ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಡೋಲಾಯಮಾನ: ಜಗದೀಶ ಶೆಟ್ಟರ

KannadaprabhaNewsNetwork |  
Published : Oct 21, 2024, 12:34 AM IST
ಸಂಸದ ಜಗದೀಶ ಶೆಟ್ಟರ್‌ | Kannada Prabha

ಸಾರಾಂಶ

ಹಗರಣಗಳ ಬಗ್ಗೆ ಲೋಕಾಯುಕ್ತ, ಇಡಿ ತನಿಖೆ ನಡೆಯುತ್ತಿದೆ, ಆದರೆ ಲೋಕಾಯುಕ್ತ ಸರ್ಕಾರದ ಅಧೀನದಲ್ಲಿರುವುದರಿಂದ ಸಿಎಂ ಅಧಿಕಾರದಲ್ಲಿದ್ದರೆ ಸರಿಯಾದ ತನಿಖೆ ಆಗುವದಿಲ್ಲ

ಲಕ್ಷ್ಮೇಶ್ವರ: ದೇಶದಲ್ಲಿ ಕಾಂಗ್ರೆಸ್ ಡೋಲಾಯಮಾನ ಸ್ಥಿತಿಯಲ್ಲಿದ್ದು, ದಿನದಿಂದ ದಿನಕ್ಕೆ ಕಾಂಗ್ರೆಸ್‌ ಶೋಚನೀಯ ಪರಿಸ್ಥಿಯಲ್ಲಿ ಒದ್ದಾಡುತ್ತಿದೆ, ಅದಕ್ಕೆ ಸೂಕ್ತ ನಾಯಕತ್ವದ ಕೊರತೆ ಇದೆ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಂಡಿದ್ದರೆ, ಅವರನ್ನು ಕೆಳಗಿಳಿಸಲು ಅವರ ಪಕ್ಷದವರೇ ಸನ್ನದ್ಧರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಅವರು ಲಕ್ಷ್ಮೇಶ್ವರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕದಲ್ಲಿ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಇವೆಲ್ಲವು ಆದರೂ ಸಹ ಸಿದ್ದರಾಮಯ್ಯ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹಗರಣಗಳ ಬಗ್ಗೆ ಲೋಕಾಯುಕ್ತ, ಇಡಿ ತನಿಖೆ ನಡೆಯುತ್ತಿದೆ, ಆದರೆ ಲೋಕಾಯುಕ್ತ ಸರ್ಕಾರದ ಅಧೀನದಲ್ಲಿರುವುದರಿಂದ ಸಿಎಂ ಅಧಿಕಾರದಲ್ಲಿದ್ದರೆ ಸರಿಯಾದ ತನಿಖೆ ಆಗುವದಿಲ್ಲ, ಅದಕ್ಕಾಗಿ ಅವರು ರಾಜೀನಾಮ ನೀಡಿ ತನಿಖೆ ಎದುರಿಸಿ ನಿರಪರಾಧಿ ಎಂದು ಸಾಭೀತಾದ ಮೇಲೆ ಮತ್ತೆ ಅವರೇ ಮುಖ್ಯಮಂತ್ರಿಗಳಾಗಲಿ ಎಂದ ಅವರು, ಹಗರಣಗಳ ಸರಮಾಲೆ ಹೊರ ಬೀಳುತ್ತಲೆ ಬಿಜೆಪಿ ರಾಜೀನಾಮೆಗೆ ಒತ್ತಾಯಿಸುತ್ತಿದೆ ಎಂದು ಹೇಳಿದರು. ಕಾಂಗ್ರೆಸ್‌ನವರು ಸಿದ್ದರಾಮಯ್ಯನವರಿಗೆ ಬೆಂಬಲ ಸೂಚಿಸುವದಾಗಿ ಹೇಳಿಕೆ ನೀಡುತ್ತಾ ಒಳಗೊಳಗೆ ಮುಖ್ಯಮಂತ್ರಿಯಾಗಲು ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕುಟುಂಬದ ವಿಚಾರವಾಗಿ ಈಗಾಗಲೇ ಅವರು ಸ್ಪಷ್ಟನೆ ನೀಡಿದ್ದಾರೆ, ಅದು ತನಿಖೆಯ ನಂತರ ಸತ್ಯಾಸತ್ಯತೆ ಹೊರಬೀಳಲಿದೆ ಎಂದ ಅವರು, ಶಿರಹಟ್ಟಿ ಕ್ಷೇತ್ರ ಮಾಜಿ ಶಾಸಕ ರಾಮಣ್ಣ ಲಮಾಣಿ ಮತ್ತೇ ಬಿಜೆಪಿ ಪಾಳಯಕ್ಕೆ ಬರುವ ಸೂಚನೆಗಳಿವೆಯೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ಅವರು ನಮ್ಮ ಹಳೆಯ ಸ್ನೇಹಿತರು, ಇಲ್ಲಿಗೆ ಬಂದಿರುವ ವಿಷಯ ತಿಳಿದು ಬಂದು ಸ್ವಾಗತಿಸಿದ್ದಾರೆ, ಪಕ್ಷಕ್ಕೆ ಸೇರ್ಪಡೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ, ಮುಂದಿನ ದಿನಗಳಲ್ಲಿ ನೋಡೋಣ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮುಖಂಡರಾದ ಎಂ.ಎಸ್. ದೊಡ್ಡಗೌಡ್ರ, ಸುನೀಲ ಮಹಾಂತಶೆಟ್ಟರ್‌, ನಿಂಬಣ್ಣ ಮಡಿವಾಳರ, ನವೀನ ಬೆಳ್ಳಟ್ಟಿ, ದುಂಡೇಶ ಕೊಟಗಿ, ಗಂಗಾಧರ ಮೆಣಸಿನಕಾಯಿ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಭ್ರಷ್ಟಾಚಾರದ ಕೂಪವಿದ್ದಂತೆ
ದೇಶ ಉಳಿಯಲು ಎಲ್ಲ ಹಿಂದೂಗಳು ಗಟ್ಟಿಯಾಗಿ