ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯಕ್ಕೆ ಹೆಚ್ಚಿನ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು ಮತ್ತು ಜಪಾನ್ನ ನಗರಾಭಿವೃದ್ಧಿ ಮಾದರಿಗಳನ್ನು ಅಧ್ಯಯನ ಮಾಡಲು ಶನಿವಾರ ಮಧ್ಯರಾತ್ರಿ ಉನ್ನತ ಮಟ್ಟದ ನಿಯೋಗದೊಂದಿಗೆ ಜಪಾನ್ ಪ್ರವಾಸಕ್ಕೆ ತೆರಳಿದರು.
ಕನ್ನಡಪ್ರಭ ವಾರ್ತೆ, ಬೆಂಗಳೂರು
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯಕ್ಕೆ ಹೆಚ್ಚಿನ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು ಮತ್ತು ಜಪಾನ್ನ ನಗರಾಭಿವೃದ್ಧಿ ಮಾದರಿಗಳನ್ನು ಅಧ್ಯಯನ ಮಾಡಲು ಶನಿವಾರ ಮಧ್ಯರಾತ್ರಿ ಉನ್ನತ ಮಟ್ಟದ ನಿಯೋಗದೊಂದಿಗೆ ಜಪಾನ್ ಪ್ರವಾಸಕ್ಕೆ ತೆರಳಿದರು.
ಭಾನುವಾರ ಸಂಜೆ ಜಪಾನ್ ತಲುಪಿರುವ ಮುಖ್ಯಮಂತ್ರಿ ಅವರ ನೇತೃತ್ವದ ನಿಯೋಗವನ್ನು ಜಪಾನ್ನಲ್ಲಿರುವ ಭಾರತದ ರಾಯಭಾರಿ ನಗ್ಮಾ ಮೊಹಮ್ಮದ್ ಮಲ್ಲಿಕ್ ಮತ್ತು ಟೋಕಿಯೋ ಕನ್ನಡ ಸಂಘದ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು. ನಿಯೋಗ ನವೆಂಬರ್ 23ರಿಂದ 25ರವರೆಗೆ ಜಪಾನ್ ಪ್ರವಾಸ ಕೈಗೊಂಡು ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲು ರೋಡ್ ಶೋ, ವಿವಿಧ ಮುಂಚೂಣಿ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಇನ್ವೆಸ್ಟ್ ಕರ್ನಾಟಕಕ್ಕೆ ಆಹ್ವಾನ ನೀಡಲಿದೆ.
ನಿಯೋಗದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಜಿಬಿಎ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಎಂಟು ಮಂದಿ ಉನ್ನತ ಅಧಿಕಾರಿಗಳು ತೆರಳಿದ್ದಾರೆ.
ನವೆಂಬರ್ 23ರಂದು ನಗೋಯಾ, ನವೆಂಬರ್ 24ರಂದು ಒಸಾಕಾ ಹಾಗೂ ನವೆಂಬರ್ 25ರಂದು ಟೋಕಿಯೋದಲ್ಲಿ ಮುಖ್ಯಮಂತ್ರಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಈ ಪ್ರವಾಸವು ಪ್ರಮುಖವಾಗಿ ರಾಜ್ಯದಲ್ಲಿ ಜಪಾನ್ ಹೂಡಿಕೆಯನ್ನು ಮತ್ತಷ್ಟು ಬಲಪಡಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಹಯೋಗದಲ್ಲಿ ಉದ್ಯಮಿಗಳೊಂದಿಗೆ ಸಭೆ ನಡೆಸಲಿದೆ. ಜಾಗತಿಕ ಮಟ್ಟದಲ್ಲಿ ಮಾದರಿ ಆಗಿರುವ ಜಪಾನ್ನ ನಗರ ನಿರ್ಮಾಣ ಪದ್ಧತಿಗಳನ್ನು ಅಧ್ಯಯನ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ತಂಡದೊಂದಿಗೆ ನಗರಾಭಿವೃದ್ಧಿ ಯೋಜನೆಗಳಿಗೆ ಭೇಟಿ ನೀಡಲಿದೆ.
ಅಧ್ಯಯನ:
ಜಪಾನ್ ಪ್ರವಾಸಕ್ಕೆ ತೆರಳುವ ಮುನ್ನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅವರು, ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ತಾವು ಸಚಿವ ಎಂ.ಬಿ.ಪಾಟೀಲ್ ಹಾಗೂ ಇತರೆ ಎಂಟು ಮಂದಿ ಅಧಿಕಾರಿಗಳು ಜಪಾನ್ ಪ್ರವಾಸಕ್ಕೆ ತೆರಳುತ್ತಿದ್ದೇವೆ. ಅಲ್ಲಿನ ನಗರಾಭಿವೃದ್ಧಿಯ ಬಗ್ಗೆ ತಿಳಿದುಕೊಳ್ಳಬೇಕಿದೆ. ಹೊಸ, ಆಧುನಿತ ತಂತ್ರಜ್ಞಾನ ಬಳಸಿ ಫ್ಲೈಓವರ್ಗಳನ್ನು ಮಾಡಿದ್ದಾರೆ, ಆ ತಂತ್ರಜ್ಞಾನವನ್ನು ನಮ್ಮ ರಾಜ್ಯದಲ್ಲಿ ಏನಾದರೂ ಅಳವಡಿಸಿಕೊಳ್ಳಬಹುದೇ ಎಂಬುದನ್ನು ಅಧ್ಯಯನ ಮಾಡಲಾಗುವುದು. ಜತೆಗೆ ಟೊಯೋಟೋ ಸಂಸ್ಥೆಯವರೊಂದಿಗೆ ಸಭೆ ನಡೆಸಿ ಅವರ ಮತ್ತೊಂದು ಘಟಕವನ್ನು ರಾಜ್ಯದಲ್ಲಿ ವಿಸ್ತರಿಸುವ ಬಗ್ಗೆ ಮಾತನಾಡುತ್ತೇವೆ. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆಗೆ ವಿವಿಧ ಸಂಸ್ಥೆಗಳ ಪ್ರಮುಖರೊಂದಿಗೆ ಸಭೆ ನಡೆಸಿ ನ.25ರಂದು ವಾಪಸ್ ಬರುತ್ತೇನೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.