ಬೇಲೂರು: ದೇಶದಲ್ಲೆಡೆ ಶುಕ್ರವಾರ ಚಂದ್ರನ ದರ್ಶನವಾದ ಹಿನ್ನೆಲೆಯಲ್ಲಿ ಪಟ್ಟಣದ ಕೇಂದ್ರ ಜಾಮಿಯಾ ಮಸೀದಿಯ ಧರ್ಮಗುರು ಸೈಯದ್ ಅಹಮದ್ ಅಶ್ರಫಿ ಅವರು ಶನಿವಾರ ಈದುಲ್ ಫಿತರ್ ಆಚರಿಸಲಾಗುತ್ತಿದೆ ಎಂದು ಘೋಷಿಸಿದರು.

ಶನಿವಾರ ಪಟ್ಟಣ ಸೇರಿದಂತೆ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ಒಂದು ತಿಂಗಳ ಉಪವಾಸ ಪೂರ್ಣಗೊಳಿಸಿ ಬೆಳಿಗ್ಗೆ ಗೆಂಡೆಹಳ್ಳಿ ರಸ್ತೆಯ ಈದ್ಗಾ ಮೈದಾನದಲ್ಲಿ ಸೇರಿ ಶ್ರದ್ಧಾಭಕ್ತಿಯಿಂದ ಸಾಮೂಹಿಕ ನಮಾಜ್ ಸಲ್ಲಿಸಿ, ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಕ್ಕಳು ಹಾಗೂ ಹಿರಿಯರು ಹೊಸ ಬಟ್ಟೆ ಧರಿಸಿ ಪರಸ್ಪರ ಸಿಹಿ ಹಂಚಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಧರ್ಮಗುರುಗಳು ಪ್ರವಚನ ನೀಡುತ್ತಾ, ರಂಜಾನ್ ತಿಂಗಳು ಮುಸ್ಲಿಮರಿಗಾಗಿ ಅತ್ಯಂತ ಪವಿತ್ರವಾಗಿದ್ದು, ಉಪವಾಸದ ಮೂಲಕ ಶಿಸ್ತಿನ ಜೀವನ, ಸಹನೆ ಮತ್ತು ಆತ್ಮಶುದ್ಧಿಯನ್ನು ಅಭ್ಯಾಸ ಮಾಡಬೇಕು ಎಂದರು. ಅಸೂಯೆ, ಅಹಂಕಾರ, ಲೋಭ, ಮದ, ಮತ್ಸರ ಸೇರಿದಂತೆ ದುಷ್ಪ್ರವೃತ್ತಿಗಳನ್ನು ದೂರವಿಡುವಂತೆ ಕರೆ ನೀಡಿದರು.

ಸಾಮಾಜಿಕ ಹೋರಾಟಗಾರ ನೂರ್ ಅಹಮದ್ ಮಾತನಾಡಿ, “ಅಲ್ಲಾಹ್ ನಮ್ಮ ಉಪವಾಸ, ಪ್ರಾರ್ಥನೆ ಮತ್ತು ಸತ್ಕರ್ಮಗಳನ್ನು ಸ್ವೀಕರಿಸಲಿ. ರಂಜಾನ್ ಹಬ್ಬವು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಬಡವರು ಹಾಗೂ ಅನಾಥರೊಂದಿಗೆ ಹಂಚಿಕೊಳ್ಳುವ ಹಬ್ಬವಾಗಿರಬೇಕು” ಎಂದು ಹೇಳಿದರು. ಮುಸ್ಲಿಂ ಒಕ್ಕೂಟದ ಅಧ್ಯಕ್ಷ ನಹೀಮ್ ಅವರು, “ರಂಜಾನ್ ಸಹೋದರತ್ವ, ತ್ಯಾಗ ಮತ್ತು ಧಾರ್ಮಿಕ ಶಿಸ್ತಿನ ಮಹತ್ವವನ್ನು ಸಾರುವ ಪವಿತ್ರ ಕಾಲ. ಉಪವಾಸದ ಮೂಲಕ ನಾವು ನಮ್ಮ ಆಸೆ, ಆಕಾಂಕ್ಷೆಗಳನ್ನು ನಿಯಂತ್ರಿಸಿ ಆಧ್ಯಾತ್ಮಿಕ ಶಕ್ತಿಯನ್ನು ಪಡೆಯುತ್ತೇವೆ. ಈ ಸಂದರ್ಭದಲ್ಲಿ ಎಲ್ಲರೂ ಪ್ರೀತಿ, ಶಾಂತಿ ಮತ್ತು ಏಕತೆಯನ್ನು ಬೆಳೆಸೋಣ” ಎಂದು ಹೇಳಿದರು. ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಒದಗಿಸಿತ್ತು.

ಈ ಸಂದರ್ಭದಲ್ಲಿ ಪೇಟೆ ಜಾಮಿಯಾ ಮಸೀದಿ ಅಧ್ಯಕ್ಷ ಇಫ್ರಾಜ್, ಕೋಟೆ ಜಾಮಿಯಾ ಮಸೀದಿ ಅಧ್ಯಕ್ಷ ರಫೀಕ್, ಹಳೇಬೀಡು-ಬೇಲೂರು ಪ್ರಾಧಿಕಾರ ಅಧ್ಯಕ್ಷ ಸೈಯದ್ ತೌಫಿಕ್, ಪುರಸಭೆ ಸದಸ್ಯ ಜಮಾಲ್, ಮಾನವ ಹಕ್ಕು ಆಯೋಗದ ರಾಜ್ಯಾಧ್ಯಕ್ಷ ಅಹಮದ್ ಅಲಿ ಖಾನ್, ಮುಸ್ಲಿಂ ಮುಖಂಡರಾದ ಜಾಕಿರ್ ಪಾಶಾ, ಸೈಯದ್ ಜಮೀಲ್, ಮುಜಮಿಲ್, ಮುಶೀರ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಡಿವೈಎಸ್‌ಪಿ ಪರಶುರಾಮ್, ಸರ್ಕಲ್ ಇನ್ಸ್‌ಪೆಕ್ಟರ್‌ ರೇವಣ್ಣ, ಸಬ್‌ ಇನ್ಸ್‌ಪೆಕ್ಟರ್‌ ಎಸ್. ಜೆ. ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.