ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿ ಸದನದ ಒಳಗೆ ಮುಡಾ ಹಗರಣ ಕುರಿತು ತನಿಖೆಗೆ ಒತ್ತಾಯಿಸಿದಾಗ ಸದನ ಮುಂದೂಡಿದರು. ಅವರ ನಿಲುವನ್ನು ವಿರೋಧಿಸಿ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿದೆವು. ನಿರಂತರ ಹೋರಾಟದ ಫಲವಾಗಿ ಸಿದ್ದರಾಮಯ್ಯನವರು ಕುರ್ಚಿ ಬಿಟ್ಟು ಇಳಿಯುವ ದಿನ ಹತ್ತಿರಕ್ಕೆ ಬಂದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯಾಯಾಂಗ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಕುರಿತು ಪದೇ ಪದೇ ಮಾತನಾಡುವ ಸಿದ್ದರಾಮಯ್ಯನವರು ಅವುಗಳ ಕುರಿತು ಕಿಂಚಿತ್ತಾದರೂ ಗೌರವವಿದ್ದರೆ ತಕ್ಷಣವೇ ಕುರ್ಚಿ ಬಿಟ್ಟು ಕೆಳಗಿಳಿಯಬೇಕು. ಸಿದ್ದರಾಮಯ್ಯನವರು ರಾಜೀನಾಮೆ ನೀಡುವುದು ಮಾತ್ರವಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ.ದಲಿತರ ಜಾಗ ಕಬಳಿಸಿ ೧೪ ನಿವೇಶನಗಳ ಜಾಗ ೬೦ ಕೋಟಿ ರು.ಗೂ ಹೆಚ್ಚು ಬೆಲೆ ಬಾಳುತ್ತದೆ ಎಂದು ಸಿಎಂ ಹೇಳಿದ್ದರು. ಈಗ ಅವರ ಪತ್ನಿಯ ಮೂಲಕವೇ ನಿವೇಶನಗಳನ್ನು ವಾಪಸ್ ನೀಡುತ್ತಿದ್ದಾರೆ. ಹಾಗಿದ್ದ ಮೇಲೆ ೬೦ ಕೋಟಿ ರು.ಗೂ ಹೆಚ್ಚು ಹಣವನ್ನು ಯಾರು ನಿಮಗೆ ಕೊಟ್ಟಿದ್ದಾರೆ ಎಂಬುದನ್ನು ಉತ್ತರಿಸುವಂತೆಯೂ ಆಗ್ರಹಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಹಗರಣದಲ್ಲಿ ೧೮೭ ಕೋಟಿ ರು. ಅವ್ಯವಹಾರ ನಡೆದಿದೆ, ಮೈಸೂರು ಮುಡಾ ಹಗರಣವೂ ಇವರ ಅವಧಿಯಲ್ಲೇ ನಡೆದಿದೆ. ನ್ಯಾಯಾಲಯ ಕೂಡ ತನಿಖೆಗೆ ಆದೇಶ ನೀಡಿದ್ದರೂ ನೈತಿಕತೆಯನ್ನು ಮರೆತು ಅಧಿಕಾರ ದಾಹಕ್ಕೊಳಗಾಗಿ ಸಿಎಂ ಸ್ಥಾನದಲ್ಲಿ ಮುಂದುವರೆಯುವ ಮೂಲಕ ಭಂಡತನ ಪ್ರದರ್ಶಿಸಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಅನುಸರಿಸುತ್ತಿರುವ ಸಿದ್ದರಾಮಯ್ಯನವರಿಗೆ ಮರ್ಯಾದೆಯೇ ಇಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ.