ವೀರಶೈವ ಲಿಂಗಾಯಿತ ನೌಕರರ ಸಂಘದ ರಜತ ಮಹೋತ್ಸವ । ಗುರಿಯೊಂದಿಗೆ ಮುನ್ನಡೆದರೆ ಯಶಸ್ಸು
ಕನ್ನಡಪ್ರಭ ವಾರ್ತೆ ಚಾಮರಾಜನಗರಜೀವನದಲ್ಲಿ ಇರುವವರೆಗೆ ಸಹಕಾರದಿಂದ ಜೊತೆಯಾಗಿ ಬಾಳುವುದೇ ಜೀವನದ ಸಮೀಕರಣ ಎಂದು ಮೈಸೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ಅಧ್ಯಯನ ವಿಭಾಗದ ಪ್ರಾದ್ಯಾಪಕ ಡಾ.ಡಿ.ಎಸ್. ಗುರು ಹೇಳಿದರು.
ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘವು ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಜನನ-ಮರಣಗಳ ನಡುವೆ ಪರಸ್ಪರ ಸಹಕಾರದಿಂದ ಇನ್ನೊಬ್ಬರನ್ನು ಅರಿತು ಸೇವಾ ಮನೋಭಾವನೆ ತೋರುವುದೇ ನಿಜವಾದ ಜೀವನ ಎಂದು ಅಭಿಪ್ರಾಯಪಟ್ಟರು.ಹುಟ್ಟುವಾಗಲೂ ಒಂಟಿ, ಮರಣ ಹೊಂದಿದಾಗಲು ಒಂಟಿ ಈ ನಡುವೆ ನಾವು ನಡೆಸುವ ಜೀವನದಲ್ಲಿ ಒಬ್ಬರನ್ನೊಬ್ಬರು ಅರಿತು ಸಹಕಾರದಿಂದ ಸೇವೆಯನ್ನು ಮಾಡಿದಾಗ, ಉತ್ತಮ ಜೀವನದೊಂದಿಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಬಹುದು ಎಂದು ಹೇಳಿದರು.
ಈ ನಿಟ್ಟಿನಲ್ಲಿ ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘವು ಕಳೆದ ೨೫ ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಧಾರ್ಮಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.ವಿದ್ಯಾರ್ಥಿ ಜೀವನದಲ್ಲಿ ವಿಜ್ಞಾನ, ಜ್ಞಾನ, ಸುಜ್ಞಾನ ಅಳವಡಿಸಿಕೊಂಡು ದೊಡ್ಡ ಕನಸು ಕಂಡು, ಗುರಿಯೊಂದಿಗೆ ಮುನ್ನಡೆದರೆ ಯಶಸ್ಸು ಖಂಡಿತ ಎಂದು ಕಿವಿಮಾತು ಹೇಳಿದರು.
ವಿಜ್ಞಾನ ಮುಂದುವರಿದಂತೆ ಹಲವು ಸೌಲಭ್ಯಗಳ ಜೊತೆ ಅನಾನುಕೂಲ ಆಗುತ್ತವೆ. ನಿಮ್ಮ ಜ್ಞಾನ ಕೇವಲ ಅಂಕಗಳಿಗೆ ಸೀಮಿತವಾಗಬಾರದು, ಮೊಬೈಲ್ ಬಳಕೆ ಸೀಮಿತ ಮತ್ತು ಒಳ್ಳೆಯ ಜ್ಞಾನಕ್ಕೆ ಬಳಕೆಯಾಗಬೇಕು ಎಂದರು.ಮರಿಯಾಲದ ಮುರುಘಾರಾಜೇಂದ್ರ ಸ್ವಾಮೀಜಿ, ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಸಂಘವೂ ಮುಂದೆಯೂ ಶರಣರ ತತ್ವಗಳನ್ನು ಅಳವಡಿಸಿಕೊಂಡು ಉತ್ತಮವಾದ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಂಡು ಸುವರ್ಣ ಮಹೋತ್ಸವ ಆಚರಿಸುವಂತಾಗಲಿ ಎಂದು ಆಶಿಸಿದರು.
ವರ್ಷಪೂರ್ತಿ ಸಮಾಜಮುಖಿ ಕಾರ್ಯಕ್ರಮ:ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ಶ್ರೀಗಳ ಆಶೀರ್ವಾದ ಹಿರಿಯರು ಸಂಘ ಕಟ್ಟಿ ನೀಡಿದ ಮಾರ್ಗದರ್ಶನದಿಂದಾಗಿ ಇಂದು ಸಂಘವು ಬೆಳೆದು ನಿಂತಿದ್ದು ೨೫ ವರ್ಷಗಳ ಬೆಳ್ಳಿ ಸಂಭ್ರಮವನ್ನು ಆಚರಿಸುತ್ತಿದೆ ಎಂದರು.
ವರ್ಷಪೂರ್ತಿ, ಸಂಘ ಸಂಸ್ಥೆಗಳೊಡಗೂಡಿ ರಕ್ತದಾನ ಶಿಬಿರ, ಅರೋಗ್ಯ ಶಿಬಿರ, ಧರ್ಮ ಜಾಗೃತಿ, ೨೫ ಊರುಗಳಲ್ಲಿ ಶರಣ ಚಿಂತನಾ ಕಾರ್ಯಕ್ರಮಗಳು ಸೇರಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ಜಂಟಿ ಕ್ರಿಯಾಸಮಿತಿ ಅಧ್ಯಕ್ಷ ದುಂಡಮಾದಪ್ಪ, ಬಸವೇಶ್ವರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಎಂ, ಗೌರಿಶಂಕರ್, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಮುದ್ದು ಬಸವಣ್ಣ ಮಾತನಾಡಿದರು.
ನಿವೃತ್ತ ನೌಕರರು, ವಿವಿಧ ಸಂಘ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಸಮಾಜದ ಬಂಧುಗಳು ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.ಕೆ.ಎಸ್. ಮಹದೇವಸ್ವಾಮಿ ಪ್ರಾಸ್ತಾವಿಸಿ, ಪ್ರಧಾನ ಕಾರ್ಯದರ್ಶಿ ಅರ್ಕಪ್ಪ, ಪ್ರಮೀಳಾ ನಿರೂಪಿಸಿದರು. ಮೂರು ಸಂಘದ ಪದಾಧಿಕಾರಿಗಳು, ಸದಸ್ಯರು, ಸಮಾಜದ ಬಂಧುಗಳು ಇದ್ದರು.