ಭೂಪರಿವರ್ತನೆ ವಿರುದ್ಧ ಇಂದು ಸಿಎನ್‌ಸಿ ಮಾನವ ಸರಪಳಿ

KannadaprabhaNewsNetwork |  
Published : Jul 15, 2024, 01:50 AM IST
ನಾಚಪ್ಪ | Kannada Prabha

ಸಾರಾಂಶ

ಬೆಳಗ್ಗೆ 10.30ಕ್ಕೆ ಪೊನ್ನಂಪೇಟೆ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹಾಗೂ ಕೊಡವ ಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಿದ್ದಾಪುರದ ಬಿಬಿಟಿಸಿಯ 2400 ಎಕರೆ ಕಾಫಿ ತೋಟಗಳು, ಇದೀಗ ಆರೆಂಜ್ ಕೌಂಟಿ ರೆಸಾರ್ಟ್ ಒಡೆತನದ ಪುನರ್ ನಾಮಕರಣಗೊಂಡ ‘ರಾಮಪುರಂ ಹೋಲ್ಡಿಂಗ್ಸ್‌ ಇವಾಲ್ವ್ ಬ್ಯಾಕ್ ಎಲ್ಖಿಲ್’ ಮತ್ತು ಬೀಟಿಕಾಡ್ ಬ್ಲಾಕ್ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜು.15ರಂದು ಪೊನ್ನಂಪೇಟೆಯಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.ಬೆಳಗ್ಗೆ 10.30ಕ್ಕೆ ಪೊನ್ನಂಪೇಟೆ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹಾಗೂ ಕೊಡವ ಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ಅವರು ಪ್ರಕಟಣೆ ನೀಡಿದ್ದಾರೆ.ಆದಿಮ ಸಂಜಾತ ಕೊಡವರ ಪವಿತ್ರ ಕೊಡವ ಲ್ಯಾಂಡನ್ನು ಸಂರಕ್ಷಿಸಿಕೊಳ್ಳಲು ಜಿಲ್ಲಾದ್ಯಂತ ಸಿಎನ್‌ಸಿ ವತಿಯಿಂದ ನಿರಂತರ ಜನಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದು, ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.ರಾಜಕೀಯ ನಂಟು ಮತ್ತು ಕಪ್ಪು ಹಣ ಹೊಂದಿರುವ ಭೂಮಾಫಿಯಾಗಳು, ರೆಸಾರ್ಟ್ ದೊರೆಗಳು, ಕಾರ್ಪೋರೇಟ್ ವಲಯಗಳು, ಬಹುರಾಷ್ಟ್ರೀಯ ಕಂಪನಿಗಳು, ಅನಿವಾಸಿ ಭಾರತೀಯ ಉದ್ಯಮಪತಿಗಳು, ಆಂಧ್ರ, ತೆಲಂಗಾಣ, ತಿರುಪತಿ ತಿರುಮಲ ದೇವಸ್ಥಾನದ ಸಾಫ್ಟ್ ಮನಿ ಫಲಾನುಭವಿಗಳು, ವಿಶ್ವಾದ್ಯಂತ ಇರುವ ಆರ್ಥಿಕ ಅಪರಾಧಿಗಳು ಹಾಗೂ ಕಾಳಸಂತೆಕೋರರು ಕಪ್ಪು ಹಣವನ್ನು ಬಿಳಿ ಮಾಡಲು ಕೊಡವ ಲ್ಯಾಂಡನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ರೆಸಾರ್ಟ್ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯದಿದ್ದರೂ ಕಾಫಿ ತೋಟಗಳ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಮಾಡಲಾಗುತ್ತಿದೆ. ನಷ್ಟವನ್ನು ತೋರಿಸಿ ಕಪ್ಪು ಹಣದ ಚಲಾವಣೆಗೆ ಸಂಚು ರೂಪಿಸಲಾಗುತ್ತಿದೆ. ಭೂಮಾಫಿಯಾಗಳಿಂದ ಕೊಡವ ಲ್ಯಾಂಡ್‌ನ ಕಾವೇರಿ ಒಡಲು ನಾಶವಾಗುತ್ತಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.ಪವಿತ್ರ ಕೊಡವ ಲ್ಯಾಂಡನ್ನು ಸಂರಕ್ಷಿಕೊಳ್ಳಲು ಜನ ಜಾಗೃತಿ ಮತ್ತು ಶಾಂತಿಯುತ ಹೋರಾಟದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ