ಕಾವೇರಿ ತುಲಾ ಸಂಕ್ರಮಣ ಪ್ರಯುಕ್ತ ದೇವಟ್ ಪರಂಬುವಿನಲ್ಲಿ ಸಿಎನ್‌ಸಿ ಪ್ರಾರ್ಥನೆ

KannadaprabhaNewsNetwork | Published : Oct 21, 2024 12:34 AM

ಸಾರಾಂಶ

ದೇವಟ್‌ಪರಂಬುವಿನ ದುರಂತ ಸ್ಥಳದಲ್ಲಿ ದೋಸೆ ಮತ್ತು ಪುಟ್ಟ್ ಹಾಗೂ ಆಹಾರ ಪದಾರ್ಥಗಳನ್ನಿಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿತು. ಸಿಎನ್‌ಸಿ ಅಧ್ಯಕ್ಷ ಎನ್‌.ಯು. ನಾಚಪ್ಪ ನೇತೃತ್ವ ವಹಿಸಿದ್ದರು.

ಮಡಿಕೇರಿ : ಕಾವೇರಿ ತುಲಾ ಸಂಕ್ರಮಣದ ಹಿನ್ನೆಲೆ ಕಾವೇರಿ ತೀರ್ಥೋದ್ಭವದ ಮರುದಿನವಾದ ಶುಕ್ರವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನ ದುರಂತ ಸ್ಥಳದಲ್ಲಿ ದೋಸೆ ಮತ್ತು ಪುಟ್ಟ್ ಹಾಗೂ ಆಹಾರ ಪದಾರ್ಥಗಳನ್ನಿಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ದೇವಟ್ ಪರಂಬುವಿಗೆ ತೆರಳಿದ ಪ್ರಮುಖರು ಬೊತ್ತ್ ಬಳ್ಳಿ ಎಂದು ಕರೆಯಲಾಗುವ ಗಿಡಮೂಲಿಕೆಗಳಿಂದ ಹೆಣೆದಿರುವ ಬೊತ್ತ್ ಕಂಬದಲ್ಲಿ ದೋಸೆ ಮತ್ತು ಪುಟ್ಟ್ ಇರಿಸಿ ಪ್ರಾರ್ಥಿಸಿದರು.

ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು, ಕಾವೇರಿ ತೀರ್ಥೋದ್ಭವದ ಮರುದಿನ ಹಿರಿಯರಿಗೆ ದೋಸೆ ಮತ್ತು ಪುಟ್ಟ್ ಇಡುವ ಕ್ರಮ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಇದೊಂದು ಜನಪದ ಪದ್ಧತಿ. ಪ್ರತಿ ವರ್ಷ ಕಾವೇರಿ ತೊಲೆಯಾರ್ ಚಂಗ್ರಾಂದಿ ಆಚರಣೆಗೆ ಸಂಬಂಧಿಸಿದಂತೆ ಕೊಡವರು ತಮ್ಮ ಜೌಗು ಪ್ರದೇಶಗಳು, ಬತ್ತದ ಗದ್ದೆಗಳು, ಬತ್ತದ ಖಣಜ (ಬೋಟಿ ಕಳ), ದನದ ಸಗಣಿ ಗುಂಡಿ, ದನದ ಕೊಟ್ಟಿಗೆ, ಕುಡಿಯುವ ನೀರಿನ ಬಾವಿ, ಗೇಟ್‌ಗಳು ಮತ್ತು ಅವರ ವಸತಿ ಗೃಹಗಳ ಮುಂಭಾಗದ ಪ್ರದೇಶದಲ್ಲಿ 2 ಅಥವಾ 3 ದಿನಗಳ ಮೊದಲು ಬೊತ್ತ್ ಕುತ್ತುವುದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ ಎಂದರು.

ತಲಕಾವೇರಿ ತೀರ್ಥಯಾತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬ ಕೊಡವ ಪುರುಷರು ಹಾಗೂ ಮಹಿಳೆಯರು ದೇವಟ್ ಪರಂಬು ನರಮೇಧದ ಸ್ಮಾರಕ ಸ್ಥಳದಲ್ಲಿ ಗೌರವಪೂರ್ವಕವಾಗಿ ಹಸಿರು ಎಲೆಗಳನ್ನು ಅರ್ಪಿಸುತ್ತಾರೆ. ಕೊಡವ ಜನಾಂಗೀಯ ಬುಡಕಟ್ಟು ಜನರು ಈ ಸ್ಥಳವನ್ನು ಅತ್ಯಂತ ಪವಿತ್ರವಾದ ಗರ್ಭಗುಡಿ ಎಂದು ಪರಿಗಣಿಸುತ್ತಾರೆ ಎಂದು ತಿಳಿಸಿದರು.

ಪಟ್ಟಮಾಡ ಕುಶ, ಮಂದಪಂಡ ಮನೋಜ್, ಬೊಳ್ಳಾರ್ಪಂಡ ಚೆಂಗಪ್ಪ, ಮಂದಪಂಡ ಸೂರಜ್, ಮಣವಟ್ಟೀರ ಚಿಣ್ಣಪ್ಪ, ಚೀಯಬೇರ ಸತೀಶ್, ಪುಟ್ಟಿಚಂಡ ದೇವಯ್ಯ, ಬೊಳ್ಳಾರ್ಪಂಡ ಮಾಚಯ್ಯ ಭಾಗವಹಿಸಿದ್ದರು.

Share this article