ಕನ್ನಡಪ್ರಭ ವಾರ್ತೆ ಸಾಗರ
ಪಟ್ಟಣದ ನಾಲ್ಕು ದಿಕ್ಕಿನಲ್ಲೂ ಆಶ್ರಯ ಲೇಔಟ್ ಮಾಡಿ ಬಡವರಿಗೆ ನಿವೇಶನ ನೀಡುವ ಉದ್ದೇಶವಿದ್ದು, ಇದಕ್ಕಾಗಿ ಬಳಸಗೋಡು ಬಳಿ 20 ಎಕರೆ, ಯಲಗಳಲೆ ಬಳಿ 10 ಎಕರೆ ಸರ್ಕಾರಿ ಭೂಮಿ ಗುರುತಿಸಲಾಗಿದೆ ಎಂದು ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.ನಗರಸಭೆಯಲ್ಲಿ ಶನಿವಾರ ಸಾಗರ ಯೋಜನಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೆ ಆಶ್ರಯ ನಿವೇಶನ ಕೋರಿ ನಾಲ್ಕು ಸಾವಿರ ಅರ್ಜಿಗಳು ಬಂದಿವೆ. ಎಲ್ಲರಿಗೂ ನಿವೇಶನ ಕೊಡಲು ಸಾಧ್ಯವಿಲ್ಲ. ಕನಿಷ್ಟ ಎರಡರಿಂದ ಮೂರು ಸಾವಿರ ಜನರಿಗಾದರೂ ನಿವೇಶನ ಕೊಡಬೇಕು ಎನ್ನುವುದು ನಮ್ಮ ಉದ್ದೇಶ ಎಂದರು. ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ಲೇಔಟ್ಗಳನ್ನು ಬೇಕಾಬಿಟ್ಟಿಯಾಗಿ ನಿರ್ಮಿಸಿದರೆ ಪ್ರಾಧಿಕಾರದಿಂದ ಅನುಮತಿ ನೀಡುವುದಿಲ್ಲ. ಲೇಔಟ್ಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಇರುವುದು ಕಡ್ಡಾಯ. ಪ್ರಾಧಿಕಾರದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಲ್ಲವೂ ಕಾನೂನಾತ್ಮಕವಾಗಿ ಇದ್ದರೆ ಮಾತ್ರ ಪರವಾನಿಗೆ ನೀಡಲು ಶಿಫಾರಸ್ಸು ಮಾಡುತ್ತಾರೆ. ಹಿಂದೆ ವಿನೋಬಾ ನಗರದಲ್ಲಿ ಖಾಸಗಿ ಲೇಔಟ್ ಮಳೆಗಾಲದಲ್ಲಿ ಮುಳುಗಿ ಹೋಗಿತ್ತು. ಈ ಪರಿಸ್ಥಿತಿ ಬೇರೆ ಕಡೆ ಬರಬಾರದು ಎನ್ನುವ ಕಾರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ಕೆಲವು ಕಡೆಗಳಲ್ಲಿ ಕೆರೆ ಜಾಗ, ಪಾರ್ಕ್ಗೆ ಬಿಟ್ಟಿರುವ ಜಾಗವನ್ನು ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆ. ಅಂಥದ್ದನ್ನು ತೆರವು ಮಾಡಲು ಸೂಚನೆ ನೀಡಲಾಗಿದೆ. ಸದ್ಯದಲ್ಲಿಯೆ ಆಶ್ರಯ ಸಮಿತಿ ಸದಸ್ಯರು, ತಹಸೀಲ್ದಾರ್, ಸಾಗರ ಯೋಜನಾ ಪ್ರಾಧಿಕಾರದ ಸದಸ್ಯರನ್ನು ಒಳಗೊಂಡ ಸಭೆ ಕರೆದು ಆಶ್ರಯ ನಿವೇಶನ ನೀಡಲು ಜಾಗ ಗುರುತಿಸುವ ಕೆಲಸ ಮಾಡಲಾಗುತ್ತದೆ. ಹಿಂದಿನ ಶಾಸಕರು ಹತ್ತಿಪ್ಪತ್ತು 94ಸಿ ಹಕ್ಕುಪತ್ರ ಕೊಟ್ಟಿದ್ದು ಬಿಟ್ಟರೆ, ಬಡವರಿಗೆ ನಿವೇಶನ ನೀಡಲಿಲ್ಲ. ನಮ್ಮ ಅವಧಿಯಲ್ಲಿ ಬಡವರಿಗೆ ನಿವೇಶನ ನೀಡುವುದು ನಮ್ಮ ಆದ್ಯತಾ ವಿಷಯಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಪೌರಾಯುಕ್ತ ಎಚ್.ಕೆ. ನಾಗಪ್ಪ ಮಾತನಾಡಿದರು. ಪ್ರಾಧಿಕಾರದ ಸದಸ್ಯರಾದ ಸೋಮಶೇಖರ ಲ್ಯಾವಿಗೆರೆ, ಐ.ಎನ್. ಸುರೇಶಬಾಬು, ಮರಿಯಾ ಲೀಮಾ ಇನ್ನಿತರರು ಹಾಜರಿದ್ದರು.