ರಾಜ್ಯ ಮರು ಸಂಘಟನೆ ಆಯೋಗ ರಚನೆಗೆ ಒತ್ತಾಯಿಸಿ ಸಿಎನ್‌ಸಿ ಧರಣಿ ಸತ್ಯಾಗ್ರಹ

KannadaprabhaNewsNetwork |  
Published : Nov 02, 2023, 01:00 AM IST
ಚಿತ್ರ : 1ಎಮಡಿಕೆ6 : ಜಿಲ್ಲಾಧಿಕಾರಿ ಕಚೇರಿ ಎದುರು ಸಿಎನ್‌ಸಿ ಧರಣಿ ಸತ್ಯಾಗ್ರಹ ನಡೆಸಲಾಯಿತು.  | Kannada Prabha

ಸಾರಾಂಶ

ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತತ್ತೆ ಬೇಡಿಕೆಯನ್ವಯ 2ನೇ ರಾಜ್ಯ ಮರು ಸಂಘಟನೆ ಆಯೋಗ ರಚಿಸಬೇಕೆಂದು ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ ರಾಜ್ಯಗಳ ಮರು-ಸಂಘಟನಾ ಕಾಯ್ದೆ 1956ರ ಒಪ್ಪಂದಗಳಿಗೆ ಕರ್ನಾಟಕ ರಾಜ್ಯ ಬದ್ಧವಾಗಿಲ್ಲ, ಇದರಿಂದ ಕೊಡವರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕನ್ನಡ ರಾಜ್ಯೋತ್ಸವದ ದಿನವಾದ ಬುಧವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತತ್ತೆ ಬೇಡಿಕೆಯನ್ವಯ 2ನೇ ರಾಜ್ಯ ಮರು ಸಂಘಟನೆ ಆಯೋಗ ರಚಿಸಬೇಕೆಂದು ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು. ಜಿಲ್ಲಾಡಳಿತದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ 9 ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದ ಅವರು ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಲ್ಲಿಸಿ ಕೊಡವ ಲ್ಯಾಂಡ್ ಪರವಾಗಿ ಆಯೋಗವನ್ನು ರಚಿಸಬೇಕೆಂದು ಪ್ರತಿಪಾದಿಸಿದ್ದಾರೆ. ಸರ್ಕಾರಗಳು ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ನೀಡಬೇಕೆಂದು ಆಗ್ರಹಿಸಿದರು. ನಾಲ್ನಾಡಿನ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿನ ಅರಮನೆಯ ಸಂಚಿನಲ್ಲಿನ ರಾಜಕೀಯ ಹತ್ಯೆಗಳ ಸ್ಮಾರಕಗಳು, ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಳಿ ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಯುದ್ಧ ಸ್ಮಾರಕಗಳು, ದೇವಟ್ ಪರಂಬುವಿನಲ್ಲಿ ಅಂತಾರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕಗಳನ್ನು ನಿರ್ಮಿಸಬೇಕು. ಎರಡೂ ದುರಂತಗಳನ್ನು ಯುಎನ್‌ಒ ಹತ್ಯಾಕಾಂಡದ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು. ಕಲಿಯಂಡ ಪ್ರಕಾಶ್, ಕಲಿಯಂಡ ಮೀನಾ ಪ್ರಕಾಶ್, ಬೊಟ್ಟಂಗಡ ಸವಿತ ಗಿರೀಶ್, ಲೆ.ಕ.ಬಿ.ಎಂ.ಪಾರ್ವತಿ, ಪಟ್ಟಮಾಡ ಲಲಿತ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಕೂಪದಿರ ಪುಷ್ಪ ಮುತ್ತಣ್ಣ, ಚಂಬಂಡ ಜನತ್, ಅರೆಯಡ ಗಿರೀಶ್, ಕಾಂಡೆರ ಸುರೇಶ್, ಬೇಪಡಿಯಂಡ ದಿನು ಮತ್ತಿತರರು ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ