ಕನ್ನಡಪ್ರಭ ವಾರ್ತೆ ಮಡಿಕೇರಿಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ವಿಶೇಷ ಹಿಲ್ ಕೌನ್ಸಿಲ್ ಸ್ಟೆಟಸ್ ಪಡೆಯುವುದು ಕೊಡವರ ಸಂವಿಧಾನ ಬದ್ಧ ಹಕ್ಕಾಗಿದೆ ಎಂದು ಹಿರಿಯ ರಾಜಕೀಯ ಮುತ್ಸದಿ, ವಿದ್ವಾಂಸ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಪ್ರತಿಪಾದಿಸಿದ್ದಾರೆ.ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ 30ನೇ ವರ್ಷದ ಸಾರ್ವತ್ರಿಕ "ಕೈಲ್ ಪೊವ್ದ್ " ಹಬ್ಬ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ಚುನಾಯಿತ ಪ್ರತಿನಿಧಿಗಳು ಸಂವಿಧಾನ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿ ಪ್ರಜೆಗಳು ಪ್ರಭುಗಳು ಎಂಬುದನ್ನು ಮರೆತು ಇಂದು ರಿಯಲ್ ಎಸ್ಟೇಟ್ ದಂದೆಯ ಮೂಲಕ ತಮ್ಮ ಮತಕ್ಷೇತ್ರಗಳ ಭೂಮಿಯ ಕಬ್ಜೆಯ ಮೂಲಕ ಪಾಳೆಗಾರರಂತೆ ಮೆರೆಯುತ್ತಿರುವುದು ವಿಷಾದನೀಯ ಎಂದು ಶ್ರೀಯುತರು ಮರುಗಿದರು. ಪ್ರಜೆಗಳೇ ಸಾರ್ವಭೌಮರೆನ್ನುವ ಹಕ್ಕನ್ನು ಅರಿತುಕೊಂಡು ಕ್ಷೇತ್ರದ ಮತದಾರರು, ಚುನಾಯಿತ ಜನಪ್ರತಿನಿಧಿಗಳು ಸಾಮಂತರಲ್ಲ ವೆಂದು ಅರಿತು ಅವರನ್ನು ಪ್ರಶ್ನಿಸಬೇಕೆಂದು ವಿಶ್ವನಾಥ್ ಕರೆ ನೀಡಿದರು.
1956ರ ವರೆಗೆ ಪ್ರತ್ಯೇಕ ರಾಜ್ಯವಾಗಿ ಮುಖ್ಯಮಂತ್ರಿಗಳನ್ನು ಒಳಗೊಂಡ ಶಾಸನ ಸಭೆ ಅಸ್ತಿತ್ವದಲ್ಲಿದ್ದ ಕೊಡವರ ನೆಲ ವಿಶೇಷ ಸ್ಥಾನಮಾನದೊಂದಿಗೆ ಮರುಕಳಿಸಬೇಕಾಗಿದೆ. ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಮತ್ತು ಕಲಂ 244 ರ ಅಡಿಯಲ್ಲಿ ಕೊಡವರಿಗೆ ಸ್ವಯಂ ಆಡಳಿತದ ಅಗತ್ಯವನ್ನು ತಿಳಿಸಿದರು.ಕೊಡವರು ಕೊಡವಸೀಮೆಯ ಪುರಾತನ ಬುಡಕಟ್ಟು ಜನರಾಗಿರುವುದರಿಂದ, ಸಂವಿಧಾನದ ಖಾತರಿಗಳ ಮೂಲಕ ಈ ಮಣ್ಣಿನ ರಾಜಕೀಯ ಬಲ, ನೆಲ, ಜಲ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ಧರಿಸುವ ಹಕ್ಕನ್ನು ಅವರು ಹೊಂದಿರಬೇಕು. ಕೊಡವರು ದೇಶದ ಅಭಿವೃದ್ಧಿಗೆ ಮತ್ತು ಸೇನೆಗೆ ಅಪ್ರತಿಮ ಕಾಣಿಕೆ ನೀಡಿದ್ದಾರೆ. ಶ್ರೇಷ್ಠ ಸೇವೆ ನೀಡಿದ ಅಗ್ರ ಗಣ್ಯ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನವರ ಹೆಸರು ಸೂರ್ಯ-ಚಂದ್ರ ಇರುವಲ್ಲಿಯವರೆಗೆ ಚಿರಸ್ಥಾಯಿ ಎಂದು ಅಭಿಪ್ರಾಯಪಟ್ಟರು.
ಒಗ್ಗಟ್ಟನ್ನು ಪ್ರದರ್ಶಿಸಬೇಕು: ಕೊಡವರ ಆಕಾಂಕ್ಷೆಗಳನ್ನು ಸಿಎನ್‌ಸಿ ಸಂಘಟನೆ ಇಷ್ಟು ದಿನ ಜೀವಂತವಾಗಿರಿಸಿಕೊಂಡಿರುವುದು ಶ್ಲಾಘನೀಯ ಸಾಧನೆಯಾಗಿದೆ. ಹುಟ್ಟುವ ಪ್ರತಿಯೊಬ್ಬ ಕೊಡವ ನೈತಿಕ, ಆರ್ಥಿಕ ಮತ್ತು ದೈಹಿಕವಾಗಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು ಹಾಗೂ ವಿಸ್ತರಿಸಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಯುದ್ಧ ಮತ್ತು ಬೇಟೆಯ ಕೌಶಲ್ಯಗಳು ಆದಿಮಸಂಜಾತ ಆ್ಯನಿಮಿಸ್ಟಿಕ್ ನಂಬಿಕೆಯ ಏಕಾ ಜನಾಂಗವಾದ ಕೊಡವರಲ್ಲಿ ವಂಶವಾಹಿಯಾಗಿ ಬೇರೂರಿದೆ. ಶಸ್ತ್ರಾಸ್ತ್ರಗಳನ್ನು ಹೊಂದುವುದು ಯೋಧ ಪರಂಪರೆಯ ಕೊಡವರ ಅನುವಂಶಿಕ ಶಾಶ್ವತ ಹಕ್ಕಾಗಿದೆ. ಬಂದೂಕಿನೊಂದಿಗೆ ಕೊಡವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.ಸಭಾ ಕಾರ್ಯಕ್ರಮಕ್ಕೂ ಮೊದಲು ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕೈಲ್ ಪೊವ್ದ್ ಪ್ರಯುಕ್ತ ತೋಕ್ ಪೂವ್ ನಿಂದ ಬಂದೂಕುಗಳನ್ನು ಸಿಂಗರಿಸಿ ಪ್ರಾರ್ಥಿಸಲಾಯಿತು. ಪೂಜ್ಯ ಸ್ಥಾನದಲ್ಲಿರುವ ಗುರುಕಾರೋಣರಿಗೆ ಮೀದಿ ಇಟ್ಟು ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಕೋರಲಾಯಿತು. ಕೊಡವರು ಹಾಗೂ ಕೊಡವತಿಯರು ಶಸ್ತ್ರಾಸ್ತ್ರಗಳ ಸಾಮೂಹಿಕ ಆರಾಧನೆಯಲ್ಲಿ ಬಂದೂಕು ಮತ್ತು ಒಡಿಕತ್ತಿಯೊಂದಿಗೆ ಪಾಲ್ಗೊಂಡರು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕೋವಿಯ ಹಕ್ಕನ್ನು ಪ್ರತಿಪಾದಿಸಿದರು.ಹಬ್ಬದ ಪ್ರಯುಕ್ತ ನಡೆದ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ರುಚಿಕರವಾದ "ಕೈಲ್ ಪೊವ್ದ್ " ಖಾದ್ಯ ಸಹಿತ ಊಟದೊಂದಿಗೆ ಹಬ್ಬದ ಸಂಭ್ರಮಾಚರಣೆಯನ್ನು ಹಂಚಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಕಲಿಯಂಡ ಮೀನಾ, ಪುಲ್ಲೇರ ಸ್ವಾತಿ, ಅಪ್ಪಚ್ಚೀರ ರೀನಾ, ನಂದೇಟಿರ ಕವಿತಾ, ಪಟ್ಟಮಾಡ ಲಲಿತಾ, ಚೋಳಪಂಡ ಜ್ಯೋತಿ, ಅರೆಯಡ ಸವಿತಾ, ಪಚ್ಚಾರಂಡ ಶಾಂತಿ ಸರ್ವಶ್ರೀ ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಳ್ಮಂಡ ಜೈ, ಕಾಂಡೇರ ಸುರೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ ಮತ್ತಿತರರು ಪಾಲ್ಗೊಂಡಿದ್ದರು.