ಕನ್ನಡಪ್ರಭ ವಾರ್ತೆ ಮಡಿಕೇರಿ
ಬಂದೂಕುಗಳನ್ನು ಹೂವುಗಳಿಂದ ಅಲಂಕರಿಸಿ, ವಾಹನದಲ್ಲಿರಿಸಿ ದುಡಿಕೋಟ್ ಪಾಟ್‌ನೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಶೂಟಿಂಗ್ ಸ್ಪರ್ಧೆಗಳು ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕೊಡವತಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ನಂದಿನೆರವಂಡ ನಿಶಾ ಅಚ್ಚಯ್ಯ ಅವರು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ವಿರಚಿತ ತೋಕ್‌ಪಾಟ್ ಹಾಡಿದರು. ಎನ್.ಯು.ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಂದೂಕು/ತೋಕ್ ಆದಿಮ ಸಂಜಾತ ಕೊಡವರ ಜನಾಂಗದ ಧಾರ್ಮಿಕ-ಜನಾಂಗೀಯ ಸಂಸ್ಕಾರವಾಗಿದೆ. ತೋಕ್ ಕೊಡವರ ಪ್ರಾಚೀನ ಹೆಮ್ಮೆಯ ಹೆಗ್ಗುರುತಾಗಿದ್ದು, ಪೂರ್ವಕಾಲದ ಸಂಪ್ರದಾಯ, ಆಚರಣೆಗಳು ಮತ್ತು ಜಾನಪದ ಕಾನೂನು ವ್ಯವಸ್ಥೆಗಳನ್ನು ಪ್ರದರ್ಶಿಸಲು ಹಾಗೂ ಸಂರಕ್ಷಿಸಲು ಸಿಎನ್‌ಸಿ ಪ್ರತಿವರ್ಷ ತೋಕ್ ನಮ್ಮೆಯನ್ನು ಸಾರ್ವಜನಿಕ ಗನ್ ಕಾರ್ನಿವಲ್ ನ್ನಾಗಿ ಆಚರಿಸಿಕೊಂಡು ಬರುತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.ಆದಿಮ ಸಂಜಾತ ಕೊಡವ ಜನಾಂಗೀಯ ಹೆಗ್ಗುರುತು ಭೂಮಿ ತಾಯಿ, ಪ್ರಕೃತಿ ಮಾತೆ, ಜಲದೇವತೆ ಪವಿತ್ರ ಕಾವೇರಿ ನದಿ, ಬುಡಕಟ್ಟು ಪ್ರಾಚೀನತೆ ಜನಾಂಗ, ದೈವಿಕ ವನಪ್ರದೇಶಗಳು, ಪೂಜನೀಯ ಮಂದ್‌ಗಳು, ಪಾರಂಪರಿಕ ಸಾಮುದಾಯಿಕ ಭೂಮಿಗಳು, ಅಲಿಖಿತ ಮೌಖಿಕ ಜಾನಪದ-ಕಾನೂನು ವ್ಯವಸ್ಥೆಗಳು ಮತ್ತು ತೋಕ್/ಬಂದೂಕು ಸಂಸ್ಕೃತಿಯೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ಇವು ಕೊಡವ ಜನಾಂಗದ ಭೂತ, ವರ್ತಮಾನ ಮತ್ತು ಭವಿಷ್ಯದಿಂದ ಬೇರ್ಪಡಿಸಲಾಗದ ಕೊಡವ ಪರಂಪರೆಯ ಶ್ರೀಮಂತ ಭಂಡಾರಗಳಾಗಿವೆ ಎಂದರು.
ಹಳೇ ಮೈಸೂರಿನ ಪ್ರಬಲ ಸಮುದಾಯಗಳಿಂದ ಪ್ರಭಾವಿತವಾಗಿರುವ ಸರ್ಕಾರಿ ಅಂಗಗಳು ಕೊಡವ ಹಕ್ಕುಗಳನ್ನು ದುರ್ಬಲಗೊಳಿಸಲು ಸಂವಿಧಾನೇತರ ಶಕ್ತಿ ಕೇಂದ್ರಗಳನ್ನು ಬಳಸಿಕೊಂಡಿವೆ. ಅವರು ಕೊಡವ ಅಸ್ತಿತ್ವ ಮತ್ತು ಗುರುತನ್ನು ನಿರರ್ಥಕಗೊಳಿಸಲು ಮತ್ತು ಕಾನೂನುಬಾಹಿರಗೊಳಿಸಲು ಸಂಚು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಶ್ವದಲ್ಲೇ ಈ ವೈಶಿಷ್ಟ್ಯ ಪೂರ್ಣ ಕೊಡವ ಗನ್ ಕಾರ್ನಿವಲ್-ತೋಕ್ ನಮ್ಮೆಯನ್ನು ಕೇಂದ್ರ-ರಾಜ್ಯ ಸರ್ಕಾರಗಳು ಮಧ್ಯೆ ಏಷ್ಯಾ ದೇಶಗಳಲ್ಲಿ ನಡೆಸುತ್ತಿರುವ ಸಂಪ್ರದಾಯಿಕ ‘ಬುಜಕಾಸಿ’ ಉತ್ಸವದಂತೆ ನಡೆಸಲು ಉತ್ತೇಜನ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.