ್ಸ್‌ಗಳನ್ನು ಅಳವಡಿಸಿ ಸಂಭ್ರಮಕ್ಕೆ ಅಣಿಮಾಡಿಕೊಳ್ಳಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗಾಗಿ ಸಮುದಾಯದ ಮುಖಂಡರು ಹಾಗೂ ಪಕ್ಷದ ಹಿರಿಯರು ಅಗತ್ಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಗಲಾಟೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.ಗಲಾಟೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ನಾಗೇಂದ್ರ ಸಹ ಕಾರ್ಯಕ್ರಮ ಮುಂದೂಡಿಕೆಯಾಗಿದ್ದನ್ನು ಸ್ಪಷ್ಟಪಡಿಸಿದ್ದಾರೆ.ಬಳ್ಳಾರಿ ಗುಂಡೇಟಿಗೆ ಎಸ್ಪಿ ಬಲಿ:

ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿರುಗುಪ್ಪ ರಸ್ತೆಯಲ್ಲಿನ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಎದುರು ಗುರುವಾರ ರಾತ್ರಿ ನಡೆದ ಗುಂಪು ಘರ್ಷಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅವರನ್ನು ಅಮಾನತುಗೊಳಿಸಲಾಗಿದೆ.

ಗುರುವಾರ ರಾತ್ರಿ ನಡೆದ ಗಲಭೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಹಾಗೂ ಮೇಲಿನ ಅಧಿಕಾರಿಗಳಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲವಾಗಿದ್ದರಿಂದ ಈ ಕ್ರಮ ವಹಿಸಲಾಗಿದೆ ಎಂದು ಆದೇಶದ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಕೆ.ವಿ.ಅಶೋಕ ಈ ಆದೇಶ ಹೊರಡಿಸಿದ್ದಾರೆ. ಅಮಾನತು ಆದೇಶ ತಕ್ಷಣವೇ ಜಾರಿಗೆ ಬಂದಿದ್ದು, ಅಮಾನತ್ತಿನ ಅವಧಿಯಲ್ಲಿ ಅಧಿಕಾರಿ ಸರ್ಕಾರದ ಅನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗುವಂತಿಲ್ಲ ಎಂದು ತಿಳಿಸಲಾಗಿದೆ.

ಬಳ್ಳಾರಿ ಜಿಲ್ಲಾ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಒಂದೇ ದಿನದಲ್ಲಿ ಪವನ್ ಅಮಾನತು ಆಗಿರುವುದು ವಿಶೇಷ. ಜನವರಿ 1ರಂದು ಮಧ್ಯಾಹ್ನ 12 ಗಂಟೆಗೆ ಅವರು ಅಧಿಕಾರ ವಹಿಸಿಕೊಂಡಿದ್ದರು. ದುರ್ಗಮ್ಮ ಗುಡಿಗೆ ಹೋಗಿ ಪೂಜೆ ಮಾಡಿ ಅಧಿಕಾರ ಸ್ವೀಕಾರ ಮಾಡಿದ್ದರು. ಶುಕ್ರವಾರ ಅವರ ವಿರುದ್ಧದ ಅಮಾನತು ಆದೇಶ ಹೊರಬಿದ್ದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ