-ಶೈಕ್ಷಣಿಕ ಸಾಲಿನ ರಾಜ್ಯ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆ ಉದ್ಘಾಟಿಸಿದ ಚನ್ನಬಸಪ್ಪ
----ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಪರಿಣಾಮಕಾರಿ ಬೋಧಿಸಲು ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳು ಸಹಕಾರಿ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ಮಾಚೇನಹಳ್ಳಿಯ ಸೀಮಾ ಆಂಗ್ಲ ಶಾಲೆಯಲ್ಲಿ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಜಿಲ್ಲಾಡಳಿತ, ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗ ಹಾಗೂ ಸೀಮಾ ಆಂಗ್ಲಶಾಲೆ ಮಾಚೇನಹಳ್ಳಿ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ರಸಕ್ತ ಶೈಕ್ಷಣಿಕ ಸಾಲಿನ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದ ಸಮಾಜ ನಿರ್ಮಾತೃಗಳನ್ನು ರೂಪಿಸುವ ಶಿಕ್ಷಕರ ಕಾರ್ಯ ಸ್ಮರಣೀಯ ಎಂದ ಅವರು, ಶಿಕ್ಷಕರು ಪಠ್ಯಕ್ಕೆ ಸಹಕಾರಿಯಾಗುವ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಶಿಕ್ಷಕರಲ್ಲಿ ಪರಿಣಾಮಕಾರಿ ಬೋಧನಾ ವಿಧಾನಗಳನ್ನು ಅರಿಯಲಿದ್ದಾರೆ. ತರಗತಿಗಳಲ್ಲಿ ಹಲವು ಪ್ರಕಾರಗಳಲ್ಲಿ ಮಕ್ಕಳನ್ನು ಕಲಿಕೆಗೆ ತೊಡಗಿಸಲು ಪ್ರೇರೇಪಿಸಬಹುದಾಗಿದೆ ಎಂದರು.ಮಕ್ಕಳ ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸುವ ಶಿಕ್ಷಕರು ಸದಾ ಕಲಿಕಾರ್ಥಿಯಾಗಿದ್ದು, ನವನವೀನವಾದುದನ್ನು ಅರಿಯುವ, ಅರಿತಿದ್ದನ್ನು ಮಕ್ಕಳಿಗೆ ತಿಳಿಸಿ, ಕಲಿಕೆ ಮುಂದುವರೆಸುವ ಕ್ರಿಯಾಶೀಲತೆ ಅತ್ಯಗತ್ಯವಾದುದಾಗಿದೆ. ತರಗತಿಗೆ ಬೋಧನೆಗೆ ತೆರಳುವ ಶಿಕ್ಷಕರು ಬೋಧಿಸುವ ಪಠ್ಯವಿಷಯವನ್ನು ಸರಳವಾಗಿ ಮಕ್ಕಳಿಗೆ ಕಲಿಸುವ ಬಗ್ಗೆ, ಅರ್ಥೈಸುವ ಹಲವು ವಿಧಾನಗಳ ಬಗ್ಗೆ ಅರಿತಿರಬೇಕು. ಈ ಹಂತದಲ್ಲಿ ಸರ್ಕಾರಗಳು, ಇಲಾಖೆಗಳ ಮುಖ್ಯ ಅಧಿಕಾರಿಗಳು ಅಗತ್ಯ ಸಹಕಾರ, ಆರ್ಥಿಕ ನೆರವು ಒದಗಿಸಬೇಕು ಎಂದು ಹೇಳಿದರು.
ಈ ಕಲಿಕಾ ಅವಧಿಯಲ್ಲಿ ಮಕ್ಕಳಲ್ಲಿರುವಂತೆ ಶಿಕ್ಷಕರಲ್ಲೂ ಸ್ಪರ್ಧಾ ಮನೋಭಾವ ಇರಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರೂ ವಿಜೇತರಾಗುವುದು ಸಾಧ್ಯವಿಲ್ಲ. ಆದರೂ, ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಬಹು ಪ್ರಮುಖ. ಇದು ಶಿಕ್ಷಕರ ಮತ್ತು ಮಕ್ಕಳ ಸೃಜನಶೀಲತೆಗೆ ಸಹಕಾರಿ. ಈ ಕಲಿಕೆ ನಿರಂತರವಾಗಿದ್ದಾಗ ಸಹಜವಾಗಿ ಕಲಿಕಾರ್ಥಿಗಳೆಲ್ಲರಲ್ಲೂ ಪಕ್ವತೆ ಕಾಣಬಹುದಾಗಿದೆ ಎಂದು ಹೇಳಿದರು.ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕಿ ಕೆ.ಆರ್. ಬಿಂಬಾ , ಡಿಡಿಪಿಐ ಎಸ್.ಆರ್.ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ನಾಗೇಂದ್ರಪ್ಪ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ, ಪ್ರಕಾಶ್, ಧರ್ಮಪ್ಪ, ಸೀಮಾ ಆಂಗ್ಲಶಾಲೆಯ ವ್ಯವಸ್ಥಾಪಕ ನಿರ್ದೇಶಕ ಜಗನ್ನಾಥರಾವ್ ಬೊಂಗಾಳೆ ಇದ್ದರು.
---------------------ಪೋಟೋ: ಶಿವಮೊಗ್ಗದ ಹೊರವಲಯದಲ್ಲಿರುವ ಮಾಚೇನಹಳ್ಳಿಯ ಸೀಮಾ ಆಂಗ್ಲಶಾಲೆಯಲ್ಲಿ ಏರ್ಪಡಿಸಿದ್ದ ಪ್ರಸಕ್ತ ಶೈಕ್ಷಣಿಕ ಸಾಲಿನ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು.
26ಎಸ್‌ಎಂಜಿಕೆಪಿ03