ಸಿಎನ್‌ಸಿ ‘ಕೊಡವ ನ್ಯಾಷನಲ್ ಡೇ’, ಸಂವಿಧಾನ ದಿನಾಚರಣೆ

KannadaprabhaNewsNetwork |  
Published : Nov 27, 2024, 01:05 AM IST
ಚಿತ್ರ:  26ಎಂಡಿಕೆ6 : ಸಿಎನ್‌ಸಿಯಿಂದ  ಕೊಡವ ನ್ಯಾಷನಲ್ ಡೇ  ಆಚರಿಸಲಾಯಿತು.  | Kannada Prabha

ಸಾರಾಂಶ

ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್‌ನಲ್ಲಿ 34ನೇ ವರ್ಷದ ‘ಕೊಡವ ನ್ಯಾಷನಲ್ ಡೇ’ ಮತ್ತು ಭಾರತದ ಸಂವಿಧಾನ ದಿನಾಚರಣೆ ನಡೆಯಿತು. 9 ಪ್ರಮುಖ ನಿರ್ಣಯಗಳನ್ನು ಮಂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತೀಯ ಸಂವಿಧಾನದಡಿ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು. ಅಂತಾರಾಷ್ಟ್ರೀಯ ಕಾನೂನಿನಡಿ ಕೊಡವರನ್ನು ಸ್ಥಳೀಯ ಕೊಡವ ಬುಡಕಟ್ಟು ಜನರು ಎಂದು ಗುರುತಿಸಬೇಕು ಎಂದು ಕೊಡವ ನ್ಯಾಶನಲ್‌ ಕೌನ್ಸಿಲ್‌ ಅಧ್ಯಕ್ಷ (ಸಿಎನ್‌ಸಿ) ಎನ್.ಯು.ನಾಚಪ್ಪ ಆಗ್ರಹಿಸಿದ್ದಾರೆ.

ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆದ 34ನೇ ವರ್ಷದ ‘ಕೊಡವ ನ್ಯಾಷನಲ್ ಡೇ’ ಮತ್ತು ಭಾರತದ ಸಂವಿಧಾನ ದಿನಾಚರಣೆ ಅಧ್ಯಕ್ಷತೆ ವಹಿಸಿದ ಅವರು 9 ಪ್ರಮುಖ ನಿರ್ಣಯಗಳನ್ನು ಮಂಡಿಸಿದರು.

ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ಕೊಡವ ಸಾಂಪ್ರದಾಯಿಕ ‘ಸಂಸ್ಕಾರ ಗನ್’ ಹಕ್ಕಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು, ಕೊಡವ ಭಾಷೆಯನ್ನು ಭಾರತೀಯ ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಸೇರಿಸಬೇಕು, ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯಾಗಿ ಗುರುತಿಸಬೇಕು, ಕಾವೇರಿ ನದಿಯನ್ನು ಕಾನೂನುಬದ್ಧ ವ್ಯಕ್ತಿಯ ಸ್ಥಾನಮಾನದೊಂದಿಗೆ ಜೀವಂತ ಘಟಕವಾಗಿ ಗುರುತಿಸಬೇಕು, ಕೊಡವರ ಅನುಕೂಲಕ್ಕಾಗಿ ನದಿಯ ನೀರಿನ ಸಂಪನ್ಮೂಲದ ಬಳಕೆಗೆ ಮುಕ್ತ ಅವಕಾಶ ನೀಡಬೇಕು, ಕರಾಳ ಇತಿಹಾಸದ ಕೊಡವರ ನರಮೇಧದ ಸ್ಥಳದಲ್ಲಿ ಸ್ಮರಣಾರ್ಥ ಸ್ಮಾರಕ ನಿರ್ಮಿಸಬೇಕು, ಜನಸಂಖ್ಯಾ ಬದಲಾವಣೆಗಳನ್ನು ತಡೆಗಟ್ಟಲು ಮತ್ತು ಕೊಡವರ ಆಸ್ತಿಗಳನ್ನು ರಕ್ಷಿಸಲು ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆ ಅಳವಡಿಸಬೇಕು, ಭಾರತೀಯ ಸಂಸತ್ತು ಮತ್ತು ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಕೊಡವರಿಗೆ ಪ್ರಾತಿನಿಧ್ಯ ನೀಡಬೇಕು ಮತ್ತು ಪರಕೀಯ ಆಡಳಿತಗಾರರಿಂದ ವಶಪಡಿಸಿಕೊಳ್ಳಲ್ಪಟ್ಟ ಮತ್ತು ಹೊರಗಿನವರಿಗೆ ಅಡಮಾನವಿಟ್ಟ ಕೊಡವ ಪೂರ್ವಜರ ಭೂಮಿ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವು ಪ್ರಜಾಪ್ರಭುತ್ವ ದೇಶ ಭಾರತದ ಸರ್ವೋಚ್ಚ ದಾಖಲೆಯಾಗಿದೆ. ಇದರ ಆಧಾರದಲ್ಲಿ ಕೊಡವರು ತಮಗೆ ಸೇರಬೇಕಾದ ಹಕ್ಕುಗಳನ್ನು ಮಂಡಿಸುವ ಮೂಲಕ ಸಾಂವಿಧಾನಿಕ ಭದ್ರತೆ ಪಡೆದುಕೊಳ್ಳಬೇಕು. ಕೊಡವರು ಭಾರತೀಯ ಶ್ರೇಷ್ಠ ಸಂವಿಧಾನದ ಮೂಲಕವಷ್ಟೇ ಹಕ್ಕುಗಳನ್ನು ಪಡೆಯಲು ಸಾಧ್ಯ. ಆದರೆ ಹಕ್ಕುಗಳನ್ನು ಪ್ರತಿಪಾದಿಸುವ ಧೈರ್ಯವನ್ನು ಕೊಡವರು ತೋರಬೇಕು ಎಂದು ನಾಚಪ್ಪ ತಿಳಿಸಿದರು.

ಕೊಡವರ ಹಕ್ಕುಗಳ ಕುರಿತು ಹಾದಿ ತಪ್ಪಿಸುವವರ ಮತ್ತು ಪಿತೂರಿ ನಡೆಸುವವರ ಬಗ್ಗೆ ಕೊಡವರು ಜಾಗೃತರಾಗಿರಬೇಕು. ಕೊಡವ ಲ್ಯಾಂಡ್ ಭೂಮಾಫಿಯಾಗಳ ಮೂಲಕ ಪರರ ಪಾಲಾಗುತ್ತಿದ್ದು, ಕೊಡವರು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.

ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ, ನಂದೇಟಿರ ಕವಿತಾ, ಚೋಳಪಂಡ ಜ್ಯೋತಿ, ಪಟ್ಟಮಾಡ ಲಲಿತಾ, ಅಪ್ಪಚ್ಚಿರ ರೀನಾ, ಕೊಡಂದೇರ ಉತ್ತರೆ, ಚೆಕ್ಕೇರ ಕಾಶಿ, ಚೇಂದಂಡ ಜೆಮ್ಸಿ ಪೊನ್ನಪ್ಪ, ಪೊರಿಮಂಡ ದಿನಮಣಿ, ಮಾಚೆಟ್ಟಿರ ಚೋಟು, ತೀತರಮಾಡ ಪ್ರಭು, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎನ್‌ಸಿ ಬೇಡಿಕೆಗಳ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಎನ್.ಯು.ನಾಚಪ್ಪ ಗಾಳಿಯಲ್ಲಿ ಗುಂಡು ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಡವ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದ 13 ಜಿಲ್ಲೆಗಳಲ್ಲಿ ಬೇಸಿಗೆ ಮಳೆ
ಕನ್ನಡಿಗ ಅಮರೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ