ಜೆಡಿಎಸ್‌ ಅವಧಿ ಯೋಜನೆ ಉದ್ಘಾಟನೆಗೆ ಸಿಎಂ ಆಗಮನ: ಎಚ್‌.ಡಿ.ರೇವಣ್ಣ

KannadaprabhaNewsNetwork | Published : Feb 27, 2024 1:37 AM

ಸಾರಾಂಶ

ಜೆಡಿಎಸ್‌ ಅವಧಿಯಲ್ಲಿ ಮಾಡಲಾದ ಅಭಿವೃದ್ಧಿ ಕೆಲಸಗಳಿಗೆ ಈಗ ಉದ್ಘಾಟನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.೧ ರಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ವ್ಯಂಗ್ಯವಾಡಿದರು. ಹಾಸನದಲ್ಲಿ ಮಾತನಾಡಿದರು.

ಜೆಡಿಎಸ್‌ ನಾಯಕ ವ್ಯಂಗ್ಯ । ರಾಜ್ಯದ ಜನತೆಗೆ ಕಾಂಗ್ರೆಸ್‌ ಸರ್ಕಾರ ದ್ರೋಹ ಎಸಗಿದೆಕನ್ನಡಪ್ರಭ ವಾರ್ತೆ ಹಾಸನ

ಜೆಡಿಎಸ್‌ ಅವಧಿಯಲ್ಲಿ ಮಾಡಲಾದ ಅಭಿವೃದ್ಧಿ ಕೆಲಸಗಳಿಗೆ ಈಗ ಉದ್ಘಾಟನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.೧ ರಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ವ್ಯಂಗ್ಯವಾಡಿದರು.

ನಗರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ‘ಹಾಸನ ಜಿಲ್ಲೆಗೆ ಅನುದಾನಗಳನ್ನು ಕೊಟ್ಟಿರುವುದು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಅವಧಿಯಲ್ಲಿಯೇ ಹೊರತು ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಲ. ಸಿಎಂ ನಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಉದ್ಘಾಟನೆ ಮಾಡುತ್ತಾರೆ. ಇದಕ್ಕಾಗಿ ಜಿಲ್ಲಾಧಿಕಾರಿ, ಎಲ್ಲಾ ಅಧಿಕಾರಿಗಳಿಗೆ ಇಂತಿಷ್ಟು ಜನರನ್ನು ಕರೆದುಕೊಂಡು ಬರಬೇಕೆಂದು ಕಟ್ಟಪ್ಪಣೆ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ನಮ್ಮ ಅವಧಿಯಲ್ಲಿ ನಿರ್ಮಾಣವಾಗಿ ಈಗಾಗಲೇ ಜನರಿಗೆ ಸೇವೆ ನೀಡುತ್ತಿರುವ ಕಟ್ಟಡಗಳು ಈಗ ಎರಡನೇ ಬಾರಿ ಉದ್ಘಾಟನೆ ಆಗುತ್ತಿವೆ. ನಮ್ಮೂರಿನ ದನಗಳ ಆಸ್ಪತ್ರೆ ಉದ್ಘಾಟನೆ ಆಗಿ ಒಂದು ವರ್ಷ ಆಗಿದೆ. ಅದನ್ನೂ ಉದ್ಘಾಟನೆ ಮಾಡುವುದಾಗಿ ಡಿಸಿಯವರು ಹೇಳುತ್ತಿದ್ದಾರೆ. ಯಾವ್ಯಾವುದು ಉದ್ಘಾಟನೆ ಆಗಿದೆಯೋ ಅವುಗಳನ್ನು ಮತ್ತೆ ಉದ್ಘಾಟನೆ ಮಾಡಿಸುತ್ತಿದ್ದಾರೆ. ಡಿಸಿಯವರಿಗೆ ಅದೇ ಕೆಲಸವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅರಸೀಕೆರೆ ಕ್ಷೇತ್ರಕ್ಕೆ ದೇವೇಗೌಡರು, ಕುಮಾರಣ್ಣ ಅವರೇ ಕೊಡುಗೆ ಕೊಟ್ಟಿರುವುದು. ಜೆಡಿಎಸ್ ಅಧಿಕಾರದಲ್ಲಿದ್ದಾಗ ಇಂಜಿನಿಯರ್ ಕಾಲೇಜು, ರಸ್ತೆಗಳನ್ನು ಮಾಡಿದ್ದೆವು. ಆದರೆ ಈಗ ಅಧಿಕಾರಿಗಳು ಜನ ಕರೆದುಕೊಂಡು ಬರುವ ಕೆಲಸಕ್ಕೆ ಇಳಿದಿದ್ದಾರೆ. ರೈತರ ಕೆಲಸ ಯಾರೂ ಮಾಡುತ್ತಿಲ್ಲ. ಕೃಷಿಕರು ಸಾಯುತ್ತಿದ್ದಾರೆ. ಈ ಸರ್ಕಾರ ಜಿಲ್ಲೆಗೆ ಯಾವ ಹೊಸ ಕಾಮಗಾರಿ ನೀಡಿದೆ? ಅರಸೀಕೆರೆಗೆ ಒಂದೆರಡು ಕೆಲಸ ಮಾಡಿಕೊಟ್ಟಿದ್ದಾರೆ ಎನ್ನುವುದನ್ನು ಬಿಟ್ಟರೆ ಜಿಲ್ಲಾಧಿಕಾರಿಗಾಗಲಿ, ಮುಖ್ಯ ಕಾರ್ಯದರ್ಶಿಗಾಗಲೀ ಜಿಲ್ಲೆಯ ರೈತರ ಬಗ್ಗೆ ಚಿಂತೆ ಇಲ್ಲ. ಇಲ್ಲಿ ಕುಡಿಯುವ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ. ನೀರಿಗೆ ಹಾಹಾಕಾರ ಎದುರಾಗಿದೆ. ರೈತರ ಬೆಳೆ ನಷ್ಟಕ್ಕೆ ಪರಿಹಾರ ಇಲ್ಲವಾಗಿದೆ’ ಎಂದು ಆರೋಪಿಸಿದರು.

ಎಂಟು ತಿಂಗಳ ಕಾಲ ರಾಜ್ಯ ಸರ್ಕಾರಕ್ಕೆ ಕೊಬ್ಬರಿಗೆ ಬೆಂಬಲ ಬೆಲೆ ಕೊಡಲು ಆಗಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಕ್ವಿಂಟಾಲ್‌ಗೆ ಹದಿನೈದು ಸಾವಿರ ರು. ಕೊಡುವುದಾಗಿ ಹೇಳಿದರು. ಈ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ದ್ರೋಹ ಬಗೆದಿದೆ. ದೇವೇಗೌಡರು ಹೋಗಿ ಕೇಂದ್ರದಲ್ಲಿ ಮೋದಿಯವರನ್ನು ಭೇಟಿ ಮಾಡಿದರು. ಅದರ ಪರಿಣಾಮವಾಗಿ ಕೊಬ್ಬರಿ ಖರೀದಿ ಮಾಡುತ್ತಿದ್ದಾರೆ. ಜಿಲ್ಲೆಯ ಜನ ಮೋದಿ, ಮುಂಡಾ, ದೇವೇಗೌಡ, ಸಂಸದರು, ಶಾಸಕರಿಗೆ ಧನ್ಯವಾದ ಹೇಳಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಇತರರು ಇದ್ದರು.ಶಾಸಕ ಎಚ್‌.ಡಿ.ರೇವಣ್ಣ.

Share this article