ಮಂಗನಂತಾಡುವ ಜಮೀರ್ ತಾಳಕ್ಕೆ ಕುಣಿಯುವ ಸಿಎಂ

KannadaprabhaNewsNetwork |  
Published : Nov 17, 2024, 01:18 AM IST
16ಕೆಡಿವಿಜಿ1-ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ: ಹೆಂಡ ಕುಡಿದ ಮಂಗನಂತೆ ಆಡುತ್ತಿರುವ ಜಮೀರ್ ಅಹಮ್ಮದ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಉಪ ಚುನಾವಣೆ ಮುಗಿದ ಬೆನ್ನಲ್ಲೇ ಜಮೀರ್ ಸೂಚನೆ ಮೇರೆಗೆ ಚಿಂತಾಮಣಿ ತಾ. ತಿಮ್ಮಸಂದ್ರ ಗ್ರಾಮದಲ್ಲಿ ಉಳುಮೆ ಮಾಡುತ್ತಿದ್ದ ರೈತರ ಟ್ರ್ಯಾಕ್ಟರ್ ಜಪ್ತು ಮಾಡಿದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ದಾವಣಗೆರೆ: ಹೆಂಡ ಕುಡಿದ ಮಂಗನಂತೆ ಆಡುತ್ತಿರುವ ಜಮೀರ್ ಅಹಮ್ಮದ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಉಪ ಚುನಾವಣೆ ಮುಗಿದ ಬೆನ್ನಲ್ಲೇ ಜಮೀರ್ ಸೂಚನೆ ಮೇರೆಗೆ ಚಿಂತಾಮಣಿ ತಾ. ತಿಮ್ಮಸಂದ್ರ ಗ್ರಾಮದಲ್ಲಿ ಉಳುಮೆ ಮಾಡುತ್ತಿದ್ದ ರೈತರ ಟ್ರ್ಯಾಕ್ಟರ್ ಜಪ್ತು ಮಾಡಿದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಹಿನ್ನೆಲೆಯಲ್ಲಿ ವಕ್ಫ್ ನೋಟಿಸ್ ಹಿಂಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ನಾಟಕ ಮಾಡಿದ್ದರು. ನಾವು ನೋಟಿಸ್ ಹಿಂಪಡೆದರಷ್ಟೇ ಸಾಲದು, ಕಾಲಂ 11ರಲ್ಲಿ ವಕ್ಫ್ ಆಸ್ತಿ ಅಂತಾ ತೆಗೆದು ಹಾಕಲು ಒತ್ತಾಯಿಸಿದ್ದೆವು. ಇದೀಗ ಜಮೀರ್ ಸೂಚನೆ ಮೇರೆಗೆ ಚಿಂತಾಮಣಿ ಪೊಲೀಸರು ಉಳುಮೆ ಮಾಡುತ್ತಿದ್ದ ರೈತರ ಟ್ರ್ಯಾಕ್ಟರ್ ಜಪ್ತು ಮಾಡಿ, ಕೇಸ್ ಮಾಡಿದ್ದಾರೆ. ಅಂತಹ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಉಪಚುನಾವಣೆ ಮೇಲೆ ಹೊಡೆತ ಬೀಳುತ್ತದೆಂದು ವಕ್ಫ್ ನೋಟಿಸ್ ಹಿಂಪಡೆಯುವುದಾಗಿ ಸಿಎಂ ನಾಟಕ ಮಾಡಿದ್ದು, ಇದೀಗ ಮತ್ತೆ ವಕ್ಫ್ ವಿವಾದ ಶುರುವಾಗಿವೆ. ವಕ್ಫ್‌ಗೆ ತಮ್ಮ ಆಸ್ತಿ ಬಿಡುವುದಿಲ್ಲವೆಂದ ರೈತರ ಮೇಲೆ ಚಿಂತಾಮಣಿ ಪೊಲೀಸರು ಲಾಠಿ ಪ್ರಹಾರ ಮಾಡಿ, ಕೇಸ್ ದಾಖಲಿಸಿ, ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ. ಮೊನ್ನೆ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ಸಿನ ಸಚಿವರೆ ಜಮೀರ್ ಅಹಮ್ಮದ್ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರೂ, ಸಿಎಂ ಜಮೀರ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಟೀಕಿಸಿದರು.

ವಕ್ಫ್ ನೋಟಿಸ್‌ ಹಿಂಪಡೆಯುವುದಷ್ಟೇ ಅಲ್ಲ, ಕಾಲಂ ನಂ.11ರಲ್ಲಿ ವಕ್ಫ್ ಆಸ್ತಿಯೆಂಬುದನ್ನು ತೆಗೆದು ಹಾಕಬೇಕು. ಗೆಜೆಟ್ ನೋಟಿಫಿಕೇಷನ್ ಸಹ ರದ್ದುಪಡಿಸಬೇಕು. ಸಿಎಂ ಸಿದ್ದರಾಮಯ್ಯ ಮೊದಲು ಜಮೀರ್ ಅಹಮ್ಮದ್‌ಗೆ ಹದ್ದುಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ಜಮೀರ್‌ಗೆ ಹೇಗೆ ಹದ್ದುಬಸ್ತಿನಲ್ಲಿಡಬೇಕೆಂಬುದು ನಮಗೆ ಗೊತ್ತಿದೆ. ಜಮೀರ್‌ಗೆ ತಕ್ಕ ಪಾಠವನ್ನೇ ನಾವು ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು, ಉಪಚುನಾವಣೆ ಫಲಿತಾಂಶ ಬರುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳ್ಳುವುದು ಗ್ಯಾರಂಟಿ ಎಂದರು.

ಸಿದ್ದರಾಮಯ್ಯಗೆ ಕೆಳಗಿಳಿಸಲು ಕಾಂಗ್ರೆಸ್‌ ಪಕ್ಷದಲ್ಲೇ ಹೊಂಚು ಹಾಕುತ್ತಿದ್ದಾರೆ. ಬಿಜೆಪಿ ಯಾರೂ ಈ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿಲ್ಲ. ಸಿದ್ದರಾಮಯ್ಯಗೆ ಸಿಎಂ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ಸಿನವರೆ ಒಬ್ಬೊಬ್ಬರಿಗೆ 50 ಕೋಟಿ ಕೊಡಲು ಹಣ ಸಿದ್ಧವಾಗಿ, ಹೊಂಚು ಹಾಕುತ್ತಿದ್ದಾರೆ. ಅದನ್ನೇ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಅಸಹಾಯಕತೆ ತೋಡಿಕೊಂಡಿದ್ದಾರೆ. 50 ಕೋಟಿ ರು. ಕೊಟ್ಟು ಸರ್ಕಾರ ಕೆಡವಲು ಪ್ರಯತ್ನಿಸುತ್ತಿದ್ದಾರೆಂದು ಸಿದ್ದರಾಮಯ್ಯ ಹೇಳಿದ್ದು ಬಿಜೆಪಿ ಬಗ್ಗೆ ಅಲ್ಲ. ಸ್ವಪಕ್ಷದವರ ಬಗ್ಗೆ ತಮ್ಮ ಹೈಕಮಾಂಡ್‌ಗೆ ಎಚ್ಚರಿಸಿದ್ದಾರೆ ಎಂದರು.

ರೈತರು, ಮಠ ಮಂದಿರಗಳು, ಸಾರ್ವಜನಿಕರ ಆಸ್ತಿಯನ್ನು ವಕ್ಫ್ ಕಬಳಿಸಲು ಹೊರಟಿದ್ದನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ. ಉಭಯ ಸದನದಲ್ಲಿ ವಿಪಕ್ಷ ನಾಯಕರಾದ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ವಿಜಯೇಂದ್ರಗೆ ಪಕ್ಷದ ನಾಯಕತ್ವ ಸಿಕ್ಕ ಬಳಿಕ ಪಕ್ಷಕ್ಕೆ ಬೂಸ್ಟ್ ಸಿಕ್ಕಂತಾಗಿದೆ. ರಾಜ್ಯವ್ಯಾಪಿ ಸಂಘಟನೆ ಬಲಗೊಳ್ಳುತ್ತಿದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಧಿಕ್ಕರಿಸಿ ಬಸವನಗೌಡ ಪಾಟೀಲ್ ಯತ್ನಾಳ್ ಇತರರು ಹೋಗುತ್ತಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಪ್ಲಸ್ ಆಗುತ್ತಿದೆ. ವಿಜಯೇಂದ್ರ 3 ತಂಡ ಮಾಡಿ, ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಯತ್ನಾಳ್ ಸಹ ಸೇರಿಕೊಂಡು ಪ್ರತಿಭಟಿಸಬೇಕಿತ್ತು. ಆದರೆ, ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿರುವುದು ಸರಿಯಲ್ಲ. ಇದೇ ರೀತಿ ಮುಂದುವರಿದರೆ ನಾವು ಸಹ ತಾಯಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದು, ಹೋರಾಟ ಮಾಡಬೇಕಾಗುತ್ತದೆ. ಪಕ್ಷದ ರಾಷ್ಟ್ರೀಯ ನಾಯಕರು ಮಧ್ಯ ಪ್ರವೇಶಿಸಿ, ಯತ್ನಾಳ್ ಇತರರಿಗೆ ತಿಳಿ ಹೇಳಲಿ ಎಂದರು.

ದಾವಣಗೆರೆ ಜಿಲ್ಲಾ ಬಿಜೆಪಿ ಗುಂಪುಗಾರಿಕೆ ಕುರಿತ ಪ್ರಶ್ನೆಗೆ ನೋ ಕಾಮೆಂಟ್ಸ್ ಎಂದಷ್ಟೇ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪ್ರವೀಣ ರಾವ್‌ ಜಾಧವ್‌, ರಾಜು ವೀರಣ್ಣ, ಮಂಜು, ಜಯರುದ್ರೇಶ, ಮಂಜುನಾಥ, ಧರ್ಮರಾಜ, ಸುರೇಶ, ಬಾಲರಾಜ, ಸುರೇಶ, ಗಿರೀಶಾಚಾರ್‌ ಮತ್ತಿತರರಿದ್ದರು.

ರಾಜ್ಯದಲ್ಲಿ ತಾಲಿಬಾನ್ ಆಳ್ವಿಕೆ ಇದೆಯೇಃ ರೇಣುಕಾಚಾರ್ಯದಾವಣಗೆರೆ: ಕರ್ನಾಟಕದಲ್ಲಿ ಕಾನೂನುಬದ್ಧವಾದ ಸರ್ಕಾರ ಇದೆಯೋ ಅಥವಾ ತಾಲಿಬಾನ್ ಆಳ್ವಿಕೆಯೋ ಎಂಬುದೇ ಅರ್ಥವಾಗುತ್ತಿಲ್ಲ. ವಕ್ಫ್ ನೋಟಸ್ ಹಿಂಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಆದೇಶಕ್ಕಾಗಲೀ, ಮಾತಿಗಾಗಲೀ ಕವಡೆ ಕಾಸಿನ ಕಿಮ್ಮತ್ತು ಇಲ್ಲವೇ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ನೋಟಿಸ್ ಹಿಂಪಡೆಯುವುದಾಗಿ ಸಿದ್ದರಾಮಯ್ಯ ಹೇಳಿ, ಆದೇಶ ಹೊರಡಿಸಿದ ಮೇಲೂ ಚಿಂತಾಮಣಿಯಲ್ಲಿ ರೈತರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಅದಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳೂ ಸಾಥ್ ನೀಡಿದ್ದಾರೆ ಎಂದು ದೂರಿದರು.ಇನ್ನು ಮುಂದೆ ರೈತರಿಗೆ ಯಾವುದೇ ನೋಟಿಸ್ ಕೊಡುವುದಿಲ್ಲವೆಂದ ಸಿದ್ದರಾಮಯ್ಯ ಹಾಗೂ ಸಂಪುಟದ ಮೂವರು ಸಚಿವರು ಹೇಳಿದ ಮಾತಿಗೆ ಇದೇ ಕಾಂಗ್ರೆಸ್ ಸರ್ಕಾರದಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಹ ಇಲ್ಲವೇ ? ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ವಕ್ಫ್ ಆಸ್ತಿಯೆಂದು ನಮೂದಾದ ಜಮೀನಿನಲ್ಲಿ ಉಳುಮೆ ಮಾಡಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಅತ್ಯಂತ ಖಂಡನೀಯ ಎಂದರು.

ಓಲೈಕೆ ರಾಜಕಾರಣಕ್ಕೆ ರೈತರನ್ನು ಬಲಿ ಕೊಡಲು ಹೊರಟ ಕಾಂಗ್ರೆಸ್ ಸರ್ಕಾರಕ್ಕೆ ನನ್ನ ಧಿಕ್ಕಾರವಿದೆ. ಸಿದ್ದರಾಮಯ್ಯ ರೈತರ ಜಮೀನಿನ ಮೇಲೆ ಕಬ್ಜ ಮಾಡುವುದೇ ಅಲ್ಲದೆ, ಅದೇ ರೈತ ರ ಮೇಲೆ ಲಾಠಿ ಚಾರ್ಜ್ ಮಾಡಿಸಿ, ಬಡ ರೈತರ ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ. ಅದೇ ನೊಂದ ರೈತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೀರಲ್ಲ, ನಿಮಗೆ ನಾಡಿನ ರೈತರಿಗಿಂತ ಓಲೈಕೆ ರಾಜಕಾರಣವೇ ಹೆಚ್ಚಾಯಿತೆ ಎಂದು ಪ್ರಶ್ನಿಸಿದರು. ಇನ್ನು ಮುಂದೆ ವಕ್ಫ್ ಆಸ್ತಿಯೆಂದು ಯಾರಾದರೂ ರೈತರ ಜಮೀನು ಇಲ್ಲವೇ, ರೈತರಿಗೆ ಸೇರಿದ ಟ್ರ್ಯಾಕ್ಟರ್ ಮತ್ತಿತರ ಉಪಕರಣ ವಶಪಡಿಸಿಕೊಳ್ಳಲು ಮುಂದಾದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಚಿವ ಜಮೀರ್ ಅಹಮ್ಮದ್ ನಿರ್ದೇಶನದಂತೆ ವಕ್ಫ್‌ ಆಸ್ತಿ ಅಂತಾ ರೈತರು, ಮಠ ಮಾನ್ಯಗಳ ಆಸ್ತಿಗಳ ಮೇಲೆ ಕಬ್ಜ ಮಾಡಲು ಸರ್ಕಾರ ಹೊರಟಿದೆ. ಹದ್ದು ಮೀರಿ ವರ್ತಿಸುತ್ತಿರುವ ಜಮೀರ್‌ಗೆ ಕಡಿವಾಣ ಹಾಕದಿದ್ದರೆ, ಇಡೀ ಹಿಂದು ಸಮಾಜ ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಗಿ ಬೀಳುವುದಂತೂ ನಿಶ್ಚಿತ.- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ