ಕೊಪ್ಪಳ ಕಿಮ್ಸ್ ಔಷಧಿ ಹಗರಣ ಸಿಎಂ ಅಂಗಳಕ್ಕೆ!

KannadaprabhaNewsNetwork |  
Published : Oct 31, 2026, 02:00 AM IST
ಫೋಟೊ: ಸಿಎಂ ಕಚೇರಿಯಿಂದ ಕಿಮ್ಸ್ ನಿರ್ದೇಶಕರಿಗೆ ರವಾನಿಸಿರುವ ಪತ್ರದ ಪ್ರತಿ. | Kannada Prabha

ಸಾರಾಂಶ

ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 10 ಕ್ವಿಂಟಲ್ ಅವಧಿ ಮೀರಿದ ಔಷಧಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಗಿದ್ದು, ಇನ್ನೂ 2ರಿಂದ 3 ಟನ್ ಔಷಧಗಳು ವಿಲೇವಾರಿಗೆ ಬಾಕಿ ಇವೆ ಎಂಬ ಸಂಗತಿ 'ಕನ್ನಡಪ್ರಭ' ವರದಿಯಿಂದ ಬೆಳಕಿಗೆ ಬಂದಿತ್ತು.

ಕೊಪ್ಪಳ: ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಗಳ ವಿಲೇವಾರಿ ಹಾಗೂ ಔಷಧ ಖರೀದಿಯಲ್ಲಿನ ಲೋಪಗಳ ಕುರಿತು ''''ಕನ್ನಡಪ್ರಭ'''' ಪ್ರಕಟಿಸಿದ ಸರಣಿ ವರದಿಗೆ ಮುಖ್ಯಮಂತ್ರಿ ಕಚೇರಿ ಸ್ಪಂದಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ಅವರು ಕಿಮ್ಸ್ ನಿರ್ದೇಶಕರಿಗೆ ತುರ್ತು ಪತ್ರ ರವಾನಿಸಿ, ಕೂಡಲೇ ಕ್ರಮ ಕೈಗೊಂಡು ಪ್ರಕರಣದ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

''ಕನ್ನಡಪ್ರಭ'' ವರದಿಯಿಂದ ಸರ್ಕಾರಕ್ಕೆ ಮುಜುಗರ ಹುಟ್ಟಿಸಿದ್ದು, ಪ್ರಕರಣದ ವಾಸ್ತವಾಂಶಗಳನ್ನು ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸಿಎಂ ಕಚೇರಿ ಸೂಚನೆ ನೀಡಿದೆ.

ವಾರದೊಳಗೆ ವರದಿ: ಸಿಎಂ ಕಚೇರಿಯ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕಿಮ್ಸ್ ನಿರ್ದೇಶಕರು, ಪ್ರಕರಣದ ತನಿಖೆಗಾಗಿ ಸಮಿತಿ ರಚಿಸಿರುವುದಾಗಿ ತಿಳಿಸಿದ್ದಾರೆ. ಅರವಳಿಕೆ ವಿಭಾಗದ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ನಾಲ್ವರು ಸದಸ್ಯರ ಸಮಿತಿ ರಚಿಸಲಾಗಿದ್ದು, ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸಮಿತಿಯ ವರದಿ ಬಂದ ತಕ್ಷಣ ಅಗತ್ಯ ಕ್ರಮ ಕೈಗೊಂಡು, ಹೆಚ್ಚಿನ ಕ್ರಮಕ್ಕಾಗಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.

ಸಿಎಂಗೆ ದೂರು: ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 10 ಕ್ವಿಂಟಲ್ ಅವಧಿ ಮೀರಿದ ಔಷಧಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಗಿದ್ದು, ಇನ್ನೂ 2ರಿಂದ 3 ಟನ್ ಔಷಧಗಳು ವಿಲೇವಾರಿಗೆ ಬಾಕಿ ಇವೆ ಎಂಬ ಸಂಗತಿ ''ಕನ್ನಡಪ್ರಭ'' ವರದಿಯಿಂದ ಬೆಳಕಿಗೆ ಬಂದಿತ್ತು. ಈ ಪ್ರಕರಣ ಇದೀಗ ರಾಜ್ಯಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಔಷಧ ಖರೀದಿ, ಗುಣಮಟ್ಟ ಪರಿಶೀಲನೆ ಹಾಗೂ ದಾಸ್ತಾನು ನಿರ್ವಹಣೆಯಲ್ಲಿನ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ವಕೀಲರಾದ ಅಶೋಕಸ್ವಾಮಿ ಹೇರೂರ ಅವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಹಾಗೂ ಸಿಎಂ ಅವರಿಗೆ ಮನವಿ ಸಲ್ಲಿಸಿದ್ದಾರೆ.

ವೈದ್ಯರ ಬೇಡಿಕೆಗೆ ಅನುಗುಣವಾಗಿ ಔಷಧ ಖರೀದಿ ನಡೆಯುತ್ತಿದೆಯೇ, ಔಷಧಗಳ ಗುಣಮಟ್ಟ ಪರಿಶೀಲಿಸಲಾಗುತ್ತಿದೆಯೇ ಹಾಗೂ ನಕಲಿ ಅಥವಾ ಕಳಪೆ ಗುಣಮಟ್ಟದ ಔಷಧಗಳ ಖರೀದಿ ನಡೆದಿದೆಯೇ ಎಂಬುದನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಖರೀದಿ ಮತ್ತು ವಿತರಣೆಯ ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳ ಫಾರ್ಮಸಿ ಮತ್ತು ದಾಸ್ತಾನು ಕೊಠಡಿಗಳನ್ನು ಔಷಧ ನಿಯಂತ್ರಣ ಇಲಾಖೆ ನಿಯಮಿತವಾಗಿ ಪರಿಶೀಲಿಸುವ ವ್ಯವಸ್ಥೆ ಜಾರಿಗೆ ತರಬೇಕು. ಔಷಧಗಳ ಮಾದರಿ ಸಂಗ್ರಹಿಸಿ ಗುಣಮಟ್ಟ ಪರೀಕ್ಷಿಸುವ ಹಾಗೂ ಲೋಪ ಕಂಡುಬಂದಲ್ಲಿ ನೋಟಿಸ್ ನೀಡುವ ಅಧಿಕಾರದ ಕುರಿತು ಸ್ಪಷ್ಟ ನಿರ್ದೇಶನ ಹೊರಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಅಲ್ಲದೆ, ಅವಧಿ ಮುಗಿಯುವ ಹಂತದಲ್ಲಿರುವ ಔಷಧಗಳನ್ನು ಅಗತ್ಯವಿರುವ ಇತರ ಸರ್ಕಾರಿ ಆಸ್ಪತ್ರೆಗಳಿಗೆ ಮುಂಚಿತವಾಗಿ ವರ್ಗಾಯಿಸುವ ವ್ಯವಸ್ಥೆ ರೂಪಿಸಬೇಕು. ಇದರಿಂದ ಔಷಧಗಳ ವ್ಯರ್ಥ ಬಳಕೆ ಮತ್ತು ಸಾರ್ವಜನಿಕ ಹಣದ ನಷ್ಟ ತಡೆಯಬಹುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ